ಹಫೀಝ್ ಸಯೀದ್‌ಗೆ ಗೃಹಬಂಧನ : ಟ್ರಂಪ್ ನಿಷೇಧ ಬೆದರಿಕೆಯ ಫಲಶ್ರುತಿ?
ಲಾಹೋರ್, ಜ. 31: ಭಯೋತ್ಪಾದಕ ಸಂಘಟನೆ ಲಷ್ಕರೆ ತಯ್ಯಬದ ಮುಖ್ಯಸ್ಥ ಹಫೀಝ್ ಸಯೀದ್‌ನನ್ನು ಪಾಕಿಸ್ತಾನ ಸರಕಾರವು ಬಂಧಿಸಿ ಆರು ತಿಂಗಳ ಅವಧಿಗೆ ಗೃಹಬಂಧನದಲ್ಲಿರಿಸಿದೆ.
ಹಫೀಝ್ ಸಯೀದ್ ನೇತೃತ್ವದ ಇನ್ನೊಂದು ಸಂಘಟನೆ ಜಮಾತ್ ಉದ್ ದಾವದ ವಿರುದ್ಧ ಕ್ರಮ ತೆಗೆದುಕೊಳ್ಳದಿದ್ದರೆ ಪಾಕಿಸ್ತಾನದ ವಿರುದ್ಧ ದಿಗ್ಬಂಧನೆಗಳನ್ನು ವಿಧಿಸಲಾಗುವುದು ಎಂಬ ಅಮೆರಿಕದ ಬೆದರಿಕೆಯ ಹಿನ್ನೆಲೆಯಲ್ಲಿ ಪಾಕಿಸ್ತಾನ ಈ ಕ್ರಮ ತೆಗೆದುಕೊಂಡಿದೆ ಎಂದು ಹೇಳಲಾಗಿದೆ.
2008ರ ನವೆಂಬರ್‌ನಲ್ಲಿ ನಡೆದ ಮುಂಬೈ ದಾಳಿಯ ಸೂತ್ರಧಾರಿಯಾಗಿರುವ ಆತನ ವಿರುದ್ಧ ಭಾರತ ಪಾಕಿಸ್ತಾನಕ್ಕೆ ಪುರಾವೆಗಳನ್ನು ಸಲ್ಲಿಸಿದ್ದರೂ, ಹಲವು ವರ್ಷಗಳಿಂದ ಆತ ಪಾಕಿಸ್ತಾನದಲ್ಲಿ ಮುಕ್ತವಾಗಿ ತಿರುಗಾಡುತ್ತಿದ್ದಾನೆ.
ಮುಂಬೈ ಭಯೋತ್ಪಾದಕ ದಾಳಿಯಲ್ಲಿ 166 ಮಂದಿ ಹತರಾಗಿದ್ದಾರೆ.
ಆತನ ಜೊತೆಗೆ ಇನ್ನೂ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ.
ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಳ್ಳುವ ದಿನಗಳ ಮೊದಲೇ ಪಾಕಿಸ್ತಾನಕ್ಕೆ ದಿಗ್ಬಂಧನೆಯ ಬೆದರಿಕೆ ಎದುರಾಗಿತ್ತು ಎಂಬುದಾಗಿ ಪಾಕಿಸ್ತಾನಿ ದೈನಿಕ ‘ದ ನ್ಯೂಸ್ ಇಂಟರ್‌ನ್ಯಾಶನಲ್’ ವರದಿ ಮಾಡಿದೆ.
ಟ್ರಂಪ್ ಈಗಾಗಲೇ ಸಿರಿಯ, ಇರಾನ್, ಇರಾಕ್, ಸುಡಾನ್, ಯಮನ್, ಸೊಮಾಲಿಯ, ಲಿಬಿಯಗಳ ನಿವಾಸಿಗಳಿಗೆ ಅಮೆರಿಕ ಪ್ರವೇಶವನ್ನು ನಿರ್ಬಂಧಿಸಿದ್ದಾರೆ ಹಾಗೂ ಈ ಪಟ್ಟಿಗೆ ಮುಂದೆ ಪಾಕಿಸ್ತಾನವನ್ನೂ ಸೇರಿಸುವ ಸೂಚನೆಯನ್ನು ನೀಡಿದ್ದಾರೆ.