×
Ad

ಸಜಿಪ ನಾಸಿರ್ ಕೊಲೆ ಪ್ರಕರಣ : ಆರೋಪಿಗಳ ಬಂಧನಕ್ಕೆ ಪಾಪ್ಯುಲರ್ ಫ್ರಂಟ್ ಆಗ್ರಹ

Update: 2017-02-01 17:38 IST

ಬಂಟ್ವಾಳ, ಫೆ. 1: ಸಜಿಪ ಮುನ್ನೂರು ಗ್ರಾಮದ ಮಲೈಬೆಟ್ಟು ನಿವಾಸಿ ಮುಹಮ್ಮದ್ ನಾಸಿರ್ ಕೊಲೆ ಮತ್ತು ಮುಹಮ್ಮದ್ ಮುಸ್ತಫಾ ಕೊಲೆ ಯತ್ನ ಪ್ರಕರಣದ ಆರೋಪಿಗಳ ಜಾಮೀನು ಅರ್ಜಿ ತಿರಸೃತಗೊಂಡಿದ್ದು  , ಕೂಡಲೇ ಎಲ್ಲ ಆರೋಪಿಗಳನ್ನು ಬಂಧಿಸುವಂತೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ತಾಲೂಕು ಘಟಕ ಆಗ್ರಹಿಸಿದೆ.

ಮೇಸ್ತ್ರಿ ಕೆಲಸ ಮಾಡುತ್ತಿದ್ದ ಮುಹಮ್ಮದ್ ನಾಸಿರ್ 2015 ಆಗಸ್ಟ್ 6ರಂದು ರಾತ್ರಿ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದಾಗ ದುಷ್ಕರ್ಮಿಗಳಿಂದ ಕೊಲೆಯಾಗಿದ್ದಾರೆ. ಇದೇ ವೇಳೆ ನಾಸಿರ್ ತೆರಳುತ್ತಿದ್ದ ಆಟೋ ರಿಕ್ಷಾ ಚಾಲಕ, ಅದೇ ಊರಿನ ಮುಸ್ತಫಾ ಎಂಬವರನ್ನು ಕೂಡಾ ದುಷ್ಕರ್ಮಿಗಳು ಕೊಲೆಗೆ ಯತ್ನಿಸಿದ್ದರು. ಈ ಪ್ರಕರಣದ ಮೂವರು ಆರೋಪಿಗಳಿಗೆ ದ.ಕ. ಜಿಲ್ಲಾ ನ್ಯಾಯಾಲಯ ತಿಂಗಳ ಒಳಗೆ ಜಾಮೀನು ನೀಡಿ ಬಿಡುಗಡೆಗೊಳಿಸಿತ್ತು. ಇದನ್ನು ಪ್ರಶ್ನಿಸಿ ನಾಸಿರ್ ಕುಟುಂಬ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ ರಾಜ್ಯ ಹೈಕೋರ್ಟ್ ಆರೋಪಿಗಳ ಜಾಮೀನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಆರೋಪಿಗಳು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನೂ ಕೂಡಾ ಸುಪ್ರೀಂ ಕೋರ್ಟ್ ವಜಾಗೊಳಿಸಿ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದಿರುವುದು ಸ್ವಾಗತಾರ್ಹವಾಗಿದೆ ಎಂದು ಪಿಎಫ್‌ಐ ತಿಳಿಸಿದೆ.

ಸುಪ್ರೀಂ ಕೋರ್ಟ್ ಆದೇಶ ಬಂದು ವಾರ ಕಳೆದರೂ ಈವರೆಗೆ ಆರೋಪಿಗಳ ಬಂಧನಕ್ಕೆ ಪೊಲೀಸರು ಪಯತ್ನಿಸಿಲ್ಲ. ಕೊಲೆಯಲ್ಲಿ ನೇರವಾಗಿ ನಾಲ್ವರು ಭಾಗಿಯಾಗಿದ್ದರೂ ಮೂವರನ್ನು ಮಾತ್ರ ಬಂಧಿಸಲಾಗಿದೆ. ಇನ್ನೋರ್ವ ಆರೋಪಿ ಮಂಚಿ ನಿವಾಸಿ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸ್ ಇಲಾಖೆ ಹೇಳುತ್ತಿದೆ. ಆತನ ಸಹಿತ ನಾಲ್ವರು ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಪಿಎಫ್‌ಐ ಆಗ್ರಹಿಸಿದೆ.

ಕುಟುಂಬಕ್ಕೆ ಆದಾರವಾಗಿದ್ದ ನಾಸಿರ್ ಕೊಲೆಯಿಂದ ಅವರ ಕುಟುಂಬ ಅನಾಥವಾಗಿದೆ. ನಾಸಿರ್ ಕುಟುಂಬಕ್ಕೆ ಸರಕಾರದಿಂದ ಲಭಿಸಬೇಕಾದ ನ್ಯಾಯಯುಕ್ತ ಪರಿಹಾರ ಇನ್ನೂ ದೊರೆತಿಲ್ಲ. ಶೀಘ್ರವೇ ಸರಕಾರ ನಾಸಿರ್ ಕುಟುಂಬಕ್ಕೆ ನ್ಯಾಯಯುಕ್ತ ಪರಿಹಾರ ಬಿಡುಗಡೆ ಮಾಡಬೇಕು ಎಂದು ಪಿಎಫ್‌ಐ ಬಂಟ್ವಾಳ ತಾಲೂಕು ಅಧ್ಯಕ್ಷ ಇಜಾಝ್ ಅಹ್ಮದ್ ಪತ್ರಿಕಾ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News