ಸೌಹಾರ್ದದ ದೇಶ ಕಟ್ಟಲು ಶ್ರಮಿಸೋಣ: ಬಿಷಪ್ ಲಾರೆನ್ಸ್ ಮುಕ್ಕುಯಿ
ಬೆಳ್ತಂಗಡಿ, ಜ.30: ಭಾರತದ ಜನತೆಯ ನಾಡಿ ಮಿಡಿತವನ್ನು ಅರಿತಿದ್ದ ಗಾಂಧೀಜಿ ದೇಶವನ್ನು ಶಾಂತಿ ಸೌಹಾರ್ದದ ಮೇಲೆ ಹೇಗೆ ಕಟ್ಟಬೇಕು ಎಂಬ ಕಲ್ಪನೆಯನ್ನು ಇಟ್ಟುಕೊಂಡು ದೇಶವನ್ನು ಮುನ್ನಡೆಸಿದವರಾಗಿದ್ದಾರೆ ಎಂದು ಬೆಳ್ತಂಗಡಿ ಕ್ರೈಸ್ತ ಧರ್ಮಪ್ರಾಂತದ ಧರ್ಮಾಧ್ಯಕ್ಷ ಬಿಷಪ್ ಲಾರೆನ್ಸ್ ಮುಕ್ಕುಯಿ ಹೇಳಿದರು.
ಬೆಳ್ತಂಗಡಿಯ ಅಂಬೇಡ್ಕರ್ ಭವನದಲ್ಲಿ ಸೌಹಾರ್ದ ವೇದಿಕೆಯ ವತಿಯಿಂದ ಗಾಂಧಿ ಹುತಾತ್ಮ ದಿನಾಚರಣೆಯ ಅಂಗವಾಗಿ ಸೋಮವಾರ ನಡೆದ ಶಾಂತಿ ಮತ್ತು ಸೌಹಾರ್ದದ ಸಂದೇಶ ಸಾರುವ ಶಾಂತಿಗಾಗಿ ನಡಿಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶಾಂತಿಗಾಗಿನ ನಡಿಗೆಯನ್ನು ಉದ್ಘಾಟಿಸಿದ ಶಾಸಕ ಕೆ.ವಸಂತ ಬಂಗೇರ ಮಾತನಾಡಿ, ಗಾಂಧಿಯವರು ಮುಂದಿಟ್ಟ ಆದರ್ಶಗಳು ಎಂದೆಂದಿಗೂ ಪ್ರಸ್ತುತವಾಗಿದ್ದು ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು. ಉಜಿರೆ ಎಸ್‌ಡಿಎಂ ಕಾಲೇಜಿನ ಉಪನ್ಯಾಸಕ ಡಾ. ಬಿ.ಎ ಕುಮಾರ ಹೆಗ್ಡೆ ಮುಖ್ಯಭಾಷಣಕಾರರಾಗಿ ಆಗಮಿಸಿ ಮಾತನಾಡಿ, ವೈವಿಧ್ಯತೆಗಳ ನಡುವೆಯೂ ಏಕತೆಯಿಂದ ಮುಂದುವರಿಯುತ್ತಿರುವ ದೇಶದಲ್ಲಿ ನಾನಾರೀತಿಯ ಸಂಘರ್ಷಗಳು ಸೃಷ್ಟಿಯಾಗುತ್ತಿದ್ದು ಗಾಂಧಿಯವರ ಸಂದೇಶಗಳು ಇಂದಿನ ಯುವ ಜನಾಂಗಕ್ಕೆ ತಲುಪಿಸುವ ಅಗತ್ಯವಿದೆ ಎಂದರು.
ಶ್ರೀಧರ ಜಿ ಭಿಡೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವೇದಿಕೆಯಲ್ಲಿ ಹಿರಿಯ ಸ್ವಾತಂತ್ರ ಹೋರಾಟಗಾರ ಭೋಜರಾಜ ಹೆಗ್ಡೆ ಪಡಂಗಡಿ ಉಪಸ್ಥಿತರಿದ್ದರು. ಸೌಹಾದರ್ ವೇದಿಕೆಯ ಕಾರ್ಯದರ್ಶಿ ಬಿ.ವಿಠಲಶೆಟ್ಟಿ ವಂದಿಸಿದರು. ಸಭಾ ಕಾರ್ಯಕ್ರಮದ ಮೊದಲು ಬೆಳ್ತಂಗಡಿ ಸಂತೆ ಕಟ್ಟೆಯಿಂದ ಅಂಬೇಡ್ಕರ್ ಭವನದವರೆಗೆ ನಡೆದ ಶಾಂತಿಗಾಗಿ ನಡಿಗೆ ಕಾರ್ಯಕ್ರಮದಲ್ಲಿ ನೂರಾರು ಜನರು ಭಾಗವಹಿಸಿದ್ದರು.