ಶಾಲಾ ಬಾಲಕನಿಗೆ ಸಹವಿದ್ಯಾರ್ಥಿಗಳಿಂದ ಕಿರುಕುಳ
ಪುತ್ತೂರು , ಜ.31: ಇಲ್ಲಿನ ಖಾಸಗಿ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿಯೊಬ್ಬನ ಮೇಲೆ ಇತರ ನಾಲ್ವರು ವಿದ್ಯಾರ್ಥಿಗಳು ಕಿರುಕುಳ ನೀಡುತ್ತಿದ್ದು, ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ವಿದ್ಯಾರ್ಥಿಯ ತಂದೆ ಪುತ್ತೂರು ನಗರ ಪೊಲೀಸ್ ಠಾಣೆಗೆ, ಮಕ್ಕಳ ಹಕ್ಕುಗಳ ರಕ್ಷಣಾ ಘಟಕದ ಆರಕ್ಷಕ ಅಧೀಕ್ಷಕರಿಗೆ ಮತ್ತು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಅವರಿಗೆ ದೂರು ನೀಡಿದ್ದಾರೆ.
ಪುತ್ತೂರು ತಾಲೂಕಿನ ಬಲ್ನಾಡು ನಿವಾಸಿ ಸುಬ್ರಹ್ಮಣ್ಯ ಕುಮಾರ್ ಭಟ್ ಅವರು ದೂರು ನೀಡಿದವರು.
ತನ್ನ ಮಗ ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ 9ನೇ ತರಗತಿಯಲ್ಲಿ ಕಲಿಯುತ್ತಿದ್ದು, ಜನವರಿ 6ರಂದು ಅದೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ಈತನನ್ನು ಎತ್ತಿಕೊಂಡು ಹೋಗಿ ಬೆಂಚಿನ ಮೇಲೆ ನಿಲ್ಲಿಸಿ ಲೈಂಗಿಕ ಕಿರುಕುಳ ನೀಡಿದ್ದಾರೆ. ಅನಪೇಕ್ಷಿತ ಶಬ್ದಗಳಿಂದ ಬೈದು ನಿಂದಿಸಿದ್ದಾರೆ, ಲೇವಡಿ ಮಾಡಿದ್ದಾರೆ. ಇದನ್ನು ಬಾಲಕ ಹೆತ್ತವರಾದ ತಮ್ಮ ಗಮನಕ್ಕೆ ತಂದಿದ್ದು, ಈ ಬಗ್ಗೆ ತರಗತಿ ಮುಖ್ಯ ಶಿಕ್ಷಕಿ ಮತ್ತು ಶಾಲೆಯ ಮುಖ್ಯ ಶಿಕ್ಷಕರಿಗೆ ದೂರು ನೀಡಲಾಗಿತ್ತು. ಅವರು ಮಕ್ಕಳಿಗೆ ಎಚ್ಚರಿಕೆ ನೀಡಿ ಪ್ರಕರಣ ಇತ್ಯರ್ಥ ಮಾಡಿದ್ದರು. ಆದರೆ ಇದು ಅಲ್ಲಿಗೆ ಕೊನೆಗೊಳ್ಳದೆ ಮುಂದುವರಿದಿದೆ.
ಶಾಲೆಯ ಆಡಳಿತ ಮಂಡಳಿಗೆ ಈ ಬಗ್ಗೆ ದೂರು ನೀಡಿದ ಬಳಿಕ ಅವರು ಕೈಗೊಂಡ ಕ್ರಮದ ಪರಿಣಾಮ ಒಬ್ಬ ವಿದ್ಯಾರ್ಥಿ ಕಿರುಕುಳ ನೀಡುವುದನ್ನು ನಿಲ್ಲಿಸಿದ್ದು, ಮತ್ತೊಬ್ಬ ವಿದ್ಯಾರ್ಥಿ ಜತೆ ಇನ್ನೂ ಮೂವರು ಸೇರಿಕೊಂಡು ಕಿರುಕುಳ ಮುಂದುವರಿಸಿದ್ದಾರೆ. ಇದರಿಂದ ನೊಂದ ನನ್ನ ಮಗ ಶಾಲೆಗೆ ಹೋಗುವುದನ್ನೇ ನಿಲ್ಲಿಸಿದ್ದಾನೆ. ಆತ ಭಯದಿಂದ ಕಂಗಾಲಾಗಿದ್ದು, ಮಾನಸಿಕವಾಗಿ ಬಳಲಿದ್ದಾನೆ. ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಅಲ್ಲಿ ವೈದ್ಯರಿಂದ ಕೌನ್ಸೆಲಿಂಗ್ ಕೊಡಿಸಲಾಗಿದೆ ಎಂದು ವಿದ್ಯಾರ್ಥಿಯ ತಂದೆ ತಾವು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸುಬ್ರಹ್ಮಣ್ಯ ಕುಮಾರ್ ಅವರು ಶಾಲೆಯಲ್ಲಿ ನಡೆಯುತ್ತಿರುವ ಕಿರುಕುಳದಿಂದ ನನ್ನ ಮಗ ತುಂಬಾ ನೊಂದಿದ್ದು, 4 ದಿನಗಳಿಂದ ಶಾಲೆಗೆ ಹೋಗುತ್ತಿಲ್ಲ. ಪುತ್ರನ ಭವಿಷ್ಯದ ಬಗ್ಗೆ ಚಿಂತಿತರಾಗಿರುವ ನಾವು ಬೇರೆ ಶಾಲೆಗೆ ಆತನನ್ನು ಸೇರಿಸುವ ಬಗ್ಗೆ ಯೋಚಿಸುತ್ತಿದ್ದೇವೆ ಎಂದರು.
ನಾವು ನೀಡಿರುವ ದೂರಿನ ಪ್ರಕಾರ ಶಾಲೆಯ ಆಡಳಿತ ಮಂಡಳಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದೆ. ಮಂಗಳವಾರ ಮಕ್ಕಳ ಹಕ್ಕುಗಳ ರಕ್ಷಣಾ ಘಟಕದ ಅಧಿಕಾರಿ ಮತ್ತು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಅವರು ಶಾಲೆಗೆ ತೆರಳಿ ವಿಚಾರಣೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.
ಆದರೆ ಬಾಲಕನ ತಂದೆ ಮಾಡಿರುವ ಆರೋಪಗಳನ್ನು ಶಾಲೆಯ ಮುಖ್ಯ ಶಿಕ್ಷಕರು ನಿರಾಕರಿಸಿದ್ದಾರೆ. ಅವರು ಹೇಳಿದಂಥ ಘಟನೆಗಳು ಶಾಲೆಯಲ್ಲಿ ನಡೆದಿಲ್ಲ. ಈ ಬಗ್ಗೆ ನಾವು ಕೂಲಂಕುಷ ವಿಚಾರಣೆ ನಡೆಸಿದ್ದೇವೆ. ಅನಗತ್ಯ ಆರೋಪ ಎಂಬುದು ಸಾಬೀತಾಗಿದೆ ಎಂದು ತಿಳಿಸಿದ್ದಾರೆ.
ಬಾಲಕನ ಪಾಲಕರಿಗೆ ಈ ರೀತಿಯ ಭಾವನೆ ಯಾಕೆ ಬಂತು ತಿಳಿಯದು. ಅವರ ಜತೆ ಮಾತುಕತೆ ನಡೆಸುತ್ತಿದ್ದೇವೆ. ಪರಿಸ್ಥಿತಿ ತಿಳಿಯಾಗಲಿದೆ ಎಂದು ತಿಳಿಸಿದ್ದಾರೆ.
ಬಾಲಕನ ತಂದೆ ದೂರು ನೀಡಿರುವುದು ನಿಜ. ತೀರಾ ಸಣ್ಣ ವಿಷಯಗಳೇ ಅನಗತ್ಯವಾಗಿ ದೊಡ್ಡದಾಗಿವೆಯೇ ಅಥವಾ ನಿಜಕ್ಕೂ ಅಂಥ ಘಟನೆ ನಡೆದಿದೆಯೇ ಎಂಬ ಬಗ್ಗೆ ನಾವು ತನಿಖೆ ಬಳಿಕ ಹೇಳಬಹುದಷ್ಟೇ. ಈಗಲೇ ಏನೂ ಹೇಳುವಂತಿಲ್ಲ. ದೂರಿನ ಆಧಾರದಲ್ಲಿ ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿ.ಎಸ್. ತಿಳಿಸಿದ್ದಾರೆ.