×
Ad

ಕಿಡ್ನಿ ವೈಫಲ್ಯ: ಆರ್ಥಿಕ ನೆರವಿಗೆ ಮನವಿ

Update: 2017-02-03 17:51 IST

ಪುತ್ತೂರು , ಫೆ . 3 : ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ಗ್ರಾಮದ ಮೂಡಾಯೂರು ನಿವಾಸಿ ನಾರಾಯಣ ಪಾಟಾಳಿ ಪಿ. ಎಂಬವರು ಮಧುಮೇಹ ಕಾಯಿಲೆಗೆ ತುತ್ತಾಗಿ ತನ್ನ ಎರಡೂ ಕಿಡ್ನಿಗಳನ್ನು ಕಳೆದುಕೊಂಡಿದ್ದು , ಬಡವರಾದ ಅವರು ತನ್ನ ಚಿಕಿತ್ಸೆಯ ವೆಚ್ಚವನ್ನು ಭರಿಸುವಂತೆ ಸಮಾಜದಿಂದ ಆರ್ಥಿಕ ನೆರವು ಯಾಚಿಸುತ್ತಿದ್ದಾರೆ.

ಕಳೆದ 13 ವರ್ಷಗಳಿಂದ ಮಧುಮೇಹ ಖಾಯಿಲೆಯಿಂದ ಬಳಲುತ್ತಿರುವ ನಾರಾಯಣ ಪಾಟಾಳಿ ಅವರಿಗೆ 2014ರಲ್ಲಿ ಕಾಲಿನ ಭಾಗಕ್ಕೆ ಗಾಯವಾಗಿತ್ತು.  ಆ ಸಂದರ್ಭದಲ್ಲಿ ನಡೆಸಲಾದ ಕಾಲಿನ ಶಸ್ತ್ರ ಚಿಕಿತ್ಸೆಯ ಬಳಿಕ ಖಾಯಿಲೆ ಮತ್ತಷ್ಟು ಉಲ್ಬಣಿಸಿತ್ತು. ಇದರ ಪರಿಣಾಮವಾಗಿ ಕಳೆದ ಕೆಲ ಸಮಯದ ಹಿಂದೆ ಕಿಡ್ನಿ ವೈಫಲ್ಯಗೊಂಡಿತ್ತು. ಮಂಗಳೂರಿನ ಇಂಡಿಯಾನಾ ಆಸ್ಪತ್ರೆಯ ವೈದ್ಯ ಡಾ.ಪ್ರದೀಪ್ ಕೆ.ಜೆ. ಅವರ ಸಲಹೆಯಂತೆ ಕಳೆದ ಆಗಸ್ಟ್ ತಿಂಗಳಿನಿಂದ ಡಯಾಲಿಸಿಸ್ ಚಿಕಿತ್ಸೆ ಆರಂಭಿಸಲಾಗಿದ್ದು , ಈ ಚಿಕಿತ್ಸೆಗೆ ವಾರ್ಷಿಕವಾಗಿ ರೂ.3ಲಕ್ಷದಷ್ಟು ಹಣ ಬೇಕಾಗಿರುವುದರಿಂದ ಆರ್ಥಿಕ ಚೈತನ್ಯವಿಲ್ಲದ ನಾರಾಯಣ ಪಾಟಾಳಿ ಕುಟುಂಬ ಸಂಕಷ್ಟದಲ್ಲಿ ಸಿಲುಕಿದೆ. ಚಿಕಿತ್ಸೆ ವೆಚ್ಚಕ್ಕಾಗಿ ಪರಡಾಡುವ ಸ್ಥಿತಿ ಬಂದಿದೆ.

ನಾರಾಯಣ ಪಾಟಾಳಿ ಅವರು ಈ ಹಿಂದೆ 17 ವರ್ಷಗಳ ಕಾಲ ಪುತ್ತೂರಿನ ಖ್ಯಾತ ವಕೀಲರೊಬ್ಬರ ಕಚೇರಿಯಲ್ಲಿ ಗುಮಾಸ್ತರಾಗಿ ದುಡಿಯುತ್ತಿದ್ದರು. ಆ ಬಳಿಕ 2004ರಲ್ಲಿ ಮಧುಮೇಹ ಖಾಯಿಲೆಗೆ ತುತ್ತಾಗಿ ಕೆಲಸ ಮಾಡಲು ಅಸಮರ್ಥರಾಗಿದ್ದರು. ಪ್ರಸ್ತುತ 48ರ ಹರೆಯದ ನಾರಾಯಣ ಪಾಟಾಳಿ ಅವರು ಪತ್ನಿ, ದ್ವಿತೀಯ ಪಿಯುಸಿ ಶಿಕ್ಷಣ ಪಡೆಯುತ್ತಿರುವ ಪುತ್ರಿ ಹಾಗೂ ಪ್ರೌಢ ಶಿಕ್ಷಣ ಪಡೆಯುತ್ತಿರುವ ಪುತ್ರನೊಂದಿಗೆ ವಾಸ್ತವ್ಯವಿದ್ದು, ನಿರುದ್ಯೋಗಿಯಾಗಿರುವ ನಾರಾಯಣ ಪಾಟಾಳಿ ಅವರು ಈಗಾಗಲೇ ಸುಮಾರು ರೂ.2 ಲಕ್ಷದಷ್ಟು ಸಾಲ ಮಾಡಿ ಚಿಕಿತ್ಸೆಗಾಗಿ ವ್ಯಯ ಮಾಡಿದ್ದಾರೆ. ಮುಂದೇನು ಎಂಬ ಬಗ್ಗೆ ದಿಕ್ಕು ತೋಚದೆ ಅಸಾಹಯಕ ಸ್ಥಿತಿಯಲ್ಲಿದ್ದಾರೆ.

ಮಂಗಳೂರಿಗೆ ತೆರಳಿ ವಾರಕ್ಕೆ ಎರಡು ಬಾರಿಯಂತೆ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿರುವ ನಾರಾಯಣ ಪಾಟಾಳಿ ಅವರು ಚಿಕಿತ್ಸೆಯ ಖರ್ಚು ಭರಿಸಲಾಗದೆ ಇದೀಗ ಸಮಾಜದ ಮುಂದೆ ಆರ್ಥಿಕ ಸಹಾಯಕ್ಕಾಗಿ ಮೊರೆಯಿಡುತ್ತಿದ್ದಾರೆ.

ಇವರಿಗೆ ಆರ್ಥಿಕ ಸಹಾಯ ಮಾಡಲು ಇಚ್ಚಿಸುವ ಉದಾರ ಮನಸ್ಸಿನವರು ಪುತ್ತೂರಿನ ಕೆ.ಎಸ್.ಆರ್.ಟಿ ಬಸ್ ನಿಲ್ದಾಣದ ಎದುರುಗಡೆಯ ವೆಂಕಟ್ರಮಣ ಟವರ್ಸ್‌ನಲ್ಲಿರುವ ಕಾರ್ಪೋರೇಶನ್ ಬ್ಯಾಂಕ್ ಪುತ್ತೂರು ಪ್ರಧಾನ ಶಾಖೆಯಲ್ಲಿರುವ ಅವರ ಉಳಿತಾಯ ಖಾತೆ ನಂಬ್ರ: 008200101019413. ಪಿ.ಕೋಡ್ 022857 ಗೆ ಹಣ ಜಮೆ ಮಾಡಬಹುದು. ಇಲ್ಲವೇ ಮೊಬೈಲ್ 9449991951 ಮೂಲಕ ನಾರಾಯಣ ಪಾಟಾಳಿ ಅವರನ್ನು ಸಂಪರ್ಕಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News