ಉತ್ತಮ ಬಜೆಟ್: ಮೋದಿ

Update: 2017-02-01 15:33 GMT

ಹೊಸದಿಲ್ಲಿ, ಫೆ. 1: ‘‘ಹಣಕಾಸು ಸಚಿವ ಅರುಣ್ ಜೇಟ್ಲಿ ಬಡವರ ಕೈಗಳನ್ನು ಬಲಪಡಿಸಿದ್ದಾರೆ, ಹಾಗಾಗಿ, ಅವರು ಉತ್ತಮ ಬಜೆಟ್ ಮಂಡಿಸಿದ್ದಾರೆ’’ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಹೇಳಿದ್ದಾರೆ.

 ಬಜೆಟ್ ಸಿದ್ಧಪಡಿಸಿದ ತಂಡವೂ ಮೆಚ್ಚುಗೆ ಮತ್ತು ಅಭಿನಂದನೆಗೆ ಅರ್ಹವಾಗಿದೆ, ಯಾಕೆಂದರೆ, ಅದು ಎಲ್ಲ ಕ್ಷೇತ್ರಗಳ ಹಿತಕ್ಕಾಗಿ ಕ್ರಮಗಳನ್ನು ತೆಗೆದುಕೊಂಡಿದೆ’’ ಎಂದು ಹಣಕಾಸು ಸಚಿವರ ಲೋಕಸಭೆಯಲ್ಲಿ ಬಜೆಟ್ ಮಂಡಿಸಿದ ಬಳಿಕ ಮಾತನಾಡಿದ ಪ್ರಧಾನಿ ಹೇಳಿದರು.
‘‘ಕೇಂದ್ರದ ‘ಕಪ್ಪು ಹಣದ ವಿರುದ್ಧದ ಹೋರಾಟ’ವನ್ನು ಗಮನದಲ್ಲಿಟ್ಟುಕೊಂಡಿರುವ ಬಜೆಟ್, ಭ್ರಷ್ಟಾಚಾರ ಮತ್ತು ಕಪ್ಪುಹಣದ ವಿರುದ್ಧ ಬದ್ಧತೆ ವ್ಯಕ್ತಪಡಿಸಿದೆ’’ ಎಂದು ಪ್ರಧಾನಿ ಹೇಳಿದರು.

ನವೆಂಬರ್ 8ರ ನೋಟ್ ನಿಷೇಧದ ಜೊತೆಗೆ ಬಜೆಟ್‌ನ ಈ ಪ್ರಸ್ತಾಪಗಳು ದೇಶದ ಆರ್ಥಿಕ ಕ್ಷೇತ್ರವನ್ನು ಶುದ್ಧೀಕರಣ ಮಾಡುವಲ್ಲಿ ಮಹತ್ತ್ವ ಪಾತ್ರ ವಹಿಸಬಲ್ಲವು ಎಂದರು.

ದೇಶದಲ್ಲಿ ಭಾರೀ ಬದಲಾವಣೆಗಳಾಗುತ್ತಿವೆ ಎಂದು ಪ್ರಧಾನಿ ಹೇಳಿದರು.

‘‘ಈ ಬಜೆಟ್ ಹಲವು ರೀತಿಗಳಲ್ಲಿ ನಮ್ಮ ದೇಶದಲ್ಲಿ ನಡೆಯುತ್ತಿರುವ ಬದಲಾವಣೆಗಳಿಗೆ ಪೂರಕವಾಗಿದೆ’’ ಎಂದರು.
‘‘ಈ ಬಜೆಟನ್ನು ಹಳ್ಳಿಗಳು ಮತ್ತು ರೈತರ ಅಭಿವೃದ್ಧಿಗಾಗಿ ಹಾಗೂ ಮಹಿಳೆಯರ ಸಬಲೀಕರಣಕ್ಕಾಗಿ ಮೀಸಲಿಡಲಾಗಿದೆ’’ ಎಂದು ಮೋದಿ ನುಡಿದರು.
‘‘ಇದರ ಉದ್ದೇಶ ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿದೆ’’ ಎಂದರು.

ಇತಿಹಾಸದಲ್ಲೇ ಮೊದಲ ಬಾರಿಗೆ ಸಾಮಾನ್ಯ ಬಜೆಟ್‌ನ ಜೊತೆಗೆ ರೈಲ್ವೆ ಬಜೆಟನ್ನು ಮಂಡಿಸಲಾಗಿದೆ.
‘‘ರೈಲ್ವೆ ಬಜೆಟನ್ನು ಸಾಮಾನ್ಯ ಬಜೆಟ್ ಜೊತೆ ವಿಲೀನಗೊಳಿಸಿರುವುದು ಸಾರಿಗೆ ಕ್ಷೇತ್ರದ ಬೆಳವಣಿಗೆಗೆ ದೇಣಿಗೆ ನೀಡಲಿದೆ’’ ಎಂದು ಅವರು ಅಭಿಪ್ರಾಯಪಟ್ಟರು.

‘‘ರೈಲು ಸುರಕ್ಷತಾ ನಿಧಿಯ ಸ್ಥಾಪನೆಯು ರೈಲು ಮೂಲಸೌಕರ್ಯ ಕ್ಷೇತ್ರದಲ್ಲಿನ ವಿನಿಯೋಗವನ್ನು ಹೆಚ್ಚಿಸಲು ತೆಗೆದುಕೊಳ್ಳಲಾದ ಪ್ರಮುಖ ಕ್ರಮವಾಗಿದೆ’’ ಎಂದು ಪ್ರಧಾನಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News