ಯುಪಿಎ ವೈಫಲ್ಯದ ಸ್ಮಾರಕ ಎಂದು ಮೋದಿ ಹೇಳಿದ್ದ ಈ ಯೋಜನಗೆ ಬಜೆಟ್ ನಲ್ಲಿ ಸಾವಿರಾರು ಕೋಟಿ ಅನುದಾನ !
ಹೊಸದಿಲ್ಲಿ: ಯುಪಿಎ ವೈಫಲ್ಯದ ಸ್ಮಾರಕ ಎಂದು ಮೋದಿ ಹೇಳಿದ್ದ ಯೋಜನೆಗೆ ಪ್ರತಿ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಸಾವಿರಾರು ಕೋಟಿ ರೂಪಾಯಿ ಅನುದಾನ ನೀಡುತ್ತಿದ್ದು, ಈ ಪ್ರವೃತ್ತಿ ಪ್ರಸಕ್ತ ಬಜೆಟ್‌ನಲ್ಲೂ ಮುಂದುವರಿದಿದೆ. 2017-18ನೇ ಸಾಲಿನಲ್ಲಿ ಈ ಯೋಜನೆಗೆ 48 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಲು ನಿರ್ಧರಿಸಲಾಗಿದೆ.
2016-17ನೇ ಸಾಲಿನಲ್ಲಿ ಈ ಯೋಜನೆಗೆ 37 ಸಾವಿರ ಕೋಟಿ ರೂಪಾಯಿ ನಿಗದಿಪಡಿಸಲಾಗಿತ್ತು. ಇದು ಯಾವುದೇ ಸರ್ಕಾರ ಈ ಯೋಜನೆಗೆ ಬಿಡುಗಡೆ ಮಾಡಿದ ಗರಿಷ್ಠ ಅನುದಾನವಾಗಿದೆ ಎಂದು ಅರುಣ್ ಜೇಟ್ಲಿ ಬಜೆಟ್ ಭಾಷಣದಲ್ಲಿ ವಿವರಿಸಿದರು.
ಕಳೆದ ಕೆಲ ವರ್ಷಗಳಲ್ಲಿ ಈ ಯೋಜನೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಗಣನೀಯವಾಗಿ ಹೆಚ್ಚಿದೆ. ಹಿಂದಿನ ವರ್ಷ ಶೇಕಡ 45ರಷ್ಟಿದ್ದ ಮಹಿಳೆಯರ ಪಾಲ್ಗೊಳ್ಳುವಿಕೆ ಪ್ರಮಾಣ, ಇದೀಗ 55 ಶೇಕಡಕ್ಕೆ ಹೆಚ್ಚಿದೆ ಎಂದು ಸಚಿವರು ವಿವರಿಸಿದರು. ಎಂ-ನರೇಗಾ ಯೋಜನೆಯ ಮೇಲ್ತನಿಖೆಗೆ ಉಪಗ್ರಹ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಿದರು.
ಸರ್ಕಾರ ಉದ್ಯೋಗ ಸೃಷ್ಟಿಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆ ನೀಡಿದ ಬೆನ್ನಲ್ಲೇ ಕೇಂದ್ರದ ಈ ಹೊಸ ನಿರ್ಧಾರ ಪ್ರಕಟವಾಗಿದೆ. ಗ್ರಾಮೀಣ ಉದ್ಯೋಗ ಸೃಷ್ಟಿಗೆ ನರೇಗಾ ಸೇರಿದಂತೆ ಉದ್ಯೋಗ ಸೃಷ್ಟಿಗೆ 70ಕ್ಕೂ ಹೆಚ್ಚು ಯೋಜನೆಗಳನ್ನು ಪ್ರಕಟಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು, ರಾಹುಲ್‌ಗೆ ತಿರುಗೇಟು ನೀಡಿದ್ದಾರೆ.
ನರೇಗಾ ಯೋಜನೆಯಡಿ ಪಾವತಿ ಮಾಡಬೇಕಾದ ಹಣದ ಪೈಕಿ ಶೇಕಡ 52.42ರಷ್ಟು ವಿಳಂಬವಾಗಿದೆ ಎಂದು ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ವೇಳೆ ಗ್ರಾಮೀಣಾಭಿವೃದ್ಧಿ ಖಾತೆ ರಾಜ್ಯ ಸಚಿವ ರಾಮ್ ಕೃಪಾಲ್ ಯಾದವ್ ಕಳೆದ ಅಧಿವೇಶನದಲ್ಲಿ ಒಪ್ಪಿಕೊಂಡಿದ್ದರು.