ನರೇಂದ್ರ ಮೋದಿಯಿಂದ ದೇಶ ಅವನತಿಯತ್ತ : ಅಭಯಚಂದ್ರ ಜೈನ್
ಮೂಡುಬಿದಿರೆ, ಫೆ. 3 : ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲಬೆಲೆ ಇಳಿಕೆಯಾಗಿದ್ದರೂ ದೇಶದಲ್ಲಿ ಪೆಟ್ರೋಲ್ ಡಿಸೇಲ್ ಬೆಲೆ ದಿನದಿಂದ ದಿನಕ್ಕೆ ಅಧಿಕಗೊಳ್ಳುತ್ತಿರುವುದು ಕಳವಳಕಾರಿಯಾಗಿದೆ. ಈ ಮೂಲಕ ದೇಶದ ಪ್ರಧಾನಿ ನರೇಂದ್ರ ಮೋದಿಯವರಿಂದ ದೇಶಕ್ಕೆ ಹಾಗೂ ದೇಶದ ಜನರಿಗೆ ಅನ್ಯಾಯವಾಗುತ್ತಿದೆ. ವ್ಯಾಪಾರಿ ಮನೋಭಾವದವರಾಗಿರುವ ಗುಜರಾತಿಗಳಲ್ಲಿ ಕಾಳಧನಿಕರು ಅಧಿಕವಿದ್ದಾರೆ. ಅಂತಹ ಕಾಳಧನಿಕರಿಂದಲೇ ಇಂದು ಅಧಿಕಾರಕ್ಕೇರಿರುವ ನರೇಂದ್ರ ಮೋದಿಯಿಂದಾಗಿ ದೇಶ ಅವನತಿಯತ್ತ ಸಾಗುತ್ತಿದೆ. ದೇಶದ ಸಾಮಾನ್ಯ ಜನರು ತೊಂದರೆಯ್ನು ಅನುಭವಿಸುತ್ತಿದ್ದಾರೆ. ದೇಶದ ಹಿತದೃಷ್ಟಿಯಿಂದ ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸಬೇಕಿದೆ ಎಂದು ಮಾಜಿ ಸಚಿವ, ಮೂಡುಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದ್ದಾರೆ.
ಅವರು ಕೇಂದ್ರ ಸರಕಾರವು ಡೀಸೆಲ್ ಹಾಗೂ ಪೆಟ್ರೋಲ್ ಬೆಲೆ ಏರಿಕೆ ಮಾಡಿರುವುದನ್ನು ಹಾಗೂ ಮೋಟಾರು ವಾಹನ ಕಾಯಿದೆ ವಿರೋಧಿಸಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮೂಡುಬಿದಿರೆಯ ತಹಶೀಲ್ದಾರ್ ಕಛೇರಿಯ ಆವರಣದಲ್ಲಿ ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ಕಾರ್ಮಿಕ ಹೋರಾಟಗಾರ ಸುದತ್ತ ಜೈನ್ ಮಾತನಾಡಿ, ದೇಶವನ್ನು ಉನ್ನತಿಗೇರಿಸುತ್ತೇನೆ. ಭ್ರಷ್ಟಾಚಾರ ರಹಿತ ಮಾಡುತ್ತೇನೆ ಎಂಬ ಪೊಳ್ಳು ಭರವಸೆ ನೀಡಿ ಇದೀಗ ಪ್ರಧಾನಿಯಾಗಿರುವ ನರೇಂದ್ರ ಮೋದಿಯ ಸರಕಾರ ದೇಶವನ್ನು ಭ್ರಷ್ಟಾಚಾರದ ಕೂಪಕ್ಕೆ ತಳ್ಳಿರುವುದನ್ನು ನಾವು ಖಂಡಿಸುತ್ತೇವೆ. ದೇಶ ಭಕ್ತಿಯ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕೇಂದ್ರ ಸರಕಾರ ಇದೀಗ ಕಾರ್ಮಿಕರ ಬದುಕಿಗೆ ಬೆಲೆ ಏರಿಕೆ ಮೂಲಕ ಕೊಳ್ಳಿ ಇಟ್ಟು ಅವರನ್ನು ಸತಾಯಿಸುತ್ತಿದೆ ಎಂದು ದೂರಿದರು.
ಮೂಡುಬಿದಿರೆ ಕಾಂಗ್ರೆಸ್ ಕಛೇರಿಯಿಂದ ಹೊರಟ ಪ್ರತಿಭಟನಾ ರ್ಯಾಲಿಯು ತಹಶೀಲ್ದಾರ್ ಮೊಹಮ್ಮದ್ ಇಸಾಕ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿತ್ತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ಪ್ರ.ಕಾರ್ಯದರ್ಶಿ ರತ್ನಾಕರ ಸಿ.ಮೊಯಿಲಿ, ಯುವ ಕಾಂಗ್ರೆಸ್ ಅಧ್ಯಕ್ಷ ಚಂದ್ರಹಾಸ ಸನಿಲ್, ದ.ಕ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ಪುರಸಭಾ ಅಧ್ಯಕ್ಷೆ ಹರಿಣಾಕ್ಷಿ ಎಸ್. ಸುವರ್ಣ, ಮೂಡುಬಿದಿರೆ ವಲಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಪ್ರಿಯಾ ಡಿ.ಶೆಟ್ಟಿ, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಕೊರಗಪ್ಪ, ಮೂಡ ಅಧ್ಯಕ್ಷ ಸುರೇಶ್ ಪ್ರಭು, ಪುರಸಭಾ ಸದಸ್ಯರಾದ ಸುರೇಶ್ ಕೋಟ್ಯಾನ್, ರತ್ನಾಕರ ದೇವಾಡಿಗ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.