ಎಂಎನ್‌ಎಸ್ ಜೊತೆ ಮೈತ್ರಿ ಇಲ್ಲವೆಂದ ಶಿವಸೇನೆ
ಮುಂಬೈ,ಜ.31: ಮುಂಬರುವ ಪೌರ ಸಂಸ್ಥೆಗಳ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವ ರಾಜ್ ಠಾಕ್ರೆ ನೇತೃತ್ವದ ಎಂಎನ್‌ಎಸ್‌ನ ಕೊಡುಗೆಯನ್ನು ಅಲ್ಲಗಳೆದಿರುವ ಶಿವಸೇನೆಯ ವರಿಷ್ಠ ಉದ್ಧವ್ ಠಾಕ್ರೆ ಅವರು, ಯಾರಿಂದಲೂ ಯಾವುದೇ ಮೈತ್ರಿ ಪ್ರಸ್ತಾವನೆಯು ತನಗೆ ಬಂದಿಲ್ಲ ಮತ್ತು ತನ್ನ ಪಕ್ಷವು ಚುನಾವಣೆಯನ್ನು ಏಕಾಂಗಿಯಾಗಿ ಎದುರಿಸಲಿದೆ ಎಂದು ಮಂಗಳವಾರ ಇಲ್ಲಿ ಹೇಳಿದರು.
‘‘ನಾವು ಸಂಪೂರ್ಣ ದೃಢನಿರ್ಣಯದೊಂದಿಗೆ ಚುನಾವಣಾ ಕಣಕ್ಕಿಳಿದಿದ್ದೇವೆ. ಯಾರಿಂದಲೂ ಮೈತ್ರಿ ಪ್ರಸ್ತಾವನೆ ನಮಗೆ ಬಂದಿಲ್ಲ. ನಾವು ಯಾರೊಂದಿಗೂ ಯಾವುದೇ ಮೈತ್ರಿಯನ್ನು ಮಾಡಿಕೊಳ್ಳುವುದಿಲ್ಲ. ನಾವು ನಮ್ಮ ಸ್ವಂತ ಬಲದ ಮೇಲೆ ಸ್ಪರ್ಧಿಸುತ್ತೇವೆ ’’ ಎನ್ನುವ ಮೂಲಕ ಅವರು ಎಂಎನ್‌ಎಸ್‌ನೊಂದಿಗೆ ಮೈತ್ರಿಯ ವದಂತಿಗಳಿಗೆ ಅಂತ್ಯ ಹಾಡಿದರು.
ಉದ್ಧವ್ ಹೇಳಿಕೆಗೆ ಪ್ರತಿಕ್ರಿಯಿಸಿದ ಎಂಎನ್‌ಎಸ್ ನಾಯಕ ಬಾಳಾ ನಂದಗಾಂವಕರ್ ಅವರು, ‘‘ ಉದ್ಧವರ ನಿವಾಸ ‘ಮಾತೋಶ್ರೀ ’ಗೆ ನಾನೇ ಖುದ್ದಾಗಿ ಹೋಗಿದ್ದೆ ಮತ್ತು ಮುಂಬೈನ ಹಿತಾಸಕ್ತಿದ ದೃಷ್ಟಿಯಿಂದ ಮೈತ್ರಿಯ ಪ್ರಸ್ತಾವನೆಯನ್ನು ಮುಂದಿರಿಸಿದ್ದೆ. ಆದರೆ ತನಗೆ ಯಾವುದೇ ಪ್ರಸ್ತಾವನೆ ಬಂದಿಲ್ಲ ಎಂದು ಅವರು ಹೇಳುತ್ತಾರಾದರೆ ನಾನು ಸುಳ್ಳುಗಾರ ಎಂದಾಯಿತು ’’ ಎಂದರು.