×
Ad

ಒಂಭತ್ತೂವರೆ ವರ್ಷದ ಮಂಗಳೂರಿನ ಈ ಬಾಲಕನಿಗೆ ಸ್ಕೇಟಿಂಗ್‌ನಲ್ಲಿ 64 ಪದಕಗಳು!

Update: 2017-02-01 23:22 IST

ಮಂಗಳೂರು, ಫೆ.1: ಸ್ಕೇಟಿಂಗ್ ಮಂಗಳೂರಿನ ಮಟ್ಟಿಗೆ ಅಪರೂಪದ ಕ್ರೀಡೆಯಾಗಿ ಗುರುತಿಸಿಕೊಂಡಿದ್ದರೂ ಇನ್ನಷ್ಟೇ 10 ವರ್ಷಗಳಿಗೆ ಕಾಲಿಡಬೇಕಿರುವ ಬಾಲಕ ಮುಹಮ್ಮದ್ ಶಾಮಿಲ್ ಅರ್ಷದ್, ರಾಷ್ಟ್ರ ಮಟ್ಟದಲ್ಲಿ ರೋಲರ್ ಸ್ಕೇಟಿಂಗ್‌ನಲ್ಲಿ 3 ಚಿನ್ನದ ಪದಕಗಳ ಸರದಾರ. ಮಾತ್ರವಲ್ಲ, ವೈಯಕ್ತಿಕ ಚಾಂಪಿಯನ್‌ಶಿಪನ್ನೂ ಗಳಿಸುವ ಮೂಲಕ ವಿಶೇಷ ಸಾಧನೆಯನ್ನು ತೋರಿ ಸ್ಕೇಟಿಂಗ್ ವಿಭಾಗದಲ್ಲಿ ಮಂಗಳೂರಿಗೆ ಹೊಸ ದಾಖಲೆಯನ್ನು ಒದಗಿಸಿದ್ದಾರೆ.

ಪ್ರಸಕ್ತ ಡೊಂಗರಕೇರಿಯ ಕೆನರಾ ಶಾಲೆಯಲ್ಲಿ 4ನೆ ತರಗತಿ ಕಲಿಯುತ್ತಿರುವ ಶಾಮಿಲ್, 2016ರ ಡಿಸೆಂಬರ್ 28 ರಿಂದ ಜನವರಿ 1-2017 ರ ವರೆಗೆ ಪಂಜಾಬ್‌ನ ಅಮೃತ್‌ಸರ್‌ನಲ್ಲಿ ನಡೆದ ಸಿಬಿಎಸ್‌ಇ ರಾಷ್ಟ್ರ ಮಟ್ಟದ ರೋಲರ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ 4ನೇ ಸ್ಥಾನ ಪಡೆದಿದ್ದರು. ಬಳಿಕ ಮೈಸೂರಿನಲ್ಲಿ ನಡೆದ ರಾಜ್ಯ ಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ 3ಚಿನ್ನದ ಪದಕ ಹಾಗೂ ವೈಯಕ್ತಿಕ ಚಾಂಪಿಯನ್‌ಶಿಪ್‌ನೊಂದಿಗೆ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದರು.

ಜನವರಿ 16 ರಿಂದ 23ರ ವರೆಗೆ ಬೆಂಗಳೂರಿನಲ್ಲಿ ನಡೆದ 54ನೇ ರಾಷ್ಟ್ರಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ 8-10 ವರ್ಷದ ವಿಭಾಗದಲ್ಲಿ 3 ಚಿನ್ನದ ಪದಕ ಹಾಗೂ ವೈಯಕ್ತಿಕ ಚಾಂಪಿಯನ್‌ಶಿಪ್ ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಹಾಗೂ ಅವಕಾಶ ಸಿಕ್ಕಿದ್ದಲ್ಲಿ ಒಲಿಪಿಂಕ್ಸ್‌ನಲ್ಲಿಯೂ ಭಾಗವಹಿಸುವ ಇರಾದೆಯೊಂದಿಗೆ ಶಾಮಿಲ್ ಸ್ಕೇಟಿಂಗ್ ತರಬೇತಿ ಮುಂದುವರಿಸುತ್ತಿದ್ದಾರೆ. ಹೈ ಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್‌ನ ಸದಸ್ಯನಾಗಿರುವ ಶಾಮಿಲ್‌ಗೆ ಪ್ರಸ್ತುತ ಮೋಹನ್‌ದಾಸ್‌ಕೆ. ತರಬೇತಿ ನೀಡುತ್ತಿದ್ದಾರೆ.

ತನ್ನ ಒಂಭತ್ತೂವರೆ ಹರೆಯದಲ್ಲೇ ಸ್ಕೇಟಿಂಗ್‌ನಲ್ಲಿ 64 ಹಾಗೂ ಇತರ ಸ್ಪರ್ಧೆಗಳಲ್ಲಿ ಐದು ಪದಕಗಳು ಸೇರಿದಂತೆ ಒಟ್ಟು 69 ಪದಕಗಳನ್ನು ಪಡೆದಿರುವುದು ಶಾಮಿಲ್‌ರವರ ಮಹತ್ವದ ಸಾಧನೆಯಾಗಿದೆ.

ನಗರದ ಮಣ್ಣಗುಡ್ಡ ನಿವಾಸಿ ಹಾಗೂ ಟ್ರಾನ್ಸ್‌ಪೋರ್ಟ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಅರ್ಷದ್ ಹುಸೇನ್ ಎಂ.ಎಸ್. ಹಾಗೂ ಯೆನೆಪೋಯ ಕಾಲೇಜಿನಲ್ಲಿ ಹಿಂದಿ ಉಪನ್ಯಾಸಕಿ ರಮ್ಲತ್ ಅರ್ಷದ್ ದಂಪತಿಯ ದ್ವಿತೀಯ ಪುತ್ರನಾಗಿರುವ ಮಾಸ್ಟರ್ ಮೊಹಮ್ಮದ್ ಶಾಮಿಲ್ ಅರ್ಷದ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಕೇಟಿಂಗ್‌ನಲ್ಲಿ ಚಾಂಪಿಯನ್ ಆಗುವ ಗುರಿ ಹೊಂದಿದ್ದಾರೆ.

  ಶಾಮಿಲ್‌ಗೆ ಎರಡೂವರೆ ವರ್ಷ ಪ್ರಾಯವಿರುವಾಗ ಆತನ ತಾಯಿ ರಮ್ಲತ್, ‘ಮಗು ಆಟವಾಡುತ್ತಿರಲಿ’ ಎಂದು ಅಂದು ಕಾಲಿಗೆ ಸ್ಕೇಟ್ ಕಟ್ಟಿದ್ದರು. ಆದರೆ, ಆ ಆಟದಲ್ಲೇ ಹೊಸತನವನ್ನು ಕಂಡ ಶಾಮಿಲ್ ನಾಲ್ಕರ ಹರೆಯದಲ್ಲೇ ಸ್ಕೇಟಿಂಗ್ ಬಗ್ಗೆ ಆಸಕ್ತಿ ತೋರಿದಾಗ ಆತನಿಗೆ ಸ್ಕೇಟಿಂಗ್ ತರಬೇತಿಗೆ ಆತನ ಹೆತ್ತವರು ಮುಂದಾದರು. ಶಾಮಿಲ್‌ಗೆ ಸ್ಕೇಟಿಂಗ್ ಬಗ್ಗೆ ಅದೆಷ್ಟು ಆಸಕ್ತಿ ಬೆಳೆದಿತ್ತೆಂದರೆ ಆತ ತನ್ನ ಐದು ವರ್ಷ ಐದು ತಿಂಗಳ ಪ್ರಾಯದಲ್ಲೇ ರಾಜ್ಯ ಮಟ್ಟದ ಸ್ಕೇಟಿಂಗ್‌ನಲ್ಲಿ ಚಿನ್ನದ ಪದಕವನ್ನು ಪಡೆದಿದ್ದರು ಎಂದು ತಾಯಿ ರಮ್ಲತ್ ತಮ್ಮ ಪುತ್ರನ ಸಾಧನೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಾರೆ.

ಸ್ಕೇಟಿಂಗ್‌ನಲ್ಲಿ ತನ್ನ ಅಭಿರುಚಿಯನ್ನು ಮುಂದುವರಿಸಿದ ಶಾಮಿಲ್ ಕಳೆದ ಐದು ವರ್ಷಗಳಿಂದ ಸತತವಾಗಿ ರಾಜ್ಯ ಮಟ್ಟದಲ್ಲಿ ಚಿನ್ನದ ಪದಕಗಳನ್ನು ಪಡೆಯುತ್ತಿದ್ದಾರೆ. ರೋಲರ್ ಸ್ಕೇಟಿಂಗ್‌ನ ಜತೆಗೆ ಮುಂದೆ ಐಸ್ ಸ್ಕೇಟಿಂಗ್‌ನಲ್ಲಿಯೂ ತರಬೇತಿ ಪಡೆದು ಸಾಧನೆ ಮಾಡಬೇಕೆಂಬ ಇಚ್ಛೆ ಮೊಹಮ್ಮದ್ ಶಾಮಿಲ್ ಅರ್ಷದ್‌ರವರದ್ದು.

ಸ್ಕೇಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಲು ಬೆಂಗಳೂರು, ಹರಿಯಾಣ, ಹೈದರಾಬಾದ್, ಮೆಸೂರು, ಗುಜರಾತ್, ಶಿವಮೊಗ್ಗ, ಬೆಳಗಾವಿ, ಆಂಧ್ರ ಪ್ರದೇಶ ಸೇರಿದಂತೆ ದೇಶದ ವಿವಿಧ ಕಡೆಗಳಲ್ಲಿ ತನ್ನ ಸಾಧನೆಯನ್ನು ಮೆರೆದಿರುವ ಶಾಮಿಲ್, ಇತರ ಪಠ್ಯೇತರ ಚಟುವಟಿಕೆಗಳಲ್ಲೂ  ತಮ್ಮನ್ನು ಗುರುತಿಸಿಕೊಂಡಿದ್ದಾರೆ.

  2012ರಲ್ಲಿ ಮಂಗಳೂರು ಮ್ಯೂಸಿಕಲ್ ಎಂಡ್ ಕಲ್ಚರಲ್ ಅಸೋಸಿಯೇಶನ್(ರಿ). ಕಲಾ ಸಂಗಮ್ ಆಯೋಜಿಸಿದ್ದ ನೃತ್ಯ ಸ್ಪರ್ಧೆಯಲ್ಲಿ ಶಾಮಿಲ್ ಕಂಚಿನ ಪದಕ ಗಳಿಸಿದ್ದರು. ಆ ಸ್ಪರ್ಧೆಯಲ್ಲಿ ಶಾಮಿಲ್ ಸ್ಕೇಟಿಂಗ್ ನೃತ್ಯ ಪ್ರದರ್ಶನ ತೋರಿದ್ದರು.

ಉಳಿದಂತೆ ಶಾಲೆಯಲ್ಲಿ ಛದ್ಮವೇಷ ಸ್ಪರ್ಧೆಯಲ್ಲೂ ಬಹುಮಾನ ಪಡೆದಿರುವ ಶಾಮಿಲ್, ಓಟ, ಚಿತ್ರಕಲೆಯಲ್ಲೂ ತನ್ನ ಕಲಾನೈಪುಣ್ಯವನ್ನು ಪ್ರದರ್ಶಿಸಿ ಬಹುಮಾನ ಪಡೆದಿದ್ದಾರೆ. ಕಳೆದ ವರ್ಷ ತನ್ನ ಶಾಲೆಯಲ್ಲಿ ನಡೆದ ಹಿಂದಿ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನೂ ಈತ ಪಡೆದುಕೊಂಡಿದ್ದಾರೆ.

‘‘ಎರಡೂವರೆ ವರ್ಷದಲ್ಲಿ ಆತನ ಕಾಲಿಗೆ ಸ್ಕೇಟ್ ಕಟ್ಟಿದಾಗ ಆತ ಈ ಮಟ್ಟಕ್ಕೆ ಬೆಳೆಯಬಹುದೆಂಬ ಭಾವಿಸಿರಲಿಲ್ಲ. ಆಟವಾಡುತ್ತಿರಲಿ ಎಂದು ಸ್ಕೇಟ್ ಕಟ್ಟಿದ್ದೆ. ಆದರೆ ದಿನ ಕಳೆದಂತೆ ಸ್ಕೇಟ್ ಜತೆ ಆಟದಲ್ಲೇ ತನ್ನನ್ನು ತನ್ಮಯನಾಗಿಸಿದ್ದ ಶಾಮಿಲ್‌ಗೆ ತರಬೇತಿ ನೀಡಲು ಮುಂದಾದೆವು. ಹಾಗಾಗಿ ನಾಲ್ಕರ ಹರೆಯದಲ್ಲೇ ಆತನನ್ನು ಸ್ಕೇಟಿಂಗ್ ತರಬೇತಿಗೆ ಕಳುಹಿಸಿದೆವು. ಮುಂದೆ ಆತ ಕಲಿಯುತ್ತಿರುವ ಶಾಲೆಯಲ್ಲೂ ಪ್ರೋತ್ಸಾಹ ದೊರೆಯಿತು. ಉತ್ತಮ ತರಬೇತಿಯೂ ದೊರೆತ ಪರಿಣಾಮ ಆತ ಇಂದು ರಾಷ್ಟ್ರ ಮಟ್ಟದಲ್ಲಿ ಸ್ಕೇಟಿಂಗ್‌ನಲ್ಲಿ ಪದಕ ಗಳಿಸುವಲ್ಲಿ ಯಶಸ್ವಿಯಾಗಿದ್ದಾನೆ’’
- ರಮ್ಲತ್ ಅರ್ಷದ್, ಮೊಹಮ್ಮದ್ ಶಾಮಿಲ್‌ರವರ ತಾಯಿ


 

26 ವರ್ಷಗಳ ಸ್ಕೇಟಿಂಗ್ ಇತಿಹಾಸದಲ್ಲಿ ಹೊಸ ಅಧ್ಯಾಯ

‘‘ಮಂಗಳೂರಿನಲ್ಲಿ ಸ್ಕೇಟಿಂಗ್ ಪ್ರಾರಂಭವಾಗಿ 26ನೆ ವರ್ಷವಾಗಿದ್ದು, ಅತಿ ಕಿರಿಯ ಪ್ರಾಯದಲ್ಲೇ ಪ್ರಥಮ ಬಾರಿಗೆ ಮಂಗಳೂರಿನ ಮೊಹಮ್ಮದ್ ಶಾಮಿಲ್ ಅರ್ಷದ್‌ರವರು ರಾಷ್ಟ್ರೀಯ ಚಾಂಪಿಯನ್ ಆಗಿದ್ದಾರೆ. ಶಾಮಿಲ್ ಮೂರು ಚಿನ್ನದ ಪದಕದ ಜತೆ, ವೈಯಕ್ತಿಕ ಚಾಂಪಿಯನ್ ಶಿಪ್ ಪಡೆದಿರುವುದು ಹೈಪ್ಲೈಯರ್ಸ್ ಸ್ಕೇಟಿಂಗ್‌ಗೆ ಕ್ಲಬ್‌ಗೆ ಹೆಮ್ಮೆಯ ವಿಷಯ.’’

-ಸಂತೋಷ್ ಶೆಟ್ಟಿ, ಅಧ್ಯಕ್ಷರು, ಹೈ ಪ್ಲೈಯರ್ಸ್ ಸ್ಕೇಟಿಂಗ್ ಕ್ಲಬ್, ಮಂಗಳೂರು

ಮಾಸ್ಟರ್ ಮೊಹಮ್ಮದ್ ಶಾಮಿಲ್ ಅರ್ಷದ್ ಪಡೆದಿರುವ ಪದಕಗಳು
   

ರಾಷ್ಟ್ರೀಯ ಮಟ್ಟ            :    6 (ಚಿನ್ನ 3, ಬೆಳ್ಳಿ 1, ಕಂಚು 2)

ದಕ್ಷಿಣ ವಲಯ ಸಿಬಿಎಸ್‌ಇ:   6 (3ಚಿನ್ನ, 2ಬೆಳ್ಳಿ, 1ಕಂಚು)

              ರಾಜ್ಯ ಮಟ್ಟ   : 12 ಚಿನ್ನ

              ಜಿಲ್ಲಾ ಮಟ್ಟ   : 13 (12 ಚಿನ್ನ, 1 ಬೆಳ್ಳಿ)

         ಅಂತರ್ ಶಾಲಾ  :  13 (9 ಚಿನ್ನ, 4 ಬೆಳ್ಳಿ)

 ವೈಯಕ್ತಿಕ ಚಾಂಪಿಯನ್  :   14 ಬಾರಿ

        ಒಟ್ಟು ಪದಕಗಳು  :     69 ( 64 ಸ್ಕೇಟಿಂಗ್ ,  ಇತರ 5)

ಶಾಮಿಲ್‌ಗೆ ದೊರಕಿದ ಸನ್ಮಾನ-ಪ್ರಶಸ್ತಿಗಳು:

 ಮಾಸ್ಟರ್ ಮೊಹಮ್ಮದ್ ಶಾಮಿಲ್ ಅರ್ಷದ್ ಅವರ ಸಾಧನೆಯನ್ನು ಈಗಾಗಲೇ ಹಲವು ಸಂಘ ಸಂಸ್ಥೆಗಳು ಗುರುತಿಸಿ, ಪ್ರೋತ್ಸಾಹಿಸಿ ಸನ್ಮಾನಿಸಿವೆ.

2013ರಲ್ಲಿ ಲಯನ್ಸ್ ಕ್ಲಬ್ ಕಾವೇರಿ ಗ್ರೂಪ್ ಮಲ್ಲಿಕಟ್ಟೆ , ಜ್ಯೂನಿಯರ್ ಛೇಂಬರ್ ಇಂಟರ್‌ನ್ಯಾಶನಲ್ ಕಾರ್ಕಳ (ಜೆಸಿಐ ಸಪ್ತಾಹ 2010) ಇದರ ಪ್ರಯುಕ್ತ 21-09-2013 ರಂದು ಅಭಿನಂದನಾ ಪತ್ರ ನೀಡಿ ಗೌರವಿಸಿದೆ.

ಸುಲ್ತಾನ್ ಗೋಲ್ಡ್ ಇಂಟರ್‌ನ್ಯಾಶನಲ್ ಮಂಗಳೂರು 2013 ಮಂಗಳೂರು ಟ್ರಾನ್ಸ್‌ಪೋರ್ಟ್ ಕಂಟ್ರಾಕ್ಟರ್ ಮತ್ತು ಏಜೆಂಟರ ಅಸೋಸಿಯೇಶನ್ (ರಿ). ಬೈಕಂಪಾಡಿ ಮಂಗಳೂರು ಈತನ ಸಾಧನೆಯನ್ನು ಗುರುತಿಸಿ ಸನ್ಮಾನಿಸಿದೆ.

ಸಾರ್ವಜಕ ಶಿಕ್ಷಣ ಇಲಾಖೆ, ಕ್ರೀಡಾಭಾರತಿ ಮಂಗಳೂರು ವಿಭಾಗ ಹಾಗೂ ದೈಹಿಕ ಶಿಕ್ಷಣ ಸಂಘ ಮಂಗಳೂರು ಉತತಿರ ಹಾಗೂ ದಕ್ಷಿಣ ವಲಯ ಕ್ರೀಡಾರಂಗದಲ್ಲಿ ಅದ್ವಿತೀಯ ನಿರ್ವಹಣೆ ತೋರಿ ಮಂಗಳೂರಿನ ಪಾರಂಪರಿಕ ಪ್ರತಿಷ್ಠೆಯ ಕುಂದಣಕ್ಕೆ ಹೊಸ ಗರಿ ತೊಡಿಸಿದ ಸಾಧಕ ಮಾ.ಶಾಮಿಲ್ ಅರ್ಷದ್ ಇವರಿಗೆ 2014 -2015ರ ಕ್ರೀಡಾಭಾರತಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿರುವುದು ಇಲ್ಲಿ ಉಲ್ಲೇಖನೀಯ.


 22-07-2016 ರಂದು ಸಾರ್ವಜಕ ಶಿಕ್ಷಣ ಇಲಾಖೆ, ಕ್ರೀಡಾಭಾರತಿ ಮಂಗಳೂರು ವಿಭಾಗ ಹಾಗೂ ಕರ್ನಾಟಕ ರಾಜ್ಯ ಜಿಲ್ಲಾ ದೈಹಿಕ ಶಿಕ್ಷಣ ಸಂಘ (ರಿ) ದ.ಕ ರಾಜ್ಯ, ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಅದ್ವಿತೀಯ ನಿರ್ವಹಣೆ ತೋರಿ ಕ್ರೀಡಾ ಜ್ಯೋತಿಯನ್ನು ಬೆಳಗಿಸಿದ ಮಾ. ಮೊಹಮ್ಮದ್ ಶಾಮಿಲ್ ಅರ್ಷದ್ ಇವರಿಗೆ 2ನೇ ಬಾರಿ 2015-16ರ ಕ್ರೀಡಾ ಭಾರತಿ ಪ್ರತಿಭಾ ಪುರಸ್ಕಾರ ನೀಡಲಾಗಿತ್ತು.

 08-05-2016 ರಂದು ಸಾಣೂರು ಗೈಸ್ ಫೆಡರೇಶನ್ ಸಾಣೂರು ಕಾರ್ಕಳದಲ್ಲಿ ಈತನ ಸಾಧನೆಯನ್ನು ಗುರುತಿಸಿ ಸನ್ಮಾನಿಸಿದೆ.

ಬ್ಯಾರೀಸ್ ಕಲ್ಚರಲ್ ಫಾರ್‌ಂ (ಬಿಸಿಎಫ್) 14-08-2016ರಂದು ಈತನ ಸಾಧನೆಯನ್ನು ಗುರುತಿಸಿ ಬಿಸಿಎಫ್ ಸ್ಫೋಟ್ಸ್ ಅವಾರ್ಡ್ ನೀಡಿದೆ.

ಜೂನಿಯರ್ ಛೇಂಬರ್ ಇಂಟರ್‌ನ್ಯಾಶನಲ್ ಕಾರ್ಕಳ (ಜೆಸಿಐ ಸಪ್ತಾಹ 2016) ಇದರ ಪ್ರಯುಕ್ತ 16-09-2016 ರಂದು ಮಾಸ್ಟರ್ ಮೊಹಮ್ಮದ್ ಶಾಮಿಲ್ ಅರ್ಷದ್ 2ನೇ ಬಾರಿ ಸನ್ಮಾನಿಸಿ ಅಭಿನಂದನಾ ಪತ್ರ ನೀಡಿದೆ.

ರಾಷ್ಟ್ರಮಟ್ಟದಲ್ಲಿ ತೋರಿದ ಅದ್ವಿತೀಯ ಸಾಧನೆಯನ್ನು ಗುರುತಿಸಿ ಮಂಗಳೂರು ಟ್ರಾನ್ಸ್‌ಪೋರ್ಟ್ ಕಂಟ್ರಾಕ್ಟರ್ ಮತ್ತು ಏಜೆಂಟರ ಅಸೋಸಿಯೇಶನ್ (ರಿ) ಬೈಕಂಪಾಡಿ ವತಿಯಿಂದಲೂ ಸನ್ಮಾನವನ್ನು ಶಾಮಿಲ್ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News