ತತ್ತರಿಸಿದ ಶೇರುಪೇಟೆ : ಐಟಿ ಶೇರುಗಳಲ್ಲಿ ಭಾರೀ ಕುಸಿತ
ಹೊಸದಿಲ್ಲಿ,ಜ.31: ಅಮೆರಿಕದ ಟ್ರಂಪ್ ಆಡಳಿತವು ಜಾರಿಗೊಳಿಸಹೊರಟಿರುವ ನೂತನ ಎಚ್1ಬಿ ವೀಸಾ ನಿಯಮಗಳ ಕುರಿತಾಗಿ ಆತಂಕಗಳು ಮೂಡಿರುವಂತೆಯೇ, ಭಾರತೀಯ ಮಾಹಿತಿತಂತ್ರಜ್ಞಾನ ಕಂಪೆನಿಗಳ ಶೇರುದರಗಳಲ್ಲಿ ಶೇ.9ರಷ್ಟು ಕುಸಿತವುಂಟಾಗಿದೆ. ವಿತ್ತ ಸಚಿವ ಅರುಣ್‌ಜೇಟ್ಲಿ ಬುಧವಾರ ಕೇಂದ್ರ ಬಜೆಟ್ ಮಂಡಿಸುವುದಕ್ಕೆ ಕೇವಲ ಒಂದು ದಿನ ಮೊದಲು ಐಟಿ ಶೇರು ವೌಲ್ಯಗಳಲ್ಲಿ ಇಳಿಕೆಯಾಗಿದೆ.
ಭಾರತೀಯ ಐಟಿ ಕಂಪೆನಿಗಳಿಗೆ ಭಾರೀ ವರದಾನವಾಗಿದ್ದ ಎಚ್1-ಬಿ ವೀಸಾ ಕಾರ್ಯಕ್ರಮವನ್ನು ಅಮೆರಿಕನ್ ನಾಗರಿಕರ ಹಿತಾಸಕ್ತಿಗಳಿಗೆ ಪೂರಕವಾಗಿ ಪುನರ್‌ರೂಪಿಸಲು ಟ್ರಂಪ್ ಆಡಳಿತವು ಮುಂದಾಗಿರುವ ಹಿನ್ನೆಲೆಯಲ್ಲಿ ಐಟಿ ಶೇರುದರಗಳು ಪಾತಾಳಕ್ಕಿಳಿದಿವೆ.
ಅಮೆರಿಕದ ಶಾಸನ ಸಭೆಯಲ್ಲಿ ಎಚ್1ಬಿ ವೀಸಾ ಮರುಪರಿಶೀಲನಾ ವಿಧೇಯಕವನ್ನು ಇಂದು ಮಂಡಿಸಲಾಗಿದೆ. ನೂತನ ವಿಧೇಯಕವು ಭಾರತೀಯ ತಂತ್ರಜ್ಞಾನ ಕಂಪೆನಿಗಳು ಅಮೆರಿಕದಲ್ಲಿ ಉದ್ಯೋಗದ ಗುತ್ತಿಗೆಯನ್ನು ಪಡೆಯುವ ಯೋಜನೆಗಳಿಗೆ ಧಕ್ಕೆಯುಂಟು ಮಾಡಲಿವೆ. ಕಳೆದ ಮೂರು ದಶಕಗಳಲ್ಲಿ ಭಾರೀ ಸಂಖ್ಯೆಯ ಅಮೆರಿಕನ್ ಕಂಪೆನಿಗಳು, ಭಾರತೀಯ ಐಟಿ ಸಂಸ್ಥೆಗಳು ಸೇರಿದಂತೆ ವಿದೇಶಿ ಕಂಪೆನಿಗಳಿಗೆ ಅತ್ಯಂತ ಅಗ್ಗದ ದರದಲ್ಲಿ ಮಾಹಿತಿತಂತ್ರಜ್ಞಾನಕ್ಕೆ ಸಂಬಂಧಿಸಿದಂತಹ ಕೆಲಸಗಳನ್ನು ಹೊರಗುತ್ತಿಗೆಗೆ ನೀಡಿದ್ದವು.
ಟ್ರಂಪ್ ಆಡಳಿತವು ಎಚ್1-ಬಿ ವೀಸಾ ಕಾರ್ಯಕ್ರಮವನ್ನು ಮರುರೂಪಿಸುವುದಾಗಿ ಪ್ರಕಟಿಸುತ್ತಿದ್ದಂತೆಯೇ ಮುಂಬೈ ಶೇರುಮಾರುಕಟ್ಟೆಯಲ್ಲಿ ತಲ್ಲಣವುಂಟಾಯಿತು.
ದಿನದ ಮಧ್ಯಾಂತರದ ವೇಳೆಗೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸ್‌ನ ಶೇರುದರಗಳು 2,206.55ಕ್ಕೆ ಕುಸಿದವು. ಇನ್ಫೋಸಿಸ್ ಶೇರುದರಗಳಲ್ಲಿ 4.57 ಶೇಕಡ ಕುಸಿತವಾಗಿದ್ದು, 905 ರೂ.ಗೆ ಇಳಿಕೆಯಾಗಿದೆ. ವಿಪ್ರೋದ ಶೇರು ದರಗಳಲ್ಲಿ ಶೇ.4.11ರಷ್ಟು ಇಳಿಕೆಯಾಗಿದ್ದು 445.55 ರೂ. ಆಗಿದೆ. ಟೆಕ್ ಮಹೀಂದ್ರಾ ಶೇರು ದರಗಳಲ್ಲಿ ಶೇ.9.68ರಷ್ಟು ಕುಸಿದಿದ್ದು 426 ರೂ. ಆಗಿದೆ ಹಾಗೂ ಎಚ್‌ಸಿಎಲ್ ಟೆಕ್ನಾಲಜೀಸ್‌ನ ಶೇರುದರಗಳು ಶೇ.6.25ರಷ್ಟು ಕುಸಿದಿದ್ದು 787.20 ರೂ. ಆಗಿದೆ.
ಮುಂಬೈ ಶೇರು ವಿನಿಮಯ ಕೇಂದ್ರದಲ್ಲಿ ಐಟಿ ಸೂಚ್ಯಂಕವು ಆರಂಭದಲ್ಲಿ ಶೇ.4.83ರಷ್ಟು ಕುಸಿದಿದ್ದು ಮಧ್ಯಾಂತರದ ವೇಳೆಗೆ 9401.85 . ಆಗಿದೆ. ದಿನದ ವಹಿವಾಟಿನ ಅಂತ್ಯದ ವೇಳೆಗೆ ಅದು 9547.53 .ನಲ್ಲಿ ಸ್ಥಿರಗೊಂಡಿತು.