ಭಾರತದಲ್ಲಿ ಬಂಗಾರದ ಬೇಡಿಕೆಯಲ್ಲಿ ಭಾರೀ ಇಳಿಕೆ
ಮುಂಬೈ, ಫೆ.3: ಚಿನ್ನಾಭರಣ ವ್ಯಾಪಾರಿಗಳ ಮುಷ್ಕರ, ಪಾನ್ ಕಾರ್ಡ್ ಅವಶ್ಯಕತೆ ಹಾಗೂ ಗರಿಷ್ಠ ಮೊತ್ತದ ನೋಟು ಅಮಾನ್ಯ ಕ್ರಮದಂತಹ ಕಠಿಣ ಸವಾಲಿನಿಂದಾಗಿ 2016ರ ಸಾಲಿನಲ್ಲಿ ಭಾರತದಲ್ಲಿ ಬಂಗಾರದ ಬೇಡಿಕೆ ಮಟ್ಟ 21 ಶೇ. ಇಳಿಕೆಯಾಗಿದ್ದು ಚಿನ್ನದ ಬೇಡಿಕೆಯ ಪ್ರಮಾಣ 675.5 ಟನ್‌ಗೆ ಕುಸಿದಿತ್ತು ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ ಬಹಿರಂಗಪಡಿಸಿದೆ. ಭಾರತದಲ್ಲಿ 2015ರಲ್ಲಿ ಚಿನ್ನದ ಬೇಡಿಕೆ 857.2 ಟನ್‌ಗಳಷ್ಟಿತ್ತು ಎಂದು ಡಬ್ಲುಜಿಸಿ ಬಹಿರಂಗಪಡಿಸಿದೆ.
2016ರಲ್ಲಿ ಆಭರಣಗಳ ಬೇಡಿಕೆ 22.4ರಷ್ಟು ಗಣನೀಯ ಕುಸಿತಕಂಡಿದೆ. 2015ರಲ್ಲಿ 662.3 ಟನ್ ಮಾರಾಟವಾಗಿದ್ದ ಆಭರಣ 2016ರಲ್ಲಿ 514 ಟನ್‌ಗೆ ಕುಸಿದಿದೆ.
ವೌಲ್ಯದ ಲೆಕ್ಕದಲ್ಲಿ ಆಭರಣಗಳ ಬೇಡಿಕೆಯು 2016ರಲ್ಲಿ 12.3 ಶೇ. ರಷ್ಟು ಕುಸಿದಿದೆ. 2015ರಲ್ಲಿ 1,58,310.4 ಕೋಟಿ ರೂ.ಯಷ್ಟಿದ್ದ ಆಭರಣಗಳ ವೌಲ್ಯ 2016ರಲ್ಲಿ 1,38,837.8 ಕೋಟಿ ರೂಗೆ ಕುಸಿದಿದೆ ಎಂದು ವರದಿ ಬಹಿರಂಪಡಿಸಿದೆ.
‘‘2016ರಲ್ಲಿ ಭಾರತದಲ್ಲಿ ಚಿನ್ನದ ಬೇಡಿಕೆಯಲ್ಲಿ ಭಾರೀ ಇಳಿಕೆಯಾಗಿದೆ. ಪಾನ್ ಕಾರ್ಡ್ ಅವಶ್ಯಕತೆ, ಆಭರಣಗಳ ಮೇಲೆ ತೆರಿಗೆ, ಗರಿಷ್ಠ ಮೊತ್ತದ ನೋಟು ನಿಷೇಧ, ಆದಾಯ ಘೋಷಣಾ ಯೋಜನೆಗೆ ಸಂಬಂಧಿಸಿ ಪ್ರಚಾರವು ಆಭರಣ ಇಂಡಸ್ಟ್ರಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ’’ ಎಂದು ಡಬ್ಲುಜಿಸಿನ ಭಾರತದ ಆಡಳಿತ ನಿರ್ದೇಶಕ ಸೋಮ್‌ಸುಂದರಂ ಹೇಳಿದ್ದಾರೆ.