ಮೋಟರ್ ತಿದ್ದುಪಡಿ ಕಾಯ್ದೆ ದುಡಿಯುವ ವರ್ಗಕ್ಕೆ ಮಾರಕ: ಸಚಿವ ರೈ
ಬಂಟ್ವಾಳ, ಫೆ.3: ಕೇಂದ್ರ ಸರಕಾರ ರೂಪಿಸಿದ ಮೋಟರ್ ವಾಹನ ತಿದ್ದುಪಡಿ ಕಾಯ್ದೆಯು ಬಡ ಮತ್ತು ದುಡಿಯುವ ವರ್ಗದ ಜನರಿಗೆ ಮಾರಕವಾಗಿದೆ ಎಂದು ಟೀಕಿಸಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ದೇಶಿತ ಈ ತಿದ್ದುಪಡಿ ಕಾಯ್ದೆಯನ್ನು ಸರಕಾರವು ಕೂಡಲೇ ಹಿಂಪಡೆಯುವಂತೆ ಒತ್ತಾಯಿಸಿದರು.
ಕೇಂದ್ರ ಸರಕಾರ ಜಾರಿಗೆ ತರಳು ಉದ್ದೇಶಿಸಿರುವ ಮೋಟಾರು ವಾಹನಗಳ ತಿದ್ದುಪಡಿ ಕಾಯ್ದೆ ಹಾಗೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರುದ್ಧ ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಶುಕ್ರವಾರ ಬಿ.ಸಿ.ರೋಡಿನ ಮೇಲ್ಸೇತುವೆಯ ಅಡಿಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಸಂಚಾರ ಉಲ್ಲಂಘನೆ ಮಾಡುವ ವಾಹನ ಸವಾರರಿಗೆ ವಿಧಿಸುತ್ತಿದ್ದ ದಂಡದ ಮೊತ್ತವನ್ನು ಮೋಟರ್ ವಾಹನ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಹಲವು ಪಟ್ಟು ಹೆಚ್ಚಿಸಲಾಗಿದೆ. ಪ್ರಭಾವಿಗಳು ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೂ ತಮ್ಮ ಪ್ರಭಾವ ಬಳಸಿ ದಂಡದಿಂದ ಪಾರಾಗುತ್ತಾರೆ. ಆದರೆ ತಿದ್ದುಪಡಿ ಕಾಯ್ದೆಯಿಂದ ಸಂಕಷ್ಟಕ್ಕೆ ಸಿಲುಕುವವರು ಬಡವರಾಗಿದ್ದಾರೆ. ವಾಹನ ಚಾಲನೆಯ ವೃತ್ತಿಯಲ್ಲಿರುವವರು ತಮ್ಮ ದುಡಿಮೆಯ ಪೂರ್ಣ ಮೊತ್ತವನ್ನು ದಂಡ ಪಾವತಿಗೆ ಮೀಸಲಿಡಬೇಕಾದ ಪರಿಸ್ಥಿತಿ ನಿರ್ಮಾಣವಾಗುವಂತಾಗಿದೆ ಎಂದು ಹೇಳಿದ ಅವರು ಉದ್ದೇಶಿತ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸದಂತೆ ಆಗ್ರಹಿಸಿದರು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗುತ್ತಿದ್ದರೂ ಕೇಂದ್ರ ಸರಕಾರ ಪೆಟ್ರೋಲಿಯಂ ಉತ್ಪನ್ನಗಳ ದರವನ್ನು ನಿರಂತರವಾಗಿ ಮನಬಂದಂತೆ ಹೆಚ್ಚಿಸುತ್ತಿದೆ ಎಂದು ಹೇಳಿದ ಅವರು ಈ ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತವಿದ್ದಾಗ ಪೆಟ್ರೋಲ್ ಬೆಲೆ ಏರಿಕೆಯಾದಾಗ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿಯವರು ಈಗ ಏಕೆ ಮೌನವಾಗಿದ್ದಾರೆ ಎಂದು ಅವರು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ಬಂಟ್ವಾಳ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಜಿಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್.ಮುಹಮ್ಮದ್, ದಲಿತ ಮುಖಂಡ ಜನಾರ್ಧನ ಚೆಂಡ್ತಿಮಾರ್ ಮಾತನಾಡಿದರು.
ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಮುಹಮ್ಮದ್ ನಂದಾವರ, ಪಕ್ಷದ ಪ್ರಮುಖರಾದ ಎ.ಸಿ.ಭಂಡಾರಿ, ಕಾಂಗ್ರೆಸ್ ಪಕ್ಷದ ಪುರಸಭೆ, ತಾಪಂ, ಎಪಿಎಂಸಿ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.