×
Ad

ತೆಂಗು ಬೆಳೆಯ ಕಪ್ಪು ತಲೆ ಹುಳು ಬಾಧೆಗೆ ಪರಿಹಾರೋಪಾಯ

Update: 2017-02-01 20:42 IST

ಉಳ್ಳಾಲ , ಫೆ. 1 : ಜಿಲ್ಲೆಯಾದ್ಯಂತ ಇತ್ತೀಚೆಗೆ ತೆಂಗಿನ ಮರದ ಗರಿಗಳಿಗೆ ಕಪ್ಪುತಲೆ ಹುಳು ಬಾಧೆಯು ಆವರಿಸಿ ಸಂಪೂರ್ಣ ಬೆಳೆಯು ನಶಿಸುತ್ತಿದ್ದು , ತೆಂಗು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ.

ತೆಂಗು ಬೆಳೆಗೆ ಬಂದಿರುವ ಕಪ್ಪು ತಲೆ ಹುಳು ಬಾಧೆಗೆ ದಕ್ಷಿಣ ಕನ್ನಡ ತೋಟಗಾರಿಕೆ ಇಲಾಖೆ, ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಕೇಂದ್ರ ಕಾಸರಗೋಡು ಮತ್ತು ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ಜಂಟಿಯಾಗಿ ಪರಿಸರ ಸ್ನೇಹಿ ಜೈವಿಕ ವಿಧಾನವನ್ನು ಕಂಡುಕೊಂಡಿದ್ದು , ಈ ಹಿನ್ನೆಲೆಯಲ್ಲಿ ಬುಧವಾರ ತೊಕ್ಕೊಟ್ಟಿನ ಕಲ್ಲಾಪುವಿನಲ್ಲಿರುವ ಖಾಸಗಿ ಜಮೀನಿನ ತೆಂಗಿನ ತೋಟದಲ್ಲಿ ತೆಂಗು ಬೆಳೆಗಾರರಿಗಾಗಿ ಮಾಹಿತಿ ಶಿಬಿರವನ್ನು ಏರ್ಪಡಿಸಲಾಯಿತು.

ಶಿಬಿರದಲ್ಲಿ ರೈತರಿಗೆ ತೋಟಗಾರಿಕಾ ವಿಜ್ಞಾನಿಗಳು ಪರೋಪಜೀವಿಗಳನ್ನು ತೆಂಗಿನ ಮರಗಳಿಗೆ ಬಿಟ್ಟು ಕಪ್ಪುತಲೆ ಹುಳು ಬಾಧೆಯನ್ನು ತಡೆಗಟ್ಟುವುದರ ಬಗ್ಗೆ ಪ್ರಾತ್ಯಕ್ಷಿಕೆಯನ್ನು ತೋರಿಸಿದರು.

ಜಿಲ್ಲೆಯಲ್ಲಿ ತೆಂಗಿನ ಮರಗಳಿಗೆ ಕಪ್ಪುತಲೆ ಹುಳುಗಳಿಂದ ಈಗಾಗಲೇ ಸಾಕಷ್ಟು ಹಾನಿಯುಂಟಾಗಿದ್ದು  , ಇದು ಹೀಗೇ ಮುಂದುವರಿದಲ್ಲಿ ತೆಂಗಿನ ಬೆಳೆಯೇ ಸಂಪೂರ್ಣವಾಗಿ ನಶಿಸುವ ಭೀತಿಯುಂಟಾಗಿದೆ. ರಾಸಾಯನಿಕ ಸಿಂಪಡನೆ ನಡೆಸಿದಲ್ಲಿ ರೈತರು ತಕ್ಷಣಕ್ಕೆ ಮರದ ಸೀಯಾಳಗಳನ್ನು ಮಾರುಕಟ್ಟೆಗೆ ಮಾರಾಟ ಮಾಡುವುದರಿಂದ ರೋಗಗಳು ಉಲ್ಬಣಿಸಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳೇ ಹೆಚ್ಚು. ಪರಿಣಿತ ವಿಜ್ಞಾನಿಗಳು ಸೇರಿ ಕಪ್ಪು ತಲೆ ಹುಳು ಬಾಧೆಯನ್ನು ನಿಯಂತ್ರಿಸಲು ಪರೋಪಜೀವಿಗಳನ್ನು ಬಳಸುವ ಜೈವಿಕ ವಿಧಾನವನ್ನು ಕಂಡುಕೊಂಡಿದ್ದು,ಇದರ ಬಳಸುವಿಕೆಯ ಬಗ್ಗೆ ರೈತರಿಗೆ ಅರಿವು ಮೂಡಿಸುವ ಕೆಲಸವನ್ನು ಮಾಡಿದರು.

ಜೈವಿಕ ವಿದಾನದಿಂದಲೇ ರೋಗ ನಿಯಂತ್ರಣ:

ತೋಟಗಾರಿಕಾ ವಿಜ್ಞಾನಿಗಳು ಕಪ್ಪುತಲೆಯ ಹುಳುಗಳನ್ನು ತಿಂದು ಬದುಕುವಂತಹ ಪರೋಪಜೀವಿ ಹುಳುಗಳನ್ನು ಅವಿಷ್ಕರಿಸಿದ್ದು ಅದನ್ನು ಪ್ರಯೋಗಾಲಾಯದಿಂದ ಸಂಸ್ಕರಿಸಿ ತಂದು ಕಪ್ಪುತಲೆ ಹುಳು ಬಾಧಿತ ತೆಂಗಿನ ಮರಗಳಿಗೆ ಬಿಡಲಾಗುತ್ತದೆ. ಹೀಗೆ ಬಿಟ್ಟ ಪರೋಪಜೀವಿ ಹುಳುಗಳು ತೆಂಗಿನ ಮರವನ್ನೇ ಅವಲಂಬಿಸಿ ಅದನ್ನು ಬಿಟ್ಟು ಹೋಗದೆ ತುದಿವರೆಗೆ ಹೋಗಿ ಗರಿಗಳಲ್ಲಿ ಬಾಧೆ ನೀಡುವ ಕಪ್ಪುತಲೆ ಹುಳುಗಳನ್ನು ತಿಂದು ಮುಗಿಸುತ್ತವೆ. ಇದರಿಂದ ಜೈವಿಕ ವಿಧಾನದಲ್ಲೇ ಬಾಧೆಯನ್ನು ತಡೆಗಟ್ಟಲು ಸಾಧ್ಯವಾಗಿದ್ದು, ಯಾವುದೇ ರಾಸಾಯನಿಕಗಳನ್ನು ಪ್ರಯೋಗಿಸುವ ಅಗತ್ಯ ಬೀಳದು. ಈ ಜೈವಿಕ ವಿಧಾನದಲ್ಲಿ ಕಪ್ಪುತಲೆ ಹುಳು ಬಾಧೆಯನ್ನು ನಿಯಂತ್ರಿಸಲು ಕನಿಷ್ಠ 7,8 ತಿಂಗಳುಗಳ ಕಾಲಾವಕಾಶ ತಗಲುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಕೇಂದ್ರ ಕಾಸರಗೋಡುವಿನ ನಿರ್ದೇಶಕ ಡಾ.ಪಿ.ಚೌಡಪ್ಪ, ಮಂಗಳೂರು ತೋಟಗಾರಿಕಾ ಇಲಾಖಾ ಉಪನಿರ್ದೇಶಕರಾದ ಡಾ.ಯೋಗೀಶ್ ಹೆಚ್.ಆರ್, ವಿಜ್ಞಾನಿಗಳಾದ ಡಾ.ವಿನಾಯಕ ಹೆಗ್ಡೆ, ಡಾ ಡಾ.ಮನೊಜ್ ಕುಮಾರ್, ಮುಖ್ಯಸ್ಥರಾದ ಬಸವರಾಜು, ಪ್ರತಿಭಾ ಬಿ.ಎಸ್, ಹರೀಶ್ ಮೊದಲಾವರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News