×
Ad

ಕುಡಿಯುವ ನೀರಿಗೆ ಹರಿಯುತ್ತಿರುವ ಕೊಳಚೆ ನೀರು!

Update: 2017-01-31 19:57 IST

ಬಂಟ್ವಾಳ, ಜ. 31 : ಮಂಗಳೂರು ಮಹಾನಗರ ಪಾಲಿಕೆ ಮತ್ತು ಬಂಟ್ವಾಳ ಪುರಸಭಾ ವ್ಯಾಪ್ತಿಗೆ ಕುಡಿಯಲು ನೇತ್ರಾವತಿ ನದಿಯಲ್ಲಿ ಸಂಗ್ರಹಿಸಿರುವ ನೀರಿಗೆ ಪುರಸಭಾ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ಕೊಳಚೆ ನೀರನ್ನು ಬಿಡಲಾಗುತ್ತಿದೆ ಹಾಗೂ ತ್ಯಾಜ್ಯ ವಸ್ತುಗಳನ್ನು ಎಸೆಯಲಾಗುತ್ತಿದೆ ಎಂದು ಪುರಸಭಾ ಸದಸ್ಯರು ಕಳವಳ ವ್ಯಕ್ತಪಡಿಸಿದರು.

ಮಂಗಳವಾರ ಬೆಳಗ್ಗೆ ಬಂಟ್ವಾಳ ಪುರಸಭೆಯ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರ ಅನುಮತಿಯ ಮೇರೆಗಿನ ಚರ್ಚೆಯ ವೇಳೆ ಸದಸ್ಯ ದೇವದಾಸ ಶೆಟ್ಟಿ ವಿಷಯ ಪ್ರಸ್ತಾವಿಸಿ, ಪುರಸಭಾ ವ್ಯಾಪ್ತಿಯ ಮನೆಗಳು, ವಸತಿ ಸಂಕೀರ್ಣಗಳು, ಹೊಟೇಲ್‌ಗಳ ಕೊಳಚೆ ನೀರನ್ನು ನೇತ್ರಾವತಿ ನದಿಗೆ ಸಂಪರ್ಕ ಹೊಂದಿರುವ ತೋಡಿನ ಮೂಲಕ ಹರಿಯಬಿಡಲಾಗುತ್ತಿದೆ. ಪರಿಣಾಮ ನಗರವಾಸಿಗಳು ಮಾರಕ ಕಾಯಿಲೆಗಳಿಗೆ ತುತ್ತಾಗುವ ಅಪಾಯವಿದೆ ಎಂದು ಅವರು ಹೇಳಿದರು.

ಇದಕ್ಕೆ ಧ್ವನಿಗೂಡಿಸಿದ ಇತರ ಸದಸ್ಯರು, ಬಂಟ್ವಾಳದ ಬಡ್ಡಕಟ್ಟೆ, ಪಾಣೆಮಂಗಳೂರು ಸೇತುವೆಯಡಿ, ತಲಪಾಡಿ ಬಳಿ ಸಹಿತ ವಿವಿಧೆಡೆ ನೇತ್ರಾವತಿ ನದಿಗೆ ಮೀನು, ಕೋಳಿ, ಮಾಂಸ ಇನ್ನಿತರ ತ್ಯಾಜ್ಯ ವಸ್ತುವನ್ನು ಎಸೆಯಲಾಗುತ್ತಿದೆ. ಇನ್ನೂ ವಿಶೇಷವೆಂದರೆ ಪುರಸಭೆ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಘನತ್ಯಾಜ್ಯವನ್ನೂ ಕೂಡಾ ನದಿಗೆ ಎಸೆಯಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಸುಧಾಕರ್, ಕೊಳಚೆ ನೀರನ್ನು ನದಿಗೆ ಬಿಡುವ ಮನೆ, ವಸತಿ ಸಮುಚ್ಚಯ ಹಾಗೂ ಹೊಟೇಲ್‌ಗಳಿಗೆ ನೋಟಿಸ್ ಜಾರಿ ಮಾಡಲಾಗುವುದು ಎಂದರೆ, ಅಧ್ಯಕ್ಷ ರಾಮಕೃಷ್ಣ ಆಳ್ವ ಮಾತನಾಡಿ, ಸಮಗ್ರ ಒಳ ಚರಂಡಿ ಯೋಜನೆಯ ಕಾಮಗಾರಿಯನ್ನು ಮುಂದುವರಿಸಲು ಈಗಾಗಲೇ ಸಚಿವ ರಮಾನಾಥ ರೈ ಅವರಲ್ಲಿ ಚರ್ಚಿಸಲಾಗಿದೆ ಎಂದು ಹೇಳುವ ಮೂಲಕ ಚರ್ಚೆಗೆ ತೆರೆ ಎಳೆದರು.

ಸಭೆಯನ್ನು ನುಂಗಿದ ಮಫತಿಲಾಲ್ ಲೇಔಟ್:

ಬಿ.ಮೂಡ ಗ್ರಾಮದಲ್ಲಿರುವ ಮಫತ್‌ಲಾಲ್ ಲೇಔಟ್ ನಿರ್ಮಾಣ ಸಂದರ್ಭದ ನಕ್ಷೆಯಲ್ಲಿ ತೋರಿಸಲಾಗಿದ್ದಂತೆ 1.28 ಎಕ್ರೆ ಸಂಪೂರ್ಣ ಬೋಗಸ್ ಎಂಬುದನ್ನು ಸ್ವತಃ ಬಂಟ್ವಾಳ ಪುರಸಭೆಯೇ ಒಪ್ಪಿಕೊಂಡ ಪ್ರಸಂಗವು ನಡೆಯಿತು. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲು ಸಭೆ ತೀರ್ಮಾನಿಸಿತು.

ಈ ಲೇಔಟ್‌ನಲ್ಲಿ ಹಾದುಹೋಗುವ ರಸ್ತೆ ಕಾಮಗಾರಿ ವಿಷಯ ಬಂದಾಗ ಮಾತನಾಡಿದ ಸದಸ್ಯ ಎ.ಗೋವಿಂದ ಪ್ರಭು ಹಾಗೂ ಬಿ.ದೇವದಾಸ ಶೆಟ್ಟಿ, ಈಗಾಗಲೇ ಲೇಔಟ್ ಖಾಸಗಿ ಸ್ಥಳ ಎಂಬುದಕ್ಕೆ ಪುರಸಭೆ ನೀಡಿರುವ ದಾಖಲೆಗಳೆ ಸ್ಪಷ್ಟಪಡಿಸಿವೆ. ಖಾಸಗಿ ಜಮೀನಿಗೆ ಸರಕಾರಿ ಹಣವನ್ನು ವಿನಿಯೋಗಿರುವ ಕುರಿತ ಈ ಪ್ರಕರಣ ಸರಕಾರಿ ಮಟ್ಟದಲ್ಲಿ ತನಿಖಾ ಹಂತದಲ್ಲಿರುವಾಗಲೆ ಮತ್ತೆ ಆವರಣ ಗೋಡೆಗೆ ಅನುದಾನ ಮೀಸಲಿಡಲು ಮುಂದಾಗಿರುವುದು ಸರಿಯಲ್ಲ ಎಂದು ಅವರು ಲಿಖಿತ ಆಕ್ಷೇಪ ವ್ಯಕ್ತಪಡಿಸಿದರು.

ಈ ಸಂದರ್ಭ ಸದಸ್ಯ ಮಹಮ್ಮದ್ ಶರೀಫ್ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ, ಲೇಔಟ್ ಪಕ್ಕ ನೂರಕ್ಕೂ ಅಧಿಕ ಮನೆಗಳಿವೆ. ಅಲ್ಲಿ ರಸ್ತೆ ನಿರ್ಮಾಣ ಮಾಡುವುದಕ್ಕೆ ಅಡ್ಡಿಪಡಿಸುವುದು ಸರಿಯಲ್ಲ ಎಂದು ಹೇಳಿದರು. ಈ ಹಂತದಲ್ಲಿ ಆಡಳಿತ, ವಿಪಕ್ಷ ಸದಸ್ಯರ ಮಧ್ಯೆ ತಾಸಿಗೂ ಹೆಚ್ಚು ಕಾಲ ವಾದ, ವಿವಾದಗಳು ನಡೆಯಿತು.

ಸಭಾಧ್ಯಕ್ಷತೆಯನ್ನು ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ ವಹಿಸಿದ್ದರು.

ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸದಸ್ಯರಾದ ಬಿ.ಮೋಹನ್, ಜಗದೀಶ್ ಕುಂದರ್, ಮುಹಮ್ಮದ್ ಇಕ್ಬಾಲ್ ಗೂಡಿನಬಳಿ, ವಸಂತಿ ಚಂದಪ್ಪ, ವಾಸು ಪೂಜಾರಿ, ಜೆಸಿಂತ, ಚಂಚಲಾಕ್ಷಿ, ಮುಮ್ತಾರ್ ಬಾನು, ಬಾಸ್ಕರ್ ಟೈಲರ್ ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡರು. ಮುಖ್ಯಾಧಿಕಾರಿ ಸುಧಾಕರ್ ಸ್ವಾಗತಿಸಿ ವಂದಿಸಿದರು. ಅಧಿಕಾರಿಗಳಾದ ಮತ್ತಡಿ, ಉಮಾವತಿ ಅವರು ಸಭೆಗೆ ಮಾಹಿತಿ ನೀಡಿದರು.

ಮುಖ್ಯಾಂಶಗಳು:

*    ಜಕ್ರಿಬೆಟ್ಟಿನಲ್ಲಿರುವ ಸಮಗ್ರ ಕುಡಿಯುವ ನೀರಿನ ಸ್ಥಾವರದಲ್ಲಿ 4 ಇಂಚಿನ ಪೈಪುನಲ್ಲಿ ಮೂರು ತಿಂಗಳಿನಿಂದ ಶುದ್ಧ ಕುಡಿಯುವ ನೀರು ಸೋರಿಕೆಯಾಗುತ್ತಿರುವುದನ್ನು ತಡೆಗಟ್ಟಲು ಕ್ರಮಕೈಗೊಳ್ಳಲಾಗುವುದು.
*    ಮೆಲ್ಕಾರ್‌ನ ವೃತ್ತಕ್ಕೆ ಸ್ವಾತಂತ್ರ್ಯ ಹೋರಾಟಗಾರ ದಿ. ಡಾ. ಅಮ್ಮೆಂಬಳ ಬಾಳಪ್ಪರ ಹೆಸರನ್ನು ನಾಮಕರಣಕ್ಕೆ ಸರ್ವಾನು ಮತದ ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿಗೆ ಶಿಫಾರಸು ಮಾಡಲಾಯಿತು.
*    ಪಾಣೆಮಂಗಳೂರಿನ ಹಳೆ ಸೇತುವೆಯ ಬಳಿ ಸರಕಾರಿ ಸ್ಥಳದಲ್ಲಿ ವಾಸ್ತವ್ಯವಿರುವ 14 ಖಾತೆದಾರರ ಕದ ನಂಬ್ರವನ್ನು ರದ್ದುಗೊಳಿಸುವ ನಿರ್ಣಯಕ್ಕೆ ಸಭೆ ಅಂಗೀಕಾರ ನೀಡಿತು.
*    ಕಂಬಳ ಕ್ರೀಡೆಗೆ ಪುರಸಭೆ ಸರ್ವಾನುಮತದಿಂದ ಬೆಂಬಲ ಸೂಚಿಸಿ ನಿರ್ಣಯ ಕೈಗೊಂಡಿತು.
*    2014-15ನೆ ಸಾಲಿನಲ್ಲಿ ವಾರ್ಡ್ ಒಂದರಿಂದ 7ರವರೆಗೆ ಚರಂಡಿ ದುರಸ್ಥಿ ಮತ್ತು ಹೂಳೆತ್ತುವ ಕಾಮಗಾರಿಯ ಗುತ್ತಿಗೆದಾರನಿಗೆ ಪಾವತಿಗೆ ಬಾಕಿ ಇರುವ 5 ಲಕ್ಷ ರೂ. ನೀಡಲು ಸಭೆ ನಿರ್ಧರಿಸಿತು.
*    2014-15ನೆ ಸಾಲಿನಲ್ಲಿ 4, 6, 7ನೆ ವಾರ್ಡ್‌ನಲ್ಲಿ ಚರಂಡಿಯ ದುರಸ್ಥಿ ಮತ್ತು ಹೂಳೆತ್ತುವ ಕಾಮಗಾರಿ ನಡೆದಿಲ್ಲ ಎಂದು ಈ ಭಾಗದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
*    ಟೆಂಡರ್ ಆಗಿರುವ ಮಾತ್ರಕ್ಕೆ ಕಾಮಗಾರಿ ನಡೆಯದಿದ್ದರೂ ಬಿಲ್ ಪಾವತಿಸಲು ಕಾರ್ಯಸೂಚಿಯಲ್ಲಿ ಉಲ್ಲೇಖಿಸಿರುವುದನ್ನು ಸದಸ್ಯರಾದ ಪ್ರವೀಣ್ ಬಿ., ಗೋವಿಂದ ಪ್ರಭು, ದೇವದಾಸ ಶೆಟ್ಟಿ, ಮುನೀಶ್ ಅಲಿ, ಗಂಗಾಧರ್ ಆಕ್ಷೇಪ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News