ಹುಸಿ ಬಾಂಬ್ ಸುದ್ದಿಗೆ ಬೆಚ್ಚಿಬಿದ್ದ ಕುಂದಾಪುರ

Update: 2017-01-30 18:28 GMT

ಕುಂದಾಪುರ, ಜ.30: ನಾವುಂದ ಸಮೀಪದ ಬಡಾಕೆರೆಯ ಶ್ರೀಲಕ್ಷಿ್ಮೀ ಜನಾರ್ದನ ದೇವಸ್ಥಾನದ ಬಳಿ ಸೋಮವಾರ ಬೆಳಗ್ಗೆ ಬಾಂಬ್ ಸ್ಪೋಟಗೊಂಡಿರುವ ಸುದ್ದಿ ಇಡೀ ಕುಂದಾಪುರವನ್ನು ಕೆಲಕಾಲ ಬೆಚ್ಚಿಬೀಳಿಸಿದ ಘಟನೆ ನಡೆಯಿತು.

ದೇವಸ್ಥಾನದಲ್ಲಿ ನಾಲ್ಕೆದು ದಿನಗಳಿಂದ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ರವಿವಾರ ರಾತ್ರಿ ಸುಡುಮದ್ದು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಇದರಿಂದ ಉಂಟಾದ ಕಸದ ರಾಶಿಯನ್ನು ಸೋಮವಾರ ಬೆಳಗ್ಗೆ ಮಹಿಳೆಯರು ಗುಡಿಸಿ ಒಟ್ಟು ಮಾಡಿ ಬೆಂಕಿ ಹಚ್ಚಿದ್ದರು. ಈ ವೇಳೆ ಕಸದ ರಾಶಿ ಮಧ್ಯೆ ವಸ್ತುವೊಂದು ಸ್ಪೋಟಗೊಂಡು ಭಾರೀ ಶಬ್ದ ಉಂಟು ಮಾಡಿತು.

ಇದರ ಪರಿಣಾಮ ಸಮೀಪದಲ್ಲೇ ಇದ್ದ ನಾಲ್ಕೆದು ಟ್ಯೂಬ್‌ಲೈಟ್‌ಗಳು ಹಾನಿಗೊಂಡವು. ಅಲ್ಲದೆ ಮಹಿಳೆಯರು ಆತಂಕಕ್ಕೀಡಾಗಿ ಅಲ್ಲಿಂದ ಓಡಿ ಹೋದರು. ಈ ಸುದ್ದಿ ಇಡೀ ಕುಂದಾಪುರ ತಾಲೂಕಿನಾದ್ಯಂತ ಹರಡಿ, ಬಾಂಬ್ ಸ್ಪೋಟಗೊಂಡಿದೆ ಎಂಬ ಸುಳ್ಳು ಸುದ್ದಿ ಇಡೀ ಪರಿಸರದಲ್ಲಿ ಆತಂಕಕ್ಕೆ ಕಾರಣವಾಯಿತು.

 ಬಳಿಕ ಸ್ಥಳಕ್ಕೆ ಆಗಮಿಸಿದ ಬೈಂದೂರು ಪೊಲೀಸರು ಹಾಗೂ ಅಗ್ನಿಶಾಮಕದಳದವರು ಪರಿಶೀಲಿಸಿದಾಗ ಸ್ಪೋಟಗೊಂಡಿರುವುದು ಐಸ್‌ಕ್ರೀಂ ಬಾಲ್ ಒಳಗೆ ಇರಿಸಿದ್ದ ಪಟಾಕಿಯೇ ಹೊರತು ಬಾಂಬ್ ಅಲ್ಲ ಎಂಬುದು ತಿಳಿದು ಬಂತು. ಸುಡುಮದ್ದು ಪ್ರದರ್ಶನದಲ್ಲಿ ಸಿಡಿಯದೆ ಇದ್ದ ಪಟಾಕಿ ಕಸದ ರಾಶಿಯಲ್ಲಿ ಉಳಿದುಕೊಂಡಿತು. ಇದಕ್ಕೆ ಬೆಂಕಿ ಹಚ್ಚುವಾಗ ಪಟಾಕಿ ಸ್ಪೋಟಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News