ಉಡುಪಿಯಲ್ಲಿ ಕೋಮು ಸೌಹಾರ್ದ ದಿನಾಚರಣೆ
ಉಡುಪಿ, ಜ.30: ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಉಡುಪಿ ಜಿಲ್ಲಾ ಘಟಕದ ಆಶ್ರಯದಲ್ಲಿ ಮಹಾತ್ಮ ಗಾಂಧಿ ಹುತಾತ್ಮ ದಿನದ ಸ್ಮರಣಾರ್ಥ ಉಡುಪಿಯ ಸೌಹಾರ್ದದ ಪ್ರತೀಕ ಹಾಜಿ ಅಬ್ದುಲ್ಲಾರ ನೆನಪಿಗಾಗಿ ಕೋಮು ಸೌಹಾರ್ದ ದಿನಾಚರಣೆಯನ್ನು ಸೋಮವಾರ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಗಾಂಧಿ ಪ್ರತಿಮೆಯ ಎದುರು ಹಮ್ಮಿಕೊಳ್ಳಲಾಗಿತ್ತು.
ಸಭೆಯನ್ನುದ್ದೇಶಿಸಿಮಾತನಾಡಿದ ಹೋರಾಟಗಾರ ಡಾ.ಪಿ.ವಿ.ಭಂಡಾರಿ, ಗಾಂಧೀಜಿ 1920ರಲ್ಲಿ ಮಂಗಳೂರಿಗೆ ಹಾಗೂ 1934ರಲ್ಲಿ ಉಡುಪಿಗೆ ಬಂದಾಗ ಅವರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾಜಿ ಅಬ್ದುಲ್ಲಾ ವಹಿಸಿದ್ದರು. ಹಾಜಿ ಅಬ್ದುಲ್ಲಾ ತಮ್ಮ ಜೀವನದಲ್ಲಿ ಗಾಂಧಿಯ ಹಲವು ತತ್ವಗಳನ್ನು ಮೈಗೂಡಿಸಿಕೊಂಡಿದ್ದರು ಎಂದರು.
ಚಿಂತಕ ಪ್ರೊ.ಫಣಿರಾಜ್ ಮಾತನಾಡಿ, ಗಾಂಧೀಜಿಯನ್ನು ದೈಹಿಕವಾಗಿ ಕೊಲೆ ಮಾಡಲಾಗಿದ್ದು, ಸಮಾಜಕ್ಕೆ ಬೇಕಾದ ಅವರ ಆದರ್ಶ, ತತ್ವಗಳನ್ನು ಕೂಡ ಇಂದು ಕೊಲೆ ಮಾಡಲಾಗುತ್ತಿದೆ. ಗಾಂಧೀಜಿ ಕೈಯಲ್ಲಿದ್ದ ಚರಕವನ್ನು ಕಿತ್ತುಗೊಂಡು, ಅವರಿದ್ದ ನೋಟನ್ನು ಅಮಾನ್ಯೀಕರಣ ಮಾಡಿದರು. ಈ ಮೂಲಕ ಅವರ ನಂಬಿಕೆ ಸಿದ್ಧಾಂತವನ್ನು ನಿಧಾನವಾಗಿ ಕೊಲ್ಲ ಲಾಗುತ್ತಿದೆ ಎಂದು ಟೀಕಿಸಿದರು.
ಧರ್ಮಗುರು ರೆ.ಫಾ.ವಿಲಿಯಂ ಮಾರ್ಟಿಸ್ ಮಾತನಾಡಿ, ಇಂದಿನ ಪರಿಸ್ಥಿತಿಯನ್ನು ಅವಲೋಕಿಸುವಾಗ ಮುಂದೆ ಗಾಂಧಿಯ ಬದಲು ನಾಥೂರಾಮ್ ಗೋಡ್ಸೆಯುಗ ಬರಬಹುದು. ಈಗಾಗಲೇ ಗೋಡ್ಸೆ ಹೆಸರಿನಲ್ಲಿ ದೇವಸ್ಥಾನ ನಿರ್ಮಿಸುವ ಘೋಷಣೆಗಳಾಗಿವೆ. ಇನ್ನೊಂದೆಡೆ ಗಾಂಧಿಯನ್ನು ಎಲ್ಲ ಕ್ಷೇತ್ರಗಳಿಂದ ಕಿತ್ತು ಎಸೆಯಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ಸಂದರ್ಭ ವೇದಿಕೆಯ ಜಿಲ್ಲಾಧ್ಯಕ್ಷ ಜಿ.ರಾಜಶೇಖರ್, ಪ್ರೊ.ಸಿರಿಲ್ ಮಥಾಯಿಸ್, ಪ್ರೊ.ಶ್ರೀಕುಮಾರ್, ವಾಸು ನೇಜಾರು, ಹುಸೈನ್ ಕೋಡಿಬೆಂಗ್ರೆ, ಲೂಯಿಸ್ ಲೋಬೊ, ಶಶಿಧರ್ ಹೆಮ್ಮಾಡಿ, ಸಂವರ್ತ್ ಸಾಹಿಲ್, ಯಾಸೀನ್ ಮೊದಲಾದವರು ಉಪಸ್ಥಿತರಿದ್ದರು.
15 ದಿನಗಳೊಳಗೆ ಕೋರ್ಟ್‌ನಲ್ಲಿ ದಾೆ
ಹಾಜಿ ಅಬ್ದುಲ್ಲಾರು ದಾನವಾಗಿ ನೀಡಿರುವ ಉಡುಪಿ ಸರಕಾರಿ ಆಸ್ಪತ್ರೆಗೆ ಸಂಬಂಧಿಸಿದ ಎಲ್ಲ ದಾಖಲೆಗಳು ಲಭ್ಯವಾಗಿದ್ದು, ಆಸ್ಪತ್ರೆಯನ್ನು ಖಾಸಗಿ ಅವರಿಗೆ ಒಪ್ಪಿಸುವುದರ ವಿರುದ್ಧ 15ದಿನಗೊಳಗೆ ನ್ಯಾಯಾಲಯದ ಮೆಟ್ಟಿಲು ಏರಲಾಗುವುದು. ಈ ಬಗ್ಗೆ ಮಾತುಕತೆ ನಡೆಸಲಾಗುತ್ತಿದೆ.
ಈ ಜಾಗವನ್ನು ಹಾಜಿ ಅಬ್ದುಲ್ಲಾರಿಂದ ಹಣ ನೀಡಿ ಪಡೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹಾಗೂ ರಾಜಕಾರಣಿಗಳು ಹಸಿಹಸಿ ಸುಳ್ಳುಗಳನ್ನು ಹೇಳುತ್ತಿದ್ದಾರೆ. ನಮಗೆ ದೊರೆತ ದಾಖಲೆ ಪ್ರಕಾರ ಹಾಜಿ ಅಬ್ದುಲ್ಲಾರು ಒಂದು ನಯಾ ಪೈಸೆ ಪಡೆದುಕೊಳ್ಳದೆ ಈ ಜಾಗವನ್ನು ಸರಕಾರಕ್ಕೆ ದಾನವಾಗಿ ನೀಡಿದ್ದಾರೆ.
<
ಡಾ.ಪಿ.ವಿ.ಭಂಡಾರಿ, ಅಧ್ಯಕ್ಷರು ಆಸ್ಪತ್ರೆ ಹೋರಾಟ ಸಮಿತಿ