×
Ad

ವಾಕ್ಚಾತುರ್ಯದ ಗಿಮಿಕ್ : ಸಿಪಿಐ-ಎಂ ಟೀಕೆ

Update: 2017-02-01 20:34 IST

ಹೊಸದಿಲ್ಲಿ, ಫೆ.1:ಕೇವಲ ವಾಕ್ಚಾತುರ್ಯದ, ಸೇಡಿನ ಬಜೆಟ್ ಎಂದು ಸಿಪಿಐ-ಎಂ ಟೀಕಿಸಿದೆ. ಸ್ಥಳೀಯ ಬೇಡಿಕೆ ಅಥವಾ ಉದ್ಯೋಗಾವಕಾಶ ಹೆಚ್ಚಿಸುವಲ್ಲಿ ಯಾವುದೇ ರೀತಿಯಲ್ಲಿ ನೆರವಾಗದ ಈ ಬಜೆಟ್‌ನಲ್ಲಿ ಅಪರೋಕ್ಷ ತೆರಿಗೆ ಹೆಚ್ಚಿಸುವ ಮೂಲಕ ಸಂಪನ್ಮೂಲ ಕ್ರೋಢೀಕರಿಸಲು ಸರಕಾರ ಉದ್ದೇಶಿಸಿದೆ . ವಾಕ್ಚಾತುರ್ಯ ಪ್ರದರ್ಶಿಸುವ ಪ್ರಧಾನಿ ಮತ್ತು ಬಿಜೆಪಿಯ ಅಧ್ಯಕ್ಷರ ಚಾಳಿ ಈಗ ವಿತ್ತ ಸಚಿವರಿಗೂ ತಟ್ಟಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಸುದ್ದಿಗಾರರಿಗೆ ತಿಳಿಸಿದರು.

ಆಂತರಿಕ ಬೇಡಿಕೆ ಹೆಚ್ಚಿಸುವತ್ತ ಸರಕಾರ ಕಾರ್ಯ ಪ್ರವತ್ತರಾಗಬೇಕು ಎಂದು ಇತ್ತೀಚಿನ ಆರ್ಥಿಕ ಸಮೀಕ್ಷೆಯಲ್ಲಿ ಹೇಳಲಾಗಿದ್ದರೂ ಬಜೆಟ್ ಇದಕ್ಕೆ ಸಂಪೂರ್ಣ ತದ್ವಿರುದ್ದವಾಗಿದೆ. ಇದು ಅಭಿವೃದ್ಧಿಯ ಬಜೆಟ್ ಅಲ್ಲ, ದ್ವೇಷದ ಬಜೆಟ್ ಎಂದವರು ಹೇಳಿದರು. ಬಜೆಟ್‌ನಲ್ಲಿ ಕಳೆದ ವರ್ಷದ ಜಿಡಿಪಿ ಶೇ.13.36 , ಈ ವರ್ಷದ ಜಿಡಿಪಿ 12.74 ಎಂದು ತಿಳಿಸಲಾಗಿದೆ. ಈ ವರ್ಷದ ಬಜೆಟ್‌ನಲ್ಲಿ ರೈಲ್ವೇಯ ಆದಾಯವನ್ನೂ ಸೇರಿಸಲಾಗಿದೆ ಎಂಬುದನ್ನು ಗಮನಿಸಬೇಕು ಎಂದು ಯೆಚೂರಿ ತಿಳಿಸಿದರು.

ಆರ್ಥಿಕ ಕ್ರೋಢೀಕರಣದ ಕುರಿತ ಸಚಿವ ಜೇಟ್ಲೀ ಹೇಳಿಕೆಯನ್ನು ಉಲ್ಲೇಖಿಸಿದ ಯೆಚೂರಿ, ಕಳೆದ ವರ್ಷ ಶೇ.3.5ರಷ್ಟಿದ್ದ ವಿತ್ತೀಯ ಕೊರತೆ , ಶೇ.3.2ಕ್ಕೆ ಇಳಿಯಲು ಕಾರಣ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅಬ್ಕಾರಿ ಸುಂಕದ ಹೆಚ್ಚಳ ಕಾರಣ ಎಂದರು.

ಸರಕಾರವು ಸೇವಾ ತೆರಿಗೆ, ಅಬ್ಕಾರಿ ಮತ್ತು ಸೀಮಾ ಸುಂಕ ಹೆಚ್ಚಿಸುವ ಮೂಲಕ 60 ಸಾವಿರ ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಿದೆ. ಇದು ಜನಸಾಮಾನ್ಯರ ಮೇಲೆ ತೀವ್ರ ಹೊರೆಯಾಗಿದೆ. ಬ್ಯಾಂಕ್‌ಗಳ ಅನುತ್ಪಾದಕ ಆಸ್ತಿ(ಎನ್‌ಪಿಎ) ವಸೂಲಿ ಮಾಡುವ ಕುರಿತು ಉಲ್ಲೇಖವಿಲ್ಲ. ದೇಶಬಿಟ್ಟು ತಲೆಮರೆಸಿಕೊಂಡ ಸುಸ್ತಿದಾರರ ಮೇಲೆ ಮಾತ್ರ ಕ್ರಮ ಕೈಗೊಳ್ಳುವ ಸಂಪ್ರದಾಯವನ್ನು ಸರಕಾರ ಅನುಸರಿಸುತ್ತಿದೆ ಎಂದು ಟೀಕಿಸಿದ ಯೆಚೂರಿ, ಬಜೆಟ್‌ನ ಮೊತ್ತ 24 ಲಕ್ಷ ಕೋಟಿ ರೂ. ದೇಶದ ಬ್ಯಾಂಕ್‌ಗಳಲ್ಲಿರುವ ಎನ್‌ಪಿಎ ಮೊತ್ತ 11 ಲಕ್ಷ ಕೋಟಿ ರೂ. ಎಂದು ವಿವರಿಸಿದರು.

  ಎಫ್‌ಐಪಿಬಿ ರದ್ದುಗೊಳಿಸುವ ಪ್ರಸ್ತಾವನೆಯ ಮೂಲಕ ಎಫ್‌ಡಿಐ ಸ್ವಯಂ ಹೆಚ್ಚಲು ಸರಕಾರ ದಾರಿ ಮಾಡಿಕೊಟ್ಟಿದೆ. ವಿದೇಶಿ ಬಂಡವಾಳಕ್ಕೆ ಇನ್ನು ಯಾವುದೇ ನಿಯಂತ್ರಣ ಇರದು ಎಂದು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News