×
Ad

ಕೇಂದ್ರ ಸರ್ಕಾರದಿಂದ ಜನವಿರೋಧಿ ನೀತಿ ವಿರುದ್ಧ ಎಸ್‌ಡಿಪಿಐನಿಂದ ಸುಳ್ಯದಲ್ಲಿ ಕರಾಳ ದಿನಾಚರಣೆ

Update: 2017-01-31 23:13 IST

ಸುಳ್ಯ , ಜ.31 : ಬಿಜೆಪಿ ನೇತೃತ್ವದ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ನಾಗರಿಕರ ಮೂಲಭೂತ ಹಕ್ಕಿನ ಮೇಲೆ ಸವಾರಿ ಮಾಡುತ್ತಿದೆ ಎಂದು ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಹೇಳಿದ್ದಾರೆ.

ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಎಸ್‌ಡಿಪಿಐ ವತಿಯಿಂದ ನಡೆದ ಕರಾಳ ದಿನ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ದೇಶದಲ್ಲಿ ಸಾಂಸ್ಕೃತಿಕ ಹಾಗೂ ರಾಜಕೀಯ ಫ್ಯಾಸಿಸಂ ಹೇರುತ್ತಿದೆ. ನೋಟು ಬ್ಯಾನ್ ಬಳಿಕ ಭೀಕರ ಆರ್ಥಿಕ ತುರ್ತು ಪರಿಸ್ಥಿತಿ ಎದುರಾಗಿದೆ. ಸಾಮಾನ್ಯ ಜನರ ಬದುಕು ಸಂಕಷ್ಟಕ್ಕೆ ಸಿಲುಕಿದೆ ಎಂದವರು ಹೇಳಿದರು.

ಸುಳ್ಯದಲ್ಲಿ ಪ್ರತಿಭಟನಾ ಜಾಥಾ ಅಂಗವಾಗಿ ಶಾಸ್ತ್ರಿ ವೃತ್ತದಿಂದ ಆರಂಭಗೊಂಡ ಮೆರವಣಿಗೆ ಮುಖ್ಯ ರಸ್ತೆಯಲ್ಲಿ ಸಾಗಿ ಬಳಿಕ ಖಾಸಗಿ ಬಸ್ ನಿಲ್ದಾಣದ ಬಳಿ ಸಮಾವೇಶಗೊಂಡಿತು. ಬಸ್ ನಿಲ್ದಾಣದ ಬಳಿ ಪ್ರತಿಭಟನಾ ಸಭೆ ನಡೆಯಿತು.

  ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಎಂ.ಕೂಸಪ್ಪ, ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆ, ಕೋಶಾಧಿಕಾರಿ ಇಕ್ಬಾಲ್, ಜಿಲ್ಲಾ ಸಮಿತಿ ಸದಸ್ಯ ಜಾಬೀರ್ ಅರಿಯಡ್ಕ, ಸುಳ್ಯ ವಿಧಾನ ಸಭಾ ಸಮಿತಿ ಅಧ್ಯಕ್ಷ ಇಕ್ಬಾಲ್ ಬೆಳ್ಳಾರೆ, ಪುತ್ತೂರು ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಸಿದ್ದಿಕ್ ಕೆ.ಎ.ಪುತ್ತೂರು, ನಗರ ಪಂಚಾಯತ್ ಸದಸ್ಯ ಕೆ.ಎಸ್.ಉಮ್ಮರ್, ನಗರ ಸಮಿತಿ ಅಧ್ಯಕ್ಷ ಅಬ್ದುಲ್ ಕಲಾಂ, ಪಿಎಫ್‌ಐ ರಾಜ್ಯ ಸಮಿತಿ ಸದಸ್ಯ ಶಾಫಿ ಬೆಳ್ಳಾರೆ ಮೊದಲಾದವರು ಭಾಗವಹಿಸಿದ್ದರು.

ನಗರ ಕಾರ್ಯದರ್ಶಿ ಸಂಶುದ್ದೀನ್ ಸುಳ್ಯ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News