ಪ್ರಾಮಾಣಿಕ ಪ್ರಯತ್ನ, ಶಿಸ್ತುಬದ್ಧ ಯೋಜನೆಯಿಂದ ಯಶಸ್ಸು ಸಾಧ್ಯ: ನಾಗರಾಜ ಶೆಟ್ಟಿ

Update: 2017-01-30 18:31 GMT

ಮೂಡುಬಿದಿರೆ, ಜ.30: ಕ್ರೀಡೆಯಲ್ಲಿ ಜಾಗತಿಕವಾಗಿ ಭಾರತ ಪ್ರಥಮ ಸ್ಥಾನಿ ಯಾಗಬೇಕೆಂಬ ಪ್ರಧಾನಿಯವರ ಕನಸನ್ನು ನನಸು ಮಾಡುವಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡಬೇಕಿದೆ. ಸೂಕ್ತವಾದ ತರಬೇತಿ, ಶಿಸ್ತು ಇವೆರಡು ಕ್ರೀಡಾ ಕ್ಷೇತ್ರದಲ್ಲಿ ಜಾಗತಿಕವಾಗಿ ನಾವು ಮುಂದೆ ಬರುವುದಕ್ಕಿರುವ ಅವಕಾಶಗಳು. ಇದನ್ನರಿತು ಕೇಂದ್ರ ಸರಕಾರದಿಂದ ಪ್ರಧಾನಿ ಯವರು ದೇಶದಲ್ಲಿ ಸೂಕ್ತ ಕ್ರೀಡಾಳುಗಳನ್ನು ಆಯ್ಕೆಗೊಳಿಸುವ ಹಾಗೂ ಅವರಿಗೆ ತರಬೇತಿ ನೀಡುವ ಬಗ್ಗೆ ಯೋಜನೆ ರೂಪಿಸಿದ್ದಾರೆ ಎಂದು ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಹೇಳಿದರು. 

ಅವರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ, ರಾಷ್ಟ್ರೀಯ ಯುವ ಸಹಕಾರಿ ಸಂಸ್ಥೆಯಿಂದ ಹಮ್ಮಿಕೊಳ್ಳಲಾಗಿರುವ 2 ದಿನಗಳ 2020 ಹಾಗೂ 2024ರ ಒಲಂಪಿಕ್‌ಗೆ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆಗೆ ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ಸೋಮವಾರ ಸಂಜೆ ಚಾಲನೆ ನೀಡಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ನ್ಯಾಶನಲ್ ಯುವ ಕೊ-ಆಪರೆಟಿವ್ ಅದ್ಯಕ್ಷ ರಾಜೇಶ್ ಬಾಬುಲಾಲ್ ಪಾಂಡೆ ಮಾತನಾಡಿ, ಯುವಕರಿಗೆ ಶಕ್ತಿ ತುಂಬುವುದೆಂದರೆ ಅದು ರಾಷ್ಟ್ರಕ್ಕೆ ಶಕ್ತಿ ತುಂಬಿದಂತೆ. ಕ್ರೀಡಾಕ್ಷೇತ್ರಕ್ಕೆ ಮಹತ್ವವನ್ನು ನೀಡಿ ಕ್ರೀಡಾಪಟುಗಳನ್ನು ಆಯ್ಕೆ ಮಾಡುವ ಕಾರ್ಯವನ್ನು ಮಾಡಲಾಗುತ್ತಿದ್ದು, ಇದುವರೆಗೆ ದೇಶದ ವಿವಿಧೆಡೆಗಳಿಂದ 1 ಲಕ್ಷಕ್ಕೂ ಮಿಕ್ಕಿ ವಿದ್ಯಾರ್ಥಿಗಳನ್ನು ಜಿಲ್ಲಾ ಮಟ್ಟಗಳಿಂದ ಆಯ್ಕೆ ಮಾಡಲಾಗಿದೆ.

ಈ ನಿಟ್ಟಿನಲ್ಲಿ ದೇಶದಾದ್ಯಂತ ಹಮ್ಮಿಕೊಳ್ಳಲಾಗಿರುವ ಈ ಬೃಹತ್ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆಯು ಅಂತಿಮ ಹಂತದಲ್ಲಿ ಅತ್ಯುತ್ತಮ ಕ್ರೀಡಾಪಟುಗಳನ್ನು ನೀಡುವ ಭರವಸೆಯನ್ನು ಹೊಂದಿದೆ. ಆಯ್ಕೆಯಾದ ಕ್ರೀಡಾಪಟುಗಳಿಗೆ ಮುಂದಿನ ನಾಲ್ಕು ಅಥವಾ 8 ವರ್ಷಗಳ ಕಾಲ ದೇಶ ವಿದೇಶಗಳಲ್ಲಿ ತರಬೇತಿ ಉಚಿತವಾಗಿರುತ್ತದೆ ಎಂದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಅಮರನಾಥ ಶೆಟ್ಟಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ. ಮೋಹನ ಆಳ್ವ, ಉದ್ಯಮಿ ದೇವಿ ಪ್ರಸಾದ್ ಶೆಟ್ಟಿ, ಗೇಲ್ ಇಂಡಿಯಾದ ದಕ್ಷಿಣ ಭಾರತ ವಲಯದ ಮುಖ್ಯಸ್ಥ ಮಂಗೇಶ್ ಬೆಂಢ್ಕಲೆ, ತಮಿಳುನಾಡು ರಾಜ್ಯ ಸಂಚಾಲಕ ಕತಲಿ ಪೆರುಮಾಳ್, ಕೇರಳ ರಾಜ್ಯ ಸಂಚಾಲಕ ರಾಜೀವ್ ಉಪಸ್ಥಿತರಿದ್ದರು.

ಗೇಲ್ ಇಂಡಿಯಾ ಸ್ಪೀಡ್ ಸ್ಟಾರ್‌ನ ಕರ್ನಾಟಕ ರಾಜ್ಯ ಸಂಯೋಜಕ ರಮೇಶ್ ಕೆ. ಸ್ವಾಗತಿಸಿದರು. ಎಸ್.ಎಸ್. ನೊರೋನ್ಹ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News