ಕ್ರೀಡಾ ಇಲಾಖೆಗೆ ಬಂಪರ್ ಕೊಡುಗೆ
ಹೊಸದಿಲ್ಲಿ, ಫೆ.1: ಈ ಬಾರಿಯ ಬಜೆಟ್‌ನಲ್ಲಿ ಕ್ರೀಡಾ ಇಲಾಖೆಗೆ 350 ಕೋಟಿ ರೂ.ನಷ್ಟು ಅನುದಾನ ಹೆಚ್ಚಳವಾಗಿದೆ. ಕಳೆದ ವರ್ಷ ಕ್ರೀಡಾಕ್ಷೇತ್ರಕ್ಕೆ 1592 ಕೋಟಿ ನಿಗದಿಯಾಗಿದ್ದರೆ, ಈ ಬಾರಿಯ ಬಜೆಟ್‌ನಲ್ಲಿ 1943 ಕೋಟಿ ರೂ. ಪ್ರಸ್ತಾವಿಸಲಾಗಿದೆ. 2018ರಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟ ಹಾಗೂ ಏಶಿಯನ್ ಗೇಮ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತೀಯ ಸ್ಪರ್ಧಿಗಳ ತರಬೇತಿಯ ಹಿನ್ನೆಲೆಯಲ್ಲಿ ಈ ಹೆಚ್ಚಳವಾಗಿದೆ. ಕಳೆದ ರಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತೀಯರ ಕಳಪೆ ಸಾಧನೆ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಕ್ರೀಡಾಕ್ಷೇತ್ರಕ್ಕೆ ಹೆಚ್ಚಿನ ಸಹಕಾರ ನೀಡಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಸ್ಪರ್ಧಿಗಳ ಸಾಧನೆ ಸುಧಾರಿಸಬೇಕೆಂದು ಪಣತೊಟ್ಟಿದೆ.
ರಾಷ್ಟ್ರೀಯ ತರಬೇತಿ ಶಿಬಿರಗಳನ್ನು ಆಯೋಜಿಸುವ ಕಾರ್ಯ ನಿರ್ವಹಿಸುವ ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ 481 ಕೋಟಿ ರೂ. ಅನುದಾನದ ಘೋಷಣೆ ಮಾಡಲಾಗಿದೆ. ಕಳೆದ ಬಜೆಟ್‌ನಲ್ಲಿ ಈ ಮೊತ್ತ 416 ಕೋಟಿ ಆಗಿತ್ತು. ಆದರೆ ವಿಕಲಾಂಗರ ಕ್ರೀಡಾ ಪ್ರೋತ್ಸಾಹಕ್ಕೆ ಕಳೆದ ಬಜೆಟ್‌ನಲ್ಲಿ 4 ಕೋಟಿ ಮೀಸಲಿರಿಸಿದ್ದರೆ ಈ ಬಜೆಟ್‌ನಲ್ಲಿ ಕೇವಲ 1 ಲಕ್ಷ ಮೀಸಲಿರಿಸಲಾಗಿದೆ. ರಾಷ್ಟ್ರೀಯ ಕ್ರೀಡಾ ಸಂಘಟನೆಗೆ 302 ಕೋಟಿ (ಕಳೆದ ಬಜೆಟ್‌ನಲ್ಲಿ 185 ಕೋಟಿ ರೂ.), ಈಶಾನ್ಯ ರಾಜ್ಯಗಳಿಗೆ ನೆರವು ಯೋಜನೆಯಡಿ 148.4 ಕೋಟಿ ರೂ.(ಕಳೆದ ಬಜೆಟ್‌ನಲ್ಲಿ 131.33 ಕೋಟಿ) ನೀಡಲಾಗಿದೆ. ಜಮ್ಮು-ಕಾಶ್ಮೀರದಲ್ಲಿ ಕ್ರೀಡಾಭಿವೃದ್ಧಿಗೆ ಮೀಸಲಿರಿಸಿದ ಮೊತ್ತ ಕಳೆದ ಬಜೆಟ್‌ಷ್ಟೇ ಅಂದರೆ, 75 ಕೋಟಿ ರೂ. ಎನ್‌ಸಿಸಿಗೆ 144 ಕೋಟಿ ರೂ.(ಕಳೆದ ಬಜೆಟ್‌ನಲ್ಲಿ 137.50 ಕೋಟಿ ರೂ.), ರಾಷ್ಟ್ರೀಯ ಕ್ರೀಡಾಭಿವೃದ್ಧಿ ನಿಧಿಗೆ 5 ಕೋಟಿ ಕೊಡುಗೆ(ಕಳೆದ ವರ್ಷ 2 ಕೋಟಿ ರೂ.) ಮೀಸಲಿರಿಸಲಾಗಿದೆ.
ಆದರೆ ದೇಶದಲ್ಲಿ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ತರಬೇತಿ ನೀಡುವ ಯೋಜನೆಗೆ ಕೇವಲ 50 ಲಕ್ಷ ಮೀಸಲಿರಿಸಲಾಗಿದೆ. ಅದಾಗ್ಯೂ, ಖೇಲೋ ಇಂಡಿಯಾ ಯೋಜನೆಯಡಿ ನೀಡಲಾಗುವ ಮೊತ್ತವನ್ನು 140 ಕೋಟಿ ರೂ.ನಿಂದ 350 ಕೋಟಿ ರೂ.ಗೆ ಹೆಚ್ಚಿಸಲಾಗಿದೆ.