ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ ಸಚಿವರಿಗೆ ಥಳಿತ

Update: 2017-02-01 08:30 GMT
ಸಚಿವ ಲಾಲ್‌ಸಿಂಗ್

ಜಮ್ಮು,ಫೆ.1: ಜಮ್ಮು-ಕಾಶ್ಮೀರ ವಿಧಾನಸಭೆಯು ಬುಧವಾರ ಭಾರೀ ಕೋಲಾಹಲಕ್ಕೆ ಸಾಕ್ಷಿಯಾಯಿತು. ಪ್ರತಿಪಕ್ಷ ನ್ಯಾಷನಲ್ ಕಾನ್‌ಫರೆನ್ಸ್ ಸದಸ್ಯರು ಅರಣ್ಯ ಸಚಿವ ಚೌಧರಿ ಲಾಲ್‌ಸಿಂಗ್ ಅವರಿಗೆ ಥಳಿಸಿದ ಘಟನೆಯೂ ನಡೆಯಿತು. ದಾಖಲೆಗಳನ್ನು ಹರಿದೊಗೆದ ಪ್ರತಿಪಕ್ಷ ಸದಸ್ಯರ ಆಕ್ರೋಶದಿಂದಾಗಿ ಸದನದಲ್ಲಿನ ಖುರ್ಚಿಗಳು ಗಾಳಿಯಲ್ಲಿ ಹಾರಾಡಿದವು. ಇದರಿಂದಾಗಿ ಸ್ಪೀಕರ್ ಕವಿಂದರ್ ಗುಪ್ತಾ ಅವರು ಸದನವನ್ನು ಮುಂದೂಡುವುದು ಅನಿವಾರ್ಯವಾಯಿತು.

ಬೆಳಿಗ್ಗೆ ಸದನವು ಸಮಾವೇಶಗೊಂಡ ಬೆನ್ನಿಗೇ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಸೇರಿದಂತೆ ಪ್ರತಿಪಕ್ಷ ಸದಸ್ಯರು ಎದ್ದು ನಿಂತು, ಭಾರತೀಯ ಸಂವಿಧಾನದ ವಿಧಿ 370 ಮತ್ತು 35-ಎ ಅನ್ನು ವಿರೋಧಿಸಿದ್ದವರ ವಿರುದ್ಧ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರ ‘ರಾಷ್ಟ್ರ ವಿರೋಧಿ ’ ಹೇಳಿಕೆಯ ಕುರಿತು ಯಾವ ನಿರ್ಧಾರವನ್ನು ತೆಗೆದುಕೊಂಡಿದ್ದೀರಿ ಎಂದು ಸ್ಪೀಕರ್‌ರನ್ನು ಪ್ರಶ್ನಿಸಿದರು.

  ಇದಕ್ಕೆ ಸಮಜಾಯಿಷಿ ನೀಡಿದ ಸ್ಪೀಕರ್, ವಿಧಿ 370 ಮತ್ತು 35-ಎ ಅನ್ನು ದುರ್ಬಲಗೊಳಿಸುವ ಪ್ರಯತ್ನಗಳ ಕುರಿತು ಮಾತನಾಡುತ್ತಿದ್ದ ವೇಳೆ ಮುಫ್ತಿ ಅವರು ಒಂದೇ ಧರ್ಮ ಮತ್ತು ಒಂದೇ ಸಂಸ್ಕೃತಿಯನ್ನು ಅನುಸರಿಸುವ ಜನರೇ ಪ್ರದೇಶದಲ್ಲಿ ವಾಸವಾಗಿರಬೇಕು ಎಂದು ಬಯಸುತ್ತಿರುವ ಶಕ್ತಿಗಳು ಕಾಶ್ಮೀರ ಕಣಿವೆಯಲ್ಲಿವೆ ಎಂದು ಹೇಳಿದ್ದರು ಎಂದು ವಿವರಿಸಿದರು. ಆದರೆ ಇದು ಪ್ರತಿಪಕ್ಷ ಸದಸ್ಯರನ್ನು ತೃಪ್ತಿಗೊಳಿಸಲಿಲ್ಲ. ಸದನದ ಬಾವಿಗೆ ನುಗ್ಗಿದ ಅವರ ಪೈಕಿ ಕೆಲವರು ಪ್ರಶ್ನೆ ಪತ್ರಿಕೆಗಳ ಪ್ರತಿಗಳನ್ನು ಹರಿದೆಸೆದು ಮೇಜುಗಳನ್ನು ಗುದ್ದತೊಡಗಿದ್ದರು. ಖುರ್ಚಿಗಳನ್ನೂ ಎತ್ತಿ ಎಸೆದರು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿರುವುದನ್ನು ಗ್ರಹಿಸಿದ ಸ್ಪೀಕರ್ ಸದನವನ್ನು ಮುಂದೂಡಿದರು.

ಪ್ರತಿಪಕ್ಷ ಸದಸ್ಯರು ಸದನದಿಂದ ಹೊರಗೆ ಹೋಗುತ್ತಿದ್ದಾಗ ಸಚಿವ ಲಾಲ್‌ಸಿಂಗ ಅವರು ಕೆಲವು ಟೀಕಾಸ್ತ್ರಗಳನ್ನು ಪ್ರಯೋಗಿಸಿದರು. ಇದರಿಂದ ಕೆರಳಿದ ಎನ್‌ಸಿ ಸದಸ್ಯರಾದ ಮುಹಮ್ಮದ್ ಅಕ್ಬರ್ ಲೋನೆ ಮತ್ತು ಮಜೀದ್ ಲಾರ್ಮಿ ಅವರು ಬಾಗಿಲ ಬಳಿಯಿಂದ ವಾಪಸ್ ಬಂದು ಸಚಿವರ ಮೇಲೆ ಹಲ್ಲೆ ನಡೆಸಿದರು. ಸದನದ ಭದ್ರತಾ ಸಿಬ್ಬಂದಿಗಳು ಪ್ರಯಾಸಪಟ್ಟು ಈ ಹಲ್ಲೆಯನ್ನು ನಿಲ್ಲಿಸಿ ಸಚಿವರನ್ನು ರಕ್ಷಿಸಿದರು. ಇಷ್ಟಾದ ಬಳಿಕ ಸಂಸದೀಯ ವ್ಯವಹಾರಗಳ ಸಚಿವ ಏ.ಆರ್.ವೀರಿ ಅವರು ಲಾಲ್‌ಸಿಂಗ್ ಅ ವರನ್ನು ಸಾಂತ್ವನಗೊಳಿಸುತ್ತಿದ್ದ ದೃಶ್ಯ ಕಂಡು ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News