ಬಠಿಂಡಾ ಸ್ಫೋಟ:ಗಾಯಾಳು ಮಕ್ಕಳು ಮೃತ್ಯುವಶ,ಸಾವಿನ ಸಂಖ್ಯೆ ಐದಕ್ಕೇರಿಕೆ

Update: 2017-02-01 09:42 GMT

ಬಠಿಂಡಾ(ಪಂಜಾಬ್),ಫೆ.1: ಮಂಗಳವಾರ ಜಿಲ್ಲೆಯ ಮೌರ್ ಮಂಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹರ್ಮಿಂದರ್ ಸಿಂಗ್ ಜಸ್ಸಿ ಅವರ ಚುನಾವಣಾ ಪ್ರಚಾರ ಸಭೆಯ ತಾಣದ ಬಳಿ ಸಂಭವಿಸಿದ್ದ ಕಾರು ಸ್ಫೋಟದಲ್ಲಿ ಗಾಯಗೊಂಡಿದ್ದ ಇಬ್ಬರು ಮಕ್ಕಳು ಇಂದು ಮೃತಪಟ್ಟಿದ್ದಾರೆ. ಇದರೊಂದಿಗೆ ಈ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಐದಕ್ಕೇರಿದೆ. ಮೂವರು ನಿನ್ನೆ ಸಾವನ್ನಪ್ಪಿದ್ದರು.

ಇದೊಂದು ಭಯೋತ್ಪಾದಕ ಕೃತ್ಯ ಎಂದು ಪೊಲೀಸರು ಶಂಕಿಸಿದ್ದಾರೆ. ಸ್ಫೋಟದಿಂದ ಹತ್ತು ಜನರು ಗಾಯಗೊಂಡಿದ್ದಾರೆ. ಫೆ.4ರ ಚುನಾವಣೆಗೆ ಮುನ್ನ ಈ ಸ್ಫೋಟ ಸಂಭವಿಸಿರುವದು ಜನರಲ್ಲಿ ಆತಂಕವನ್ನು ಸೃಷ್ಟಿಸಿದೆ.

ಹರಪಾಲ್ ಸಿಂಗ್(55), ಬರ್ಖಾ(7) ಮತ್ತು ಅಶೋಕ(35) ನಿನ್ನೆ ಸಾವನ್ನಪ್ಪಿದ್ದು, 14-15ರ ವಯೋಮಾನದ ರಿಪನ್‌ದೀಪ್ ಮತ್ತು ಜಪನ್‌ಪ್ರೀತ್ ಇಂದು ಕೊನೆಯುಸಿ ರೆಳೆದಿದ್ದಾರೆ.

ಮಂಗಳವಾರ ರಾತ್ರಿ 8:30ರ ಸುಮಾರಿಗೆ ಜಸ್ಸಿಯವರ ಪ್ರಚಾರ ಸಭೆ ಮುಗಿದ ಬೆನ್ನಿಗೇ ಸ್ಫೋಟ ಸಂಭವಿಸಿತ್ತು. ಸಿರ್ಸಾದ ದೇರಾ ಸಚ್ಚಾ ಸೌದಾದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರ ಸಂಬಂಧಿಯಾಗಿರುವ ಜಸ್ಸಿ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

ಸ್ಫೋಟಕ್ಕೆ ಬಳಸಲಾಗಿದ್ದ ಕಾರನ್ನು ಕಳವು ಮಾಡಲಾಗಿತು ಮತ್ತು ಅದು ದ್ವಿಚಕ್ರ ವಾಹನದ ನೋಂದಣಿ ಸಂಖ್ಯೆಯನ್ನು ಹೊಂದಿತ್ತು. ವಾಹನದ ಇಂಜಿನ್ ನಂ.ಮತ್ತು ಚಾಸಿಸ್ ಸಂಖ್ಯೆಗಳನ್ನು ಅಳಿಸಲಾಗಿತ್ತು ಎಂದು ಪೊಲೀಸರು ತಿಳಿಸಿದರು.

ಸ್ಫೋಟ ಎಷ್ಟು ಶಕ್ತಿಶಾಲಿಯಾಗಿತ್ತೆಂದರೆ ಕಾರು ಚೂರುಚೂರಾಗಿತ್ತು. ಆರಂಭದಲ್ಲಿ ಕಾರಿನಲ್ಲಿಯ ಎಲ್‌ಪಿಜಿ ಸಿಲಿಂಡರ್ ಸ್ಫೋಟಿಸಿದೆ ಎಂದು ಭಾವಿಸಲಾಗಿತ್ತು. ಆದರೆ ಕಾರಿನಲ್ಲಿ ಎಲ್‌ಪಿಜಿ ಸಿಲಿಂಡರ್ ಅಳವಡಿಸಿರಲಿಲ್ಲ ಎನ್ನುವುದು ತನಿಖೆಯಿಂದ ದೃಢಪಟ್ಟಿದೆ. ಸಮೀಪದಲ್ಲಿ ಸುಟ್ಟು ಹೋದ ಪ್ರೆಷರ್ ಕುಕರ್ ಪತ್ತೆಯಾಗಿದೆ.

ಪಂಜಾಬ್ ಡಿಜಿಪಿ ಸುರೇಶ ಅರೋರಾ ಅವರು ಇಂದು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News