×
Ad

ಇನ್ನು ಕುಂದಾಪುರದಿಂದ ಕಾಸರಗೋಡಿಗೆ ತೆರಳಬೇಕಾದರೆ ನಾಲ್ಕು ಕಡೆ ಟೋಲ್ ಪಾವತಿ ಅನಿವಾರ್ಯ!

Update: 2017-01-31 11:48 IST

ಮಂಗಳೂರು, ಜ.31: ಚತುಷ್ಪಥವಾಗಿ ಮೇಲ್ದರ್ಜೆಗೇರಿರುವ, ಕರಾವಳಿಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಜ.31ರ ಮಧ್ಯರಾತ್ರಿಯಿಂದ ಟೋಲ್ ಸಂಗ್ರಹ ಆರಂಭವಾಗಲಿದೆ. ಅದರಂತೆ ತಲಪಾಡಿ, ಹೆಜಮಾಡಿ ಹಾಗೂ ಗುಂಡ್ಮಿ ಟೋಲ್‌ಗೇಟ್‌ಗಳು ಟೋಲ್ ಸಂಗ್ರಹಕ್ಕೆ ಸಿದ್ಧವಾಗಿವೆ.

ಈ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಅಧಿಸೂಚನೆ ಹೊರಡಿಸಿದೆ. ಈ ಹೊಸ ಅಧಿಸೂಚನೆಯಿಂದ ಕುಂದಾಪುರ ಕಡೆಯಿಂದ ಕಾಸರಗೋಡಿಗೆ ತೆರಳುವವರು ಇನ್ನು ನಾಲ್ಕು ಕೇಂದ್ರಗಳಲ್ಲಿ ಸುಂಕ ಪಾವತಿಸಬೇಕಾದ ಅನಿವಾರ್ಯತೆಗೆ ಸಿಲುಕಲಿದ್ದಾರೆ. ಸದ್ಯ ಸುರತ್ಕಲ್ ಸಮೀಪದ ಎನ್‌ಐಟಿಕೆ ಪರಿಸರದಲ್ಲಿ ಒಂದು ಟೋಲ್‌ಗೇಟ್ ಕಾರ್ಯಾಚರಿಸುತ್ತಿದೆ. ಇದೀಗ ಮೂರು ಟೋಲ್‌ಗೇಟ್ ಕಾರ್ಯಾರಂಭಿಸಿದರೂ ಎನ್‌ಐಟಿಕೆ ಬಳಿಯಿರುವ ಟೋಲ್‌ಗೇಟ್ ಅಸ್ತಿತ್ವದಲ್ಲಿರದೆ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

*ಟೋಲ್ ದರ ಹೀಗಿವೆ...

40, 30, 35 ರೂ.
ಕಾರು, ಜೀಪ್, ವ್ಯಾನ್‌ಗಳಿಗೆ ಏಕಮುಖಿ ಸಂಚಾರಕ್ಕೆ ಕ್ರಮವಾಗಿ ಗುಂಡ್ಮಿ, ಹೆಜಮಾಡಿ, ತಲಪಾಡಿಗಳಲ್ಲಿ 40, 30 ಹಾಗೂ 35 ರೂ. ಪಾವತಿಸಬೇಕಾಗುತ್ತದೆ. ದ್ವಿತೀಯ ಸಂಚಾರಕ್ಕೆ ಕ್ರಮವಾಗಿ 60, 45 ಹಾಗೂ 50 ರೂ. ಪಾವತಿಸಬೇಕಾಗುತ್ತದೆ.

*ಬಸ್‌ಗಳು....
ಬಸ್ ಮತ್ತು ಟ್ರಕ್‌ಗಳಿಗೆ ಸಮಾನ ರೀತಿಯ ಸುಂಕ ನಿಗದಿಗೊಳಿಸಲಾಗಿದ್ದು, ಗುಂಡ್ಮಿಯಲ್ಲಿ ಏಕಮುಖ ಸಂಚಾರಕ್ಕೆ 130 ಮತ್ತು ದ್ವಿಮುಖ ಸಂಚಾರಕ್ಕೆ 195 ರೂ. ನಿಗದಿಗೊಳಿಸಲಾಗಿದೆ. ಹೆಜಮಾಡಿಯಲ್ಲಿ 105 ರೂ. (ಏಕಮುಖ) ಮತ್ತು 160 ರೂ. (ದ್ವಿಮುಖ) ಹಾಗೂ ತಲಪಾಡಿಯಲ್ಲಿ 110 ರೂ. (ಏಕಮುಖ) ಹಾಗೂ 165 ರೂ. (ದ್ವಿಮುಖ) ಶುಲ್ಕ ನಿಗದಿಪಡಿಸಲಾಗಿದೆ.

* ಮಾಸಿಕ ಪಾಸ್

ಪ್ರತಿನಿತ್ಯ ಸಂಚರಿಸುವ ವಾಣಿಜ್ಯ ಉದ್ದೇಶದ ವಾಹನಗಳಿಗೆ ಮಾಸಿಕ ಪಾಸ್ ನೀಡಲಾಗುತ್ತದೆ. ಮಾಸಿಕ ಪಾಸ್ ಪಡೆದ ವಾಹನಗಳು ತಿಂಗಳಿಗೆ 50 ಬಾರಿ ನಿಗದಿತ ಟೋಲ್ ಮೂಲಕ ಸಂಚರಿಸಬಹುದು.

*ಸ್ಥಳೀಯರಿಗೆ ವಿಶೇಷ ಪಾಸ್
ಟೋಲ್‌ಗೇಟ್‌ನ 20 ಕಿ.ಮೀ. ವ್ಯಾಪ್ತಿಯಲ್ಲಿ ವಾಸಿಸುವವರು ವಾಣಿಜ್ಯೇತರ ಉದ್ದೇಶಗಳಿಗಾಗಿ ನೋಂದಾಯಿಸಿದ ವಾಹನಗಳಿಗೆ ರಿಯಾಯಿತಿ ದರದ ಪಾಸ್ ನೀಡಲಾಗುತ್ತಿದೆ. ಈ ವಿಶೇಷ ಪಾಸ್‌ಗಳಿಗೆ ಮಾಸಿಕ 235 ರೂ. ಪಾವತಿಸಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News