×
Ad

ಮಾರಣಾಂತಿಕ ಹಲ್ಲೆ, ಜೀವಬೆದರಿಕೆ : ಮೂವರು ಅಪರಾಧಿಗಳಿಗೆ ಶಿಕ್ಷೆ

Update: 2017-01-31 22:51 IST

ಮಂಗಳೂರು, ಜ. 31: ವ್ಯಕ್ತಿಯೋರ್ವನಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಜೀವಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಅಪರಾಧಿಗಳಿಗೆ ಮಂಗಳೂರಿನ ಒಂದನೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ದಂಡ ಸಹಿತ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮದ ನಿವಾಸಿ ಛಾಯಾಗ್ರಾಹಕ ಸುರೇಂದ್ರ ಯಾನೆ ಸುರೇಂದ್ರ ಭಂಡಾರಿ (37), ವೃತ್ತಿಯಲ್ಲಿ ಚಾಲಕನಾಗಿರುವ ಕೆಂಪುಗುಡ್ಡೆಯ ಪ್ರಶಾಂತ್ (33) ಹಾಗೂ ಫೈನಾನ್ಸ್ ಜಪ್ತಿದಾರನಾಗಿರುವ ಕೊಡಂಬೆಟ್ಟು ಗ್ರಾಮದ ರಜನೀಶ (27) ಶಿಕ್ಷೆಗೊಳಗಾದ ಅಪರಾಧಿಗಳು.

ಹಲ್ಲೆ ನಡೆಸಿ ಗಂಭೀರ ಗಾಯಗೊಳಿಸಿದ ಪ್ರಕರಣಕ್ಕೆ (ಸೆ.326) ಸಂಬಂಧಿಸಿ ಮೂವರಿಗೆ ತಲಾ 2 ವರ್ಷಗಳ ಸಾದಾ ಸಜೆ ಸಹಿತ 10 ಸಾವಿರ ರೂ. ದಂಡ ಹಾಗೂ ದಂಡ ತೆರಲು ತಪ್ಪಿದಲ್ಲಿ 3 ತಿಂಗಳ ಸಾದಾ ಕಾರಾಗೃಹ ವಾಸ, ಅಕ್ರಮವಾಗಿ ತಡೆದು ನಿಲ್ಲಿಸಿದ್ದಕ್ಕೆ (ಸೆ.341) ಮೂವರಿಗೆ ತಲಾ 1 ತಿಂಗಳ ಸಾದಾ ಸಜೆ ಸಹಿತ 500 ರೂ. ದಂಡ ಮತ್ತು ದಂಡ ತೆರಲು ತಪ್ಪಿದಲ್ಲಿ 1 ವಾರದ ಸಾದಾ ಸಜೆ, ಅವಾಚ್ಯಶಬ್ಧಗಳಿಂದ ಬೈದು ನಿಂದಿಸಿದ್ದಕ್ಕೆ (ಸೆ.504) ತಲಾ 3 ತಿಂಗಳ ಸಾದಾ ಸಜೆ ಸಹಿತ 1 ಸಾವಿರ ರೂ. ದಂಡ ಮತ್ತು ದಂಡ ತೆರಲು ತಪ್ಪಿದಲ್ಲಿ 1 ತಿಂಗಳ ಸಾದಾ ಸಜೆ, ಜೀವ ಬೆದರಿಕೆಯೊಡ್ಡಿದ್ದಕ್ಕೆ (ಸೆ.506) ತಲಾ 3 ತಿಂಗಳ ಸಾದಾ ಸಜೆ ಸಹಿತ 1 ಸಾವಿರ ರೂ. ದಂಡ ಮತ್ತು ದಂಡ ತೆರಲು ತಪ್ಪಿದ್ದಲ್ಲಿ 1 ತಿಂಗಳ ಸಾದಾ ಸಜೆ ವಿಧಿಸಿ ನ್ಯಾಯಾಲಯವು ಆದೇಶ ನೀಡಿದೆ.

ಈ ಎಲ್ಲಾ ಶಿಕ್ಷೆಯನ್ನು ಏಕಕಾಲಕ್ಕೆ ಅನುಭವಿಸಬೇಕು ಮತ್ತು ಮೂವರು ಅಪರಾಧಿಗಳು ಪಾವತಿಸುವ ಒಟ್ಟು 37,500 ರೂ. ದಂಡ ಮೊತ್ತದ ಪೈಕಿ 20 ಸಾವಿರ ರೂ.ಗಳನ್ನು ಗಾಯಾಳು ರಮಾನಾಥ ಅವರಿಗೆ ಪರಿಹಾರ ರೂಪದಲ್ಲಿ ಪಾವತಿಸುವಂತೆ ನ್ಯಾಯಾಧೀಶ ಸಿ.ಎಂ. ಜೋಶಿ ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ.ಸರಕಾರಿ ಅಭಿಯೋಜಕ ರಾಜುಪೂಜಾರಿ ಬನ್ನಾಡಿ ವಾದಿಸಿದ್ದರು.  

ಪ್ರಕರಣ 2012ರ ಡಿಸೆಂಬರ್ 30 ರಂದು ಬೆಳಗ್ಗೆ ಮೂವರು ಬಂಟ್ವಾಳ ತಾಲೂಕು ರಾಯಿ ಗ್ರಾಮದ ಗೋಳ್ತಬೆಟ್ಟುವಿನ ರಮಾನಾಥ(49) ಎಂಬವರು ಬಿ.ಸಿ.ರೋಡ್ ಬಸ್‌ಸ್ಟಾಂಡ್ ಸಮೀಪದ ಲಾಡ್ಜ್‌ವೊಂದರ ವರಾಂಡದಲ್ಲಿದ್ದಾಗ ಅಕ್ರಮವಾಗಿ ತಡೆದು ನಿಲ್ಲಿಸಿ ಕೊಲೆ ಬೆದರಿಕೆಯೊಡ್ಡಿ ಅವಾಚ್ಯವಾಗಿ ನಿಂದಿಸಿದ್ದರಲ್ಲದೇ ತಲವಾರು, ಕಬ್ಬಿಣದ ಸರಳು ಮತ್ತು ಕಲ್ಲಿನಿಂದ ತೀವ್ರ ಹಲ್ಲೆ ನಡೆಸಿದ್ದರು.ದನ ಸಾಗಾಟ ವಿಚಾರದ ಕುರಿತಾಗಿ ಪೊಲೀಸರಿಗೆ ಮಾಹಿತಿ ನೀಡಿದ ಶಂಕೆಯ ತಕರಾರಿನಲ್ಲಿ ಈ ದುಷ್ಕೃತ್ಯ ನಡೆದಿತ್ತು.

ಅಂದಿನ ಬಂಟ್ವಾಳ ವೃತ್ತ ನಿರೀಕ್ಷಕ ಅನಿಲ್‌ಕುಲಕರ್ಣಿ ತನಿಖೆ ನಡೆಸಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.2017ರ ಜನವರಿ 5ರಂದು ನ್ಯಾಯಾಲಯದಲ್ಲಿ ಆರೋಪಿಗಳ ಕೃತ್ಯ ಸಾಬೀತಾಗಿತ್ತು. ಅಪರಾಧಿಗಳ ನಡವಳಿಕೆ ಬಗ್ಗೆ ನ್ಯಾಯಾಧೀಶರು ಪರಿವೀಕ್ಷಣಾಧಿಕಾರಿಗಳಿಂದ ವರದಿ ಕೋರಿದ್ದರು. ಪರಿವೀಕ್ಷಣಾಧಿಕಾರಿಗಳು ನೀಡಿದ ವರದಿಯ ಪರ -ವಿರೋಧ ವಾದವನ್ನಾಲಿಸಿದ ನ್ಯಾಯಾಧೀಶರು ಮಂಗಳವಾರ ಶಿಕ್ಷೆಯ ಪ್ರಮಾಣವನ್ನು ಘೋಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News