‘ಸಬ್ ಕಾ ಸಾಥ್,ಸಬ್ ಕಾ ವಿಕಾಸ್ ’ಗೆ ಸರಕಾರವು ಬದ್ಧ: ಪ್ರಣವ್
ಹೊಸದಿಲ್ಲಿ,ಜ.31: ಮುಂಗಡಪತ್ರ ಅಧಿವೇಶನದ ಆರಂಭದ ದಿನವಾದ ಮಂಗಳವಾರ ಸಂಸತ್ತಿನ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು, ‘ಸಬ್ ಕಾ ಸಾಥ್,ಸಬ್ ಕಾ ವಿಕಾಸ್(ಎಲ್ಲರ ಸಹಯೋಗ,ಎಲ್ಲರ ವಿಕಾಸ)’ ಮಂತ್ರಕ್ಕೆ ತನ್ನ ಸರಕಾರವು ಬದ್ಧವಾಗಿದೆ ಎಂದು ಹೇಳಿದರು. ಅಲ್ಪಸಂಖ್ಯಾತರ ಸರ್ವಾಂಗೀಣ ಬೆಳವಣಿಗೆ ಮತ್ತು ದಿವ್ಯಾಂಗರ ಏಳಿಗೆಗಾಗಿ ವಿವಿಧ ಕ್ರಮಗಳನ್ನು ಸರಕಾರವು ಕೈಗೊಂಡಿದೆ ಎಂದ ಅವರು, ಮಳೆಯ ಹನಿಗಳು ಮತ್ತು ತೊರೆಗಳು ಸಮುದ್ರದಲ್ಲಿ ಒಂದಾಗುವಂತೆ ತನ್ನ ಸರಕಾರದ ಯೋಜನೆಗಳು ಬಡವರ ಕಲ್ಯಾಣಕ್ಕಾಗಿ ಮೇಳೈಸಲಿವೆ ಎಂದರು.
ನೋಟು ಅಮಾನ್ಯ ಕ್ರಮ ಮತ್ತು ನಿಯಂತ್ರಣ ರೇಖೆಯಾಚೆ ಸರ್ಜಿಕಲ್ ದಾಳಿಗಳನ್ನು ದೇಶದ ಹಿತಾಸಕ್ತಿಯಲ್ಲಿ ಕೈಗೊಂಡ ದಿಟ್ಟ ನಿರ್ಧಾರಗಳೆಂದು ಪ್ರಶಂಸಿಸಿದ ಅವರು, ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ ಬಗ್ಗೆ ಹಾಗೂ ಹಣಬಲದ ದುರುಪಯೋಗವನ್ನು ನಿವಾರಿಸಲು ಚುನಾವಣೆಗಳಿಗೆ ಹಣಕಾಸು ನೆರವು ಕುರಿತು ರಚನಾತ್ಮಕ ಚರ್ಚೆಗಳ ಬಗ್ಗೆ ಒಲವು ವ್ಯಕ್ತಪಡಿಸಿದರು.
ಭೀತಿವಾದದ ಘೋರ ಸವಾಲನ್ನು ಎದುರಿಸಲು ಮತ್ತು ಭಯೋತ್ಪಾದನೆಯ ರೂವಾರಿಗಳಿಗೆ ಕಾನೂನಿನ ಶಿಕ್ಷೆಯಾಗುವಂತೆ ಮಾಡಲು ಸರಕಾರವು ಬದ್ಧವಾಗಿದೆ ಎಂದು ಅವರು ಹೇಳಿದರು.
ಜನಧನ್, ಸ್ಟಾರ್ಟ್-ಅಪ್ ಇಂಡಿಯಾ ಮತ್ತು ಡಿಜಿಟಲ್ ಇಂಡಿಯಾ ಸೇರಿದಂತೆ ಸರಕಾರದ ವಿವಿಧ ಯೋಜನೆಗಳನ್ನು ಪ್ರಶಂಸಿಸಿದ ರಾಷ್ಟ್ರಪತಿಗಳು, ನೋಟು ಅಮಾನ್ಯ ಕ್ರಮವು ಭಾರತದ ಡಿಜಿಟಲ್ ಆರ್ಥಿಕತೆಯನ್ನು ಸದೃಢಗೊಳಿಸಲಿದೆ ಎಂದರು.
ವಸತಿ, ಎಲ್‌ಪಿಜಿ ಸಂಪರ್ಕ, ವಿದ್ಯುದ್ದೀಕರಣ, ಆರೋಗ್ಯ ರಕ್ಷಣೆ, ಶಿಕ್ಷಣ, ರೈತರ ಕಲ್ಯಾಣ, ಗ್ರಾಮೀಣ ಮತ್ತು ನಗರಾಭಿವೃದ್ಧಿಯಂತಹ ವಿವಿಧ ಕ್ಷೇತ್ರಗಳಲ್ಲಿ ಸರಕಾರದ ವಿವಿಧ ಕ್ರಮಗಳ ಬಗ್ಗೆಯೂ ಅವರು ಮಾತನಾಡಿದರು.
ನಮ್ಮ ಪ್ರಾದೇಶಿಕ ಸಾರ್ವಭೌಮತ್ವವನ್ನು ಪದೇಪದೇ ಉಲ್ಲಂಘಿಸುವವರಿಗೆ ಸೂಕ್ತ ಉತ್ತರ ನೀಡಲು ನನ್ನ ಸರಕಾರವು ನಿರ್ಣಾಯಕ ಕ್ರಮಗಳನ್ನು ಕೈಗೊಂಡಿದೆ ಎಂದ ಅವರು, 2016,ಸೆ.29ರಂದು ಭಯೋತ್ಪಾದಕರ ನುಸುಳುವಿಕೆಯನ್ನು ತಡೆಯಲು ನಿಯಂತ್ರಣ ರೇಖೆಯಾಚೆ ಭಯೋತ್ಪಾದಕ ಶಿಬಿರಗಳ ಮೇಲೆ ನಮ್ಮ ರಕ್ಷಣಾ ಪಡೆಗಳು ಯಶಸ್ವಿ ಸರ್ಜಿಕಲ್ ದಾಳಿಗಳನ್ನು ನಡೆಸಿದ್ದವು ಎಂದರು.
ಸರ್ಜಿಕಲ್ ದಾಳಿ ನಿಜವಾಗಿಯೂ ನಡೆದಿತ್ತೇ ಎಂದು ಕೆಲವರು ಶಂಕೆ ವ್ಯಕ್ತಪಡಿಸಿದ್ದ ಮತ್ತು ಇನ್ನು ಕೆಲವರು ರುಜುವಾತನ್ನೂ ಕೇಳಿದ್ದ ಹಿನ್ನೆಲೆಯಲ್ಲಿ ರಾಷ್ಟ್ರಪತಿಗಳು ತನ್ನ ಭಾಷಣದಲ್ಲಿ ಆ ಕುರಿತು ಪ್ರಸ್ತಾಪಿಸಿದ್ದು ಮಹತ್ವ ಪಡೆದುಕೊಂಡಿದೆ.
ನೋಟು ಅಮಾನ್ಯ ವಿರುದ್ಧದ ಪ್ರತಿಭಟನೆಗಳಿಂದಾಗಿ ಸಂಸತ್ತಿನ ಚಳಿಗಾಲದ ಅಧಿವೇಶನವು ವ್ಯರ್ಥಗೊಂಡ ಬಳಿಕ ಸಂಸದರನ್ನು ತರಾಟೆಗೆತ್ತಿಕೊಂಡಿದ್ದ ಮುಖರ್ಜಿ, ಸಂಸತ್ತು ಪವಿತ್ರ ಸಂಸ್ಥೆಯಾಗಿದ್ದು, ಅದು ನಮ್ಮ ದೇಶವಾಸಿಗಳು ತಮಗೆ ವಹಿಸಿರುವ ಕೆಲಸವನ್ನು ತನ್ನ ಸಂಸದರು ನಿಷ್ಠೆಯಿಂದ ನಿರ್ವಹಿಸುವ ಹೊಣೆಗಾರಿಕೆಯನ್ನು ಹೊರಿಸುತ್ತದೆ ಎಂದರು.
ಸರಕಾರವು ಇದೇ ಮೊದಲ ಬಾರಿಗೆ ಮುಂಗಡಪತ್ರ ಮಂಡನೆಯನ್ನು ಹಿಂದೂಡಿದೆ. ನಾಳೆ ವಿತ್ತಸಚಿವ ಅರುಣ್ ಜೇಟ್ಲಿಯವರು ಸಂಸತ್ತಿನಲ್ಲಿ ಮಂಡಿಸಲಿರುವ ಸಾಮಾನ್ಯ ಮುಂಗಡಪತ್ರದಲ್ಲಿ ರೈಲ್ವೆ ಬಜೆಟ್ ವಿಲೀನಗೊಂಡಿದ್ದು, ಇದರೊಂದಿಗೆ ಅದನ್ನು ಪ್ರತ್ಯೇಕವಾಗಿ ಮಂಡಿಸುವ 92 ವರ್ಷಗಳ ಸಂಪ್ರದಾಯ ಅಂತ್ಯಗೊಳ್ಳಲಿದೆ.