ಗೋಧ್ರೋತ್ತರ ದಂಗೆ ಪ್ರಕರಣ:28 ಆರೋಪಿಗಳ ಖುಲಾಸೆ
ಅಹ್ಮದಾಬಾದ್,ಫೆ.3: ಗಾಂಧಿನಗರದ ನ್ಯಾಯಾಲಯವೊಂದು ಸಾಕ್ಷಾಧಾರಗಳ ಕೊರತೆಯಿಂದಾಗಿ ಗೋಧ್ರೋತ್ತರ ದಂಗೆ ಪ್ರಕರಣವೊಂದರಲ್ಲಿ ಎಲ್ಲ 28 ಆರೋಪಿಗಳನ್ನು ಖುಲಾಸೆಗೊಳಿಸಿದೆ.
ನ್ಯಾಯಾಲಯದಿಂದ ಖುಲಾಸೆಗೊಂಡವರಲ್ಲಿ ಕಲೋಳ ನಾಗರಿಕ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಗೋವಿಂದ ಪಟೇಲ್ ಸೇರಿದ್ದಾರೆ. ಎಲ್ಲ ಆರೋಪಿಗಳು ಹಿಂದೆಯೇ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದರು.
ಗೋಧ್ರಾ ರೈಲು ನಿಲ್ದಾಣದಲ್ಲಿ ರೈಲು ದಹನ ಘಟನೆ ನಡೆದ ಮರುದಿನ,ಅಂದರೆ 2002,ಫೆ.28ರಂದು ಗಾಂಧಿನಗರ ಜಿಲ್ಲೆಯ ಕಲೋಳ ತಾಲೂಕಿನ ಪಲಿಯಾದ್ ಗ್ರಾಮದಲ್ಲಿ ದಂಗೆ,ಬೆಂಕಿ ಹಚ್ಚುವಿಕೆ ಮತ್ತು ಅಲ್ಪಸಂಖ್ಯಾತರ ಆಸ್ತಿಗಳಿಗೆ ಹಾನಿಯನ್ನುಂಟು ಮಾಡಿದ ಆರೋಪಗಳಲ್ಲಿ ಈ 28 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಗ್ರಾಮದಲ್ಲಿಯ ದರ್ಗಾವನ್ನು ಭಾಗಶಃ ಹಾನಿಗೊಳಿಸಿದ ಆರೋಪವೂ ಅವರ ಮೇಲಿತ್ತು. ಈ ಆರೋಪಿಗಳು ಸೇರಿದಂತೆ ಗ್ರಾಮದಲ್ಲಿಯ ಸುಮಾರು 250 ಜನರ ಗುಂಪು ಈ ದಾಳಿ ನಡೆಸಿತ್ತು.
ಪ್ರಕರಣದಲ್ಲಿಯ ಎಲ್ಲ ಸಾಕ್ಷಿಗಳು ಆರೋಪಿಗಳನ್ನು ಗುರುತಿಸಲು ತಮಗೆ ಸಾಧ್ಯವಿಲ್ಲ ಎಂದು ಹೇಳುವ ಮೂಲಕ ನ್ಯಾಯಾಲಯದಲ್ಲಿ ಪ್ರತಿಕೂಲ ಸಾಕ್ಷ ನುಡಿದಿದ್ದರು. ಅಲ್ಲದೆ ತಾವು ಈಗಾಗಲೇ ಆರೋಪಿಗಳೊಂದಿಗೆ ರಾಜಿ ಮಾಡಿಕೊಂಡಿದ್ದು, ತಮಗೆ ಯಾರ ವಿರುದ್ಧವೂ ದ್ವೇಷವಿಲ್ಲ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದರು.