ಕೇಂದ್ರದ ನೀತಿ ವಿರೋಧಿಸಿ ಎಸ್‌ಡಿಪಿಐ ಯಿಂದ ಕರಾಳ ದಿನಾಚರಣೆ
ಉಡುಪಿ, ಜ.31 : ಕೇಂದ್ರ ಬಿಜೆಪಿ ಸರಕಾರದ ಜನವಿರೋಧಿ ನೀತಿ, ಆರ್ಥಿಕ ತುರ್ತು ಪರಿಸ್ಥಿತಿ, ಸಾಂಸ್ಕೃತಿಕ ಹಾಗೂ ರಾಜಕೀಯ ಫ್ಯಾಸಿಸಂ ಅನ್ನು ವಿರೋಧಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾ ಘಟಕ ಮಂಗಳವಾರ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಕ್ಲಾಕ್ ಟವರ್ ಎದುರು ಕರಾಳ ದಿನವನ್ನು ಆಚರಿಸಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಮಲ್ಪೆ, ಅಧಿಕಾರಕ್ಕೆ ಏರುವ ಮೊದಲು ಅಚ್ಛೆದಿನ್ ಕಲ್ಪನೆ ಮೂಡಿಸಿದ ಹಾಗೂ ಕಪ್ಪು ಹಣ ಹೊರತಂದು ಪ್ರತಿಯೊಬ್ಬರ ಖಾತೆಗೆ 15ಲಕ್ಷ ನೀಡುವ ಭರವಸೆ ನೀಡಿದ್ದ ನರೇಂದ್ರ ಮೋದಿ, ನೋಟು ಅಮಾನ್ಯ ಮಾಡುವ ಮೂಲಕ ಜನರನ್ನು ಬೀದಿಪಾಲು ಮಾಡಿದ್ದಾರೆ. ಯಾವುದೇ ಹೋರಾಟಕ್ಕೂ ಸ್ಪಂದಿಸದ ಅವರ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಕಟುವಾಗಿ ಟೀಕಿಸಿದರು.
ಈ ಸಂದರ್ಭದಲ್ಲಿ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಆತೀಫ್ ಕೋಟೇಶ್ವರ, ಮುಖಂಡರಾದ ನಝೀರ್ ಉಡುಪಿ, ಹಸೇನಾರ್, ಅಸ್ಲಂ ಮಲ್ಪೆ, ಸಾದಿಕ್ ಮಲ್ಪೆ, ಮಕ್ಸುದು ಮೂಡಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.