×
Ad

​ಲಿಂಗತ್ವ ಅಲ್ಪ ಸಂಖ್ಯಾತ ಸಮುದಾಯವನ್ನು ಬದುಕಲು ಬಿಡಿ: ಪ್ರೇಮಾ

Update: 2017-01-31 16:07 IST

ಮಂಗಳೂರು, ಜ.31: ಹುಟ್ಟುತ್ತಾ ಗಂಡಾಗಿ ಹುಟ್ಟಿ ತನ್ನ ಹೆಣ್ಣಿನ ಭಾವನೆಯನ್ನು ತನ್ನ ಮನೆಯಲ್ಲಿ ಹೇಳದ ಪರಿಸ್ಥಿತಿ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ್ದಾಗಿದೆ. ತಮ್ಮನ್ನು ಸಮಾಜದಲ್ಲಿ ಸಾಮಾನ್ಯವಾಗಿ ಬದುಕಲು ಬಿಡುತ್ತಿಲ್ಲವೆಂದು ನವಸಹಜ ಸಮುದಾಯ ಸಂಘಟನೆಯ ಉಪಾಧ್ಯಕ್ಷೆ ಪ್ರೇಮಾ ತಿಳಿಸಿದ್ದಾರೆ.

ಮಂಗಳವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದವರು ಮನೆಯನ್ನು ಬಿಟ್ಟು ಸಮಾಜದಲ್ಲಿ ತನ್ನನ್ನು ತಾನು ತೃತೀಯ ಲಿಂಗಿ ಎಂದು ಗುರುತಿಸಿಕೊಂಡು ಬದುಕಲು ಬಂದರೆ ಈ ಸಮಾಜ ಬಿಡುತ್ತಿಲ್ಲ. ಈ ಸಮುದಾಯಕ್ಕೆ ಸಮಾಜದಲ್ಲಿ ಯಾರೂ ಕೆಲಸವನ್ನು ನೀಡದಿದ್ದಾಗ ಬೇಸತ್ತು ಭಿಕ್ಷಾಟನೆ, ಲೈಂಗಿಕ ವೃತ್ತಿಯನ್ನು ಮಾಡುತ್ತಾ ಜೀವನ ನಡೆಸಲು ಹೊರಟರೆ ಪೊಲೀಸರು ದೌರ್ಜನ್ಯ ನಡೆಸುತ್ತಿದ್ದಾರೆ ಎಂಧು ಆರೋಪಿಸಿದರು.

ತಮ್ಮನ್ನು ತೃತೀಯ ಲಿಂಗಿಯಂತೆ ವೇಷ ಧರಿಸಿ ಹಣವನ್ನು ದೋಚುತ್ತಾರೆ ಎಂದು ಈಗಾಗಲೇ ಪಾಂಡೇಶ್ವರ ಪೊಲೀಸರು ಇಬ್ಬರು ತೃತೀಯ ಲಿಂಗಿಗಳ ವಿರುದ್ಧ ಸುಳ್ಳು ಕೇಸನ್ನು ದಾಖಲಿಸಿಕೊಂಡಿದ್ದಾರೆ ಎಂದು ಆರೋಪಿಸಿ ಅವರು, ಅತ್ತ ಗಂಡಾಗಿ ಹುಟ್ಟಿ ಹೆಣ್ಣಾಗಿ ಬದುಕಬೇಕೆಂಬ ಆಸೆಯನ್ನು ಹೊಂದಿದರೆ ಪೊಲೀಸರು ಸಮುದಾಯದ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಸರಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದು, ನಮ್ಮನ್ನು ಬದುಕಲು ಬಿಡಿ ಎಂದರು.

ಜಿಲ್ಲಾ ಮಟ್ಟದ ಸರಕಾರಿ ಅಧಿಕಾರಿಗಳಿಗೆ ಸಮುದಾಯದ ಸಮಸ್ಯೆಗಳನ್ನು ತಿಳಿಸಿದರೆ ಕೇವಲ ಭರವಸೆಗಳನ್ನು ನೀಡುತ್ತಾರೆಯೇ ಹೊರತು ಯಾವುದೇ ರೀತಿಯ ಸ್ಪಂದನೆ ಇಲ್ಲ. ಬೇರೆ ರಾಜ್ಯದಿಂದ ಬರುವ ತೃತೀಯ ಲಿಂಗಿಗಳು ಸರಕಾರಿ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಆದರೆ ಜಿಲ್ಲೆಯಲ್ಲಿಯೇ ಇರುವ 1,600ಕ್ಕೂ ಹೆಚ್ಚಿನ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದವರು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದು ತಿಳಿಸಿದರು.

ಲಿಂಗತ್ವ ಅಲ್ಪಸಂಖ್ಯಾತ ಸಮುದಾಯವು ಸಮಾಜದಲ್ಲಿದ್ದಾಗ ಕೀಳುಮಟ್ಟದಲ್ಲಿ ಪ್ರತಿಕ್ರಿಯಿಸುತ್ತಾರೆ. ಶಾಲಾ-ಕಾಲೇಜುಗಳಲ್ಲಿ ಶಿಕ್ಷಕರು ಲಿಂಗತ್ವ ಅಲ್ಪ ಸಂಖ್ಯಾತ ಸಮುದಾಯದವರ ಬಗ್ಗೆ ಜಾಗೃತಿಯನ್ನು ಮೂಡಿಸಬೇಕೆಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ನವಸಹಜ ಸಮುದಾಯ ಸಂಘಟನೆಯ ಅಧ್ಯಕ್ಷ ಪ್ರವೀಣ್ ಯಾನೆ ನಿಕೀಲಾ, ಸದಸ್ಯರಾದ ನಿಹಲ್ ಯಾನೆ ನೇಹಾ, ರಾಜೇಶ್ ಯಾನೆ ಶಕೀಲಾ, ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News