ಮುಸ್ಲಿಮ್ ನಿಷೇಧಕ್ಕೆ ಅಮೆರಿಕ ವಿವಿಗಳ ವಿರೋಧ

Update: 2017-01-30 16:04 GMT

ಬಾಸ್ಟನ್, ಜ. 30: ಏಳು ಮುಸ್ಲಿಮ್ ದೇಶಗಳ ನಿವಾಸಿಗಳ ಅಮೆರಿಕ ಪ್ರಯಾಣಕ್ಕೆ ತಡೆ ವಿಧಿಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಆದೇಶಕ್ಕೆ ಅಮೆರಿಕದ ಡಝನ್‌ಗಟ್ಟಳೆ ಕಾಲೇಜುಗಳು ವಿರೋಧ ವ್ಯಕ್ತಪಡಿಸಿವೆ.

ಈ ಆದೇಶದ ಹಿನ್ನೆಲೆಯಲ್ಲಿ, ಹಲವು ವಿದ್ಯಾರ್ಥಿಗಳು ಮತ್ತು ಪ್ರೊಫೆಸರ್‌ಗಳು ವಿದೇಶಗಳಲ್ಲೇ ಬಾಕಿಯಾಗಿದ್ದಾರೆ.

ಮುಸ್ಲಿಮ್ ದೇಶಗಳಿಂದ ಬರುವ ಜನರ ಮೇಲೆ ವಿಧಿಸಲಾಗಿರುವ ನಿಷೇಧವನ್ನು ಹಲವು ವಿಶ್ವವಿದ್ಯಾನಿಲಯಗಳ ಅಧ್ಯಕ್ಷರು ರವಿವಾರ ಖಂಡಿಸಿದ್ದಾರೆ. ಈ ಆದೇಶವು ತಮ್ಮ ವಿದ್ಯಾರ್ಥಿಗಳ ಸಂಶೋಧನೆ ಮತ್ತು ಶೈಕ್ಷಣಿ ಚಟುವಟಿಕೆಗಳಿಗೆ ಅಡಚಣೆಯುಂಟುಮಾಡಿದೆ ಎಂದು ಕೆಲವು ವಿಶ್ವವಿದ್ಯಾನಿಲಯಗಳ ಮುಖ್ಯಸ್ಥರು ಹೇಳಿದರೆ, ಕಾನೂನು ಪ್ರಕಾರ ಸಾಧ್ಯವಾಗುವಷ್ಟರ ಮಟ್ಟಿಗೆ ತಾವು ನಿಷೇಧವನ್ನು ಉಲ್ಲಂಘಿಸುವುದಾಗಿ ಕೆಲವರು ಎಚ್ಚರಿಸಿದ್ದಾರೆ.

ಆದೇಶವನ್ನು ಹಿಂದಕ್ಕೆ ಪಡೆಯಿರಿ, ಇಲ್ಲದಿದ್ದರೆ ಅದು ಶ್ರೇಷ್ಠ ವಿದ್ವಾಂಸರನ್ನು ಅಮೆರಿಕದ ಜೊತೆ ಸ್ಪರ್ಧಿಸುತ್ತಿರುವ ದೇಶಗಳತ್ತ ತಳ್ಳಲಿದೆ ಎಂಬುದಾಗಿ 62 ವಿಶ್ವವಿದ್ಯಾಲಯಗಳನ್ನು ಪ್ರತಿನಿಧಿಸುವ ಅಮೆರಿಕನ್ ವಿಶ್ವವಿದ್ಯಾನಿಲಯಗಳ ಸಂಘ ಟ್ರಂಪ್‌ರನ್ನು ಒತ್ತಾಯಿಸಿದೆ.

ಟ್ರಂಪ್ ಆದೇಶವು ‘ಕೆಟ್ಟ ಕಲ್ಪನೆಯಾಗಿದೆ ಹಾಗೂ ಅದನ್ನು ಕಳಪೆ ರೀತಿಯಲ್ಲಿ ಜಾರಿಗೊಳಿಸಲಾಗಿದೆ’ ಎಂದು ಪರ್ಡೂ ವಿಶ್ವವಿದ್ಯಾನಿಲಯದ ಅಧ್ಯಕ್ಷ ಹಾಗೂ ಇಂಡಿಯಾನದ ಮಾಜಿ ರಿಪಬ್ಲಿಕನ್ ಗವರ್ನರ್ ಮಿಚ್ ಡೇನಿಯಲನ್ಸ್ ಬಣ್ಣಿಸಿದ್ದಾರೆ ಹಾಗೂ ಅದನ್ನು ಹಿಂದಕ್ಕೆ ಪಡೆದುಕೊಳ್ಳುವಂತೆ ಟ್ರಂಪ್‌ರನ್ನು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News