ವೆನ್ಲಾಕ್ ಆಸ್ಪತ್ರೆ ವೈದ್ಯನಿಂದ ಹಲ್ಲೆ : ಆರೋಪ
ಮಂಗಳೂರು, ಫೆ. 1: ನಗರದ ವೆನ್ಲಾಕ್ ಆಸ್ಪೆತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ತನ್ನ ತಾಯಿಗೆ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ ಎಂದು ಹಿರಿಯ ಅಧಿಕಾರಿಗಳಿಗೆ ದೂರು ನೀಡಿರುವುದರಿಂದ ಕೆರಳಿದ ಆಸ್ಪತ್ರೆಯ ವೈದ್ಯ ಮತ್ತಿತರು ತನ್ನ ಮೇಲೆ ಹಲ್ಲೆ ನಡೆಸಿ ಆಸ್ಪತ್ರೆ ಪ್ರವೇಶಿಸದಂತೆ ಬೆದರಿಕೆ ಒಡ್ಡಿದ್ದಾರೆ ಎಂದು ಉಡುಪಿ ಹಿರಿಯಡ್ಕದ ಸುಬ್ರಹ್ಮಣ್ಯ ಎಂಬವರು ಐಜಿಪಿ ಹರಿಶೇಖರನ್ ಅವರಿಗೆ ದೂರು ನೀಡಿದ್ದಾರೆ.
ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವ ಸುಬ್ರಹ್ಮಣ್ಯರ ತಾಯಿ ಸರೋಜಮ್ಮ ಅವರ ಕಾಲಲ್ಲಿ ಗ್ರಾಂಗ್ರೀನ ಆಗಿ ಕಳೆದ ಡಿ.30ರಂದು ಉಡುಪಿಯ ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸುಮಾರು 15 ದಿನಗಳ ಕಾಲ ಚಿಕಿತ್ಸೆ ಪಡೆದ ಅವರು ಹೆಚ್ಚಿನ ಚಿಕಿತ್ಸೆಗಾಗಿ ಜ.14ರಂದು ಆಸ್ಪತ್ರೆಯಿಂದ ಬಿಡುಗಡೆಗೊಂಡು ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದಾಖಲಾಗಿ 15 ದಿನಗಳು ಕಳೆದರೂ ವೈದ್ಯರು ಸರಿಯಾಗಿ ಚಿಕಿತ್ಸೆ ನೀಡುತ್ತಿರಲ್ಲಿ. ಈ ಬಗ್ಗೆ ಸರೋಜಮ್ಮ ಅವರು ಜಿಲ್ಲಾಧಿಕಾರಿಗೆ ದೂರು ನೀಡಿದ್ದರು.
ಇದರಿಂದ ಕೆರಳಿದ ವೆನ್ಲಾಕ್ ಆಸ್ಪತ್ರೆಯ ವೈದ್ಯ ರವಿ ಮತ್ತಿತರರು ಜ. 30ರಂದು ಸಂಜೆ 6 ಗಂಟೆ ಹೊತ್ತಿಗೆ ನನ್ನನ್ನು ಕಾಲಿನಿಂದ ಹೊಟ್ಟೆ ಹಾಗೂ ಗುಪ್ತಾಂಗ ಭಾಗಗಳಿಗೆ ತುಳಿದು ಹಲ್ಲೆ ನಡೆಸಿ ಮತ್ತೆ ಆಸ್ಪತ್ರೆಗೆ ಬಂದರೆ ಆಸ್ಪತ್ರೆಯ ಹೊರಗಿರುವ ಮರಕ್ಕೆ ನಿನ್ನನ್ನು ನೇತಾಡಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಸುಬ್ರಹ್ಮಣ್ಯ ಆರೋಪ ಮಾಡಿದ್ದಾರೆ.
ಇದೀಗ ಕಳೆದ ಮೂರು ದಿನಗಳಿಂದ ನಾನು ಆಸ್ಪತ್ರೆಗೆ ಹೋಗಿಲ್ಲ. ನನ್ನ ತಾಯಿ ಯಾವ ಸ್ಥಿತಿಯಲ್ಲಿದ್ದಾರೆ ಗೊತ್ತಿಲ್ಲ. ಅವರ ಊಟೋಪಚಾರವೆಲ್ಲಾ ನಾನೇ ನೋಡಬೇಕು.ಅಲ್ಲದೆ, ಡಾ.ವೈದ್ಯ ರವಿ ಆಂಗ್ಲ ಭಾಷೆಯಲ್ಲಿ ಕಾಗದದಲ್ಲಿ ಬರೆದು ಅದಕ್ಕೆ ನನ್ನ ಮತ್ತು ನನ್ನ ತಾಯಿಯಿಂದ ಸಹಿಯನ್ನು ಪಡೆದುಕೊಂಡಿದ್ದಾರೆ. ಇದೀಗ ಜೀವಬೆದರಿಕೆ ಒಳಗಾದ ನನಗೆ ಆಸ್ಪತ್ರೆಗೆ ಹೋಗಿ ತಾಯಿಯನ್ನು ನೋಡಿಕೊಳ್ಳಲು ಅವಕಾಶ ನೀಡಬೇಕೆಂದು ಹಾಗೂ ನನಗೆ ಮತ್ತು ನನ್ನ ತಾಯಿಗೆ ರಕ್ಷಣೆ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.