ಧಾರ್ಮಿಕ ಚಿಂತನೆಯಿಂದ ಮೌಲ್ಯ, ಮಾನವೀಯತೆ: ದಿನೇಶ್ ಗುಂಡೂರಾವ್
ಉಡುಪಿ, ಫೆ.1: ಬದುಕಿನಲ್ಲಿ ಮಾನವೀಯತೆ ಎಂಬುದು ಅತ್ಯಂತ ಮುಖ್ಯ. ಅದಕ್ಕೆ ಮೌಲ್ಯಗಳು ಅತಿಅಗತ್ಯ. ಮೌಲ್ಯಗಳನ್ನು ಧಾರ್ಮಿಕ ಚಿಂತನೆಯಿಂದ ಮಾತ್ರ ಪಡೆಯಲು ಸಾಧ್ಯ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಪರ್ಯಾಯ ಪೇಜಾವರ ಮಠ, ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಜಗದ್ಗುರು ಶ್ರೀಮಧ್ವಾಚಾರ್ಯರ ಸಪ್ತ ಶತಮಾನೋತ್ಸವದ ಪ್ರಯುಕ್ತ ಬುಧವಾರ ರಾಜಾಂಗಣದಲ್ಲಿ ಆಯೋಜಿಸಲಾದ ಸಭಾಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತಿದ್ದರು.
ಜೀವನದಲ್ಲಿ ಮನಶಾಂತಿ, ಜಂಜಾಟ, ಒತ್ತಡ ನಿವಾರಣೆಗೆ ಆಧ್ಯಾತ್ಮಿಕ ಸಂಪರ್ಕ ಅಗತ್ಯ. ಆಧ್ಯಾತ್ಮಿಕ ಚಿಂತನೆ ಇಲ್ಲದಿದ್ದರೆ ನಮ್ಮ ಬದುಕು ವ್ಯರ್ಥ. ಎಲ್ಲಕ್ಕಿಂತ ದೊಡ್ಡ ಶಕ್ತಿ ಮನಶಕ್ತಿ. ಅದನ್ನು ನಾವು ಅರಿತುಕೊಳ್ಳಬೇಕಾಗಿದೆ ಎಂದು ಅವರು ತಿಳಿಸಿದರು.
ಪರ್ಯಾಯ ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಇಡೀ ವಿಶ್ವದ ಸಜ್ಜನರಿಗೆ ಮೋಕ್ಷ ಇದೆ ಎಂದು ಹೇಳಿರುವ ಮಧ್ವಾಚಾರ್ಯರ ಬಗ್ಗೆ ತಪ್ಪು ಕಲ್ಪನೆಗಳನ್ನು ಹರಡಿಸಲಾಗುತ್ತಿತ್ತು. ಕೇವಲ ಬ್ರಾಹ್ಮಣ ರಿಗೆ ಮಾತ್ರ ಮೋಕ್ಷ ದೊರೆಯುತ್ತದೆ ಎಂಬುದಾಗಿ ಮಧ್ವಾಚಾರ್ಯರು ಹೇಳಿಲ್ಲ. ಅದಕ್ಕೆ ಅವರನ್ನು ನಾಡಗೀತೆಯಿಂದ ಕೈಬಿಡುವ ಪ್ರಯತ್ನ ನಡೆದಿತ್ತು. ದೇವರ ಭಕ್ತಿ ಇರುವ ದಲಿತರಿಗೂ ಮೋಕ್ಷ ದೊರೆಯುತ್ತದೆ ಎಂಬುದಾಗಿಯೂ ಮಧ್ವಾಚಾರ್ಯರು ತಮ್ಮ ಗ್ರಂಥದಲ್ಲಿ ಹೇಳಿದ್ದಾರೆ ಎಂದರು.
ಪೇಜಾವರ ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪಲಿಮಾರು ಮಠಾಧೀಶ ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ, ಅದಮಾರು ಕಿರಿಯ ಯತಿ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ, ಶ್ರೀಗುರುಪ್ರಿಯ ತೀರ್ಥ ಸ್ವಾಮೀಜಿ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಉಪಸ್ಥಿತರಿ ದ್ದರು. ಡಾ.ಆನಂದ ತೀರ್ಥ ನಾಗಸಂಪಿಗೆ, ಡಾ.ಅರಳುಮಲ್ಲಿಗೆ ಪಾರ್ಥ ಸಾರಥಿ ಉಪನ್ಯಾಸ ನೀಡಿದರು.
‘ಕೃಷ್ಣರಿಗೆ ರಾಷ್ಟ್ರಪತಿ, ಪಿಎಂ ಆಗುವ ಆಸೆ ಇದ್ದಿರಬೇಕು’
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಇನ್ನು ಹೆಚ್ಚಿನ ಸ್ಥಾನಮಾನದ ನಿರೀಕ್ಷೆ ಇಟ್ಟುಕೊಂಡಿರಬೇಕು. ದೇಶದ ರಾಷ್ಟ್ರಪತಿ, ಪ್ರಧಾನ ಮಂತ್ರಿ ಆಗಬೇಕೆಂಬ ಆಸೆ ಅವರಿಗೆ ಇದ್ದಿರಬೇಕು. ಪಕ್ಷ ಅದನ್ನು ಪೂರೈಸಿಲ್ಲ ಎಂಬ ಕಾರಣಕ್ಕೆ ಅವರಿಗೆ ನೋವು ಆಗಿ ಪಕ್ಷ ಬಿಟ್ಟಿರಬಹುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಉಡುಪಿ ಶ್ರೀಕೃಷ್ಣ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿಯರಾದ ಕೃಷ್ಣ ಅವರು ನಮ್ಮ ಪಕ್ಷವನ್ನು ಬಿಟ್ಟು ಹೋಗಿರುವುದು ಎಲ್ಲ ಕಾರ್ಯಕರ್ತರಿಗೆ ನೋವಿನ ಸಂಗತಿ. ಅವರ ಇಂತಹ ತೀರ್ಮಾನ ಆಘಾತ, ನೋವು ತಂದಿದೆ. ವೈಯಕ್ತಿಕವಾಗಿ ಪಕ್ಷದಿಂದ ತೊಂದರೆ ಆಗಿದೆ ಎಂಬುದಾಗಿ ಅವರು ಸ್ಪಷ್ಟವಾಗಿ ಹೇಳಿಕೊಂಡಿದ್ದಾರೆ. ನಮ್ಮ ಮುಖಂಡರು ಈಗಾಗಲೇ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂದರು.