ಉಡುಪು ಕ್ಷೇತ್ರವನ್ನು ಉತ್ತೇಜಿಸಲು ಕಾರ್ಮಿಕ, ತೆರಿಗೆ ಸುಧಾರಣೆಗಳು ಅಗತ್ಯ: ಆರ್ಥಿಕ ಸಮೀಕ್ಷೆ
ಹೊಸದಿಲ್ಲಿ,ಜ.31: ಉಡುಪು ಮತ್ತು ಚರ್ಮ ಕೈಗಾರಿಕೆ ಕ್ಷೇತ್ರಗಳು ವಿಶೇಷವಾಗಿ ದುರ್ಬಲ ವರ್ಗಗಳು ಮತ್ತು ಮಹಿಳೆಯರಿಗೆ ಉದ್ಯೋಗ ಸೃಷ್ಟಿಯಲ್ಲಿ ಮಹತ್ತರ ಪಾತ್ರ ಹೊಂದಿವೆ. ಜೊತೆಗೆ ದೇಶದಲ್ಲಿ ವಿಶಾಲ ಸಾಮಾಜಿಕ ಪರಿವರ್ತನೆಯ ವಾಹಕವಾಗುವ ಸಾಮರ್ಥ್ಯವೂ ಅವುಗಳಿಗಿದೆ. ಹೀಗಾಗಿ ಅವುಗಳನ್ನು ಉತ್ತೇಜಿಸಲು ಕಾರ್ಮಿಕ ಮತ್ತು ತೆರಿಗೆ ನೀತಿ ಸುಧಾರಣೆಗಳು ಅಗತ್ಯವಾಗಿವೆ ಎಂದು ವಿತ್ತಸಚಿವ ಅರುಣ್ ಜೇಟ್ಲಿಯವರು ಮಂಗಳವಾರ ಸಂಸತ್ತಿನಲ್ಲಿ ಮಂಡಿಸಿದ ಆರ್ಥಿಕ ಸಮೀಕ್ಷೆಯು ಹೇಳಿದೆ.
ಐರೋಪ್ಯ ಒಕ್ಕೂಟ ಮತ್ತು ಬ್ರಿಟನ್ ಜೊತೆ ಮುಕ್ತ ವ್ಯಾಪಾರ ಒಪ್ಪಂದ(ಎಫ್‌ಟಿಎ)ಕ್ಕೆ ಒತ್ತು ನೀಡಿರುವ ಸಮೀಕ್ಷೆಯು ಹೆಚ್ಚು ಎಫ್‌ಟಿಎಗಳು, ಜಿಎಸ್‌ಟಿ ಪ್ರೇರಿತ ತೆರಿಗೆ ಪರಿಷ್ಕರಣೆಗಳು ಮತ್ತು ಕಾರ್ಮಿಕ ಕಾನೂನು ಸುಧಾರಣೆಗಳು ಉಡುಪು ತಯಾರಿಕೆ ಮತ್ತು ಪಾದರಕ್ಷೆ ಕ್ಷೇತ್ರಗಳ ಉದ್ಯೋಗ ಸೃಷ್ಟಿ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಬಲ್ಲವು ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಐರೋಪ್ಯ ಒಕ್ಕೂಟ ಮತ್ತು ಬ್ರಿಟನ್ ಜೊತೆ ಎಫ್‌ಟಿಎ ಈಗಾಗಲೇ ಉತ್ತಮ ಮಾರುಕಟ್ಟೆಯನ್ನು ಕಂಡುಕೊಂಡಿರುವ ಪ್ರತಿಸ್ಪರ್ಧಿಗಳಾದ ಬಾಂಗಾದೇಶ,ವಿಯೆಟ್ನಾಂ ಮತ್ತು ಇಥಿಯೋಪಿಯಾಗಳಿಗೆ ಹೋಲಿಸಿದರೆ ಉಡುಪು ತಯಾರಿಕೆ ಕ್ಷೇತ್ರದಲ್ಲಿ ಭಾರತವು ಎದುರಿಸುತ್ತಿರುವ ಕೊರತೆಯನ್ನು ನಿವಾರಿಸುತ್ತದೆ. ಚರ್ಮ ಕೈಗಾರಿಕೆ ಕ್ಷೇತ್ರದಲ್ಲಿಯೂ ಎಫ್‌ಟಿಎ ಭಾರತಕ್ಕೆ ಲಾಭದಾಯಕವಾಗಬಹುದು ಎಂದು ಸಮೀಕ್ಷೆಯು ತಿಳಿಸಿದೆ.
ಐರೋಪ್ಯ ಒಕ್ಕೂಟ ಮತ್ತು ಬ್ರಿಟನ್ ಜೊತೆ ಎಫ್‌ಟಿಎಯು ವಾರ್ಷಿಕವಾಗಿ ಉಡುಪು ತಯಾರಿಕೆಯಲ್ಲಿ 1,08,029, ಚರ್ಮ ಕೈಗಾರಿಕೆಯಲ್ಲಿ 23,156 ಮತ್ತು ಪಾದರಕ್ಷೆ ಕ್ಷೇತ್ರದಲ್ಲಿ 14,347 ಹೆಚ್ಚುವರಿ ಉದ್ಯೋಗಗಳ ಸೃಷ್ಟಿಗೆ ನೆರವಾಗುತ್ತದೆ ಎಂದು ಸಮೀಕ್ಷೆಯು ತಿಳಿಸಿದೆ.