×
Ad

ಅಪಮೌಲ್ಯೀಕರಣದ ಬಳಿಕ 5,400 ಕೋಟಿ ರೂ. ಅಘೋಷಿತ ಆದಾಯ ಪತ್ತೆ: ಜೇಟ್ಲೀ

Update: 2017-02-03 19:36 IST

ಹೊಸದಿಲ್ಲಿ, ಫೆ.3: ಕಪ್ಪುಹಣ ಮತ್ತು ನಕಲಿ ನೋಟುಗಳನ್ನು ಮಟ್ಟಹಾಕುವ ಸಲುವಾಗಿ ಕೈಗೊಂಡ ನೋಟುಗಳ ಅಮಾನ್ಯೀಕರಣ ನಿರ್ಧಾರದ ಅಂಗವಾಗಿ ಸರಕಾರದ ಏಜೆನ್ಸಿಗಳು 1,100ಕ್ಕೂ ಹೆಚ್ಚು ಶೋಧನೆ ಕಾರ್ಯ ಮತ್ತು 5,100ಕ್ಕೂ ಹೆಚ್ಚು ನೊಟೀಸ್ ಜಾರಿಗೊಳಿಸಿವೆ ಎಂದು ವಿತ್ತ ಸಚಿವ ಅರುಣ್ ಜೇಟ್ಲೀ ಲೋಕಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಈ ಕ್ರಮಗಳಿಂದ 610 ಕೋಟಿ ರೂ.ಗೂ ಹೆಚ್ಚಿನ ಮೊತ್ತದ ಸಂಪತ್ತನ್ನು ವಶಪಡಿಸಿಕೊಳ್ಳಲಾಗಿದ್ದು ಇದರಲ್ಲಿ 513 ಕೋಟಿ ರೂ. ನಗದು ಸೇರಿದೆ. ಜಫ್ತಿ ಮಾಡಲಾದ ಹಣದಲ್ಲಿ 110 ಕೋಟಿ ರೂ.ಗಳಷ್ಟು ಮೊತ್ತದ ಹೊಸ ನೋಟುಗಳು (2 ಸಾವಿರ ಮತ್ತು ಐನೂರು ರೂ. ಮುಖಬೆಲೆ) ಸೇರಿದೆ. 2017ರ ಜನವರಿ 10ರವರೆಗೆ 5,400 ಕೋಟಿ ಮೊತ್ತದ ಅಘೋಷಿತ ಆದಾಯ ಪತ್ತೆಹಚ್ಚಲಾಗಿದೆ ಎಂದವರು ತಿಳಿಸಿದರು.

 ನೋಟುಗಳನ್ನು ಅಮಾನ್ಯಗೊಳಿಸಿದ ಬಳಿಕ , ಅಂದರೆ 2016ರ ನ.9ರಿಂದ 2017ರ ಜನವರಿ 10ರ ವರೆಗಿನ ಅವಧಿಯಲ್ಲಿ ಸರಕಾರ ಉದ್ದೇಶಿತ ಗುರಿಯಲ್ಲಿ ಎಷ್ಟು ಪ್ರಮಾಣದ ಸಾಧನೆ ಮಾಡಿದೆ ಎಂಬ ವಿಪಕ್ಷಗಳ ಪ್ರಶ್ನೆಗೆ ಅವರು ಉತ್ತರಿಸಿದರು.

 ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಈ ಮಾಹಿತಿಯನ್ನು ಇ.ಡಿ. ಮತ್ತು ಸಿಬಿಐಗೆ ರವಾನಿಸಲಾಗಿದೆ ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಹಾಯಕ ವಿತ್ತ ಸಚಿವ ಸಂತೋಷ್ ಗಂಗ್ವಾರ್ ತಿಳಿಸಿದ್ದಾರೆ. 2016ರ ನವೆಂಬರ್ 8ರ ವೇಳೆ 500 ರೂ.ಮುಖಬೆಲೆಯ 17,165 ಮಿಲಿಯನ್ ನೋಟುಗಳು ಮತ್ತು ಸಾವಿರ ರೂ. ಮುಖಬೆಲೆಯ 6,858 ಮಿಲಿಯನ್ ನೋಟುಗಳು ಚಲಾವಣೆಯಲ್ಲಿದ್ದವು. 2016ರ ಡಿಸೆಂಬರ್ 10ರವರೆಗೆ ಬ್ಯಾಂಕ್‌ಗಳಿಗೆ ಮರಳಿಸಲಾದ 500 ಮತ್ತು ಸಾವಿರ ಮುಖಬೆಲೆಯ ನೋಟುಗಳ ಮೊತ್ತ 12.44 ಲಕ್ಷ ಕೋಟಿ ಎಂದವರು ತಿಳಿಸಿದ್ದಾರೆ.

  ಸರಕಾರದ ಅಮಾನ್ಯೀಕರಣ ನಿರ್ಧಾರವನ್ನು ಸಮರ್ಥಿಸಿಕೊಂಡ ಅರುಣ್ ಜೇಟ್ಲೀ , ಅಮಾನ್ಯೀಕರಣವು ಹೊಸ ಕ್ರಮವೊಂದನ್ನು ರೂಪಿಸಲಿದೆ. ಜಿಡಿಪಿಯು ಹಿಂದೆಂದಿಗಿಂತಲೂ ಸ್ವಚ್ಛ, ವಾಸ್ತವಿಕ ಮತ್ತು ಬೃಹತ್ ಪ್ರಮಾಣದಲ್ಲಿ ಇರಲಿದೆ . ಭ್ರಷ್ಟಾಚಾರ, ಕಪ್ಪುಹಣ, ನಕಲಿ ನೋಟುಗಳ ನಿರ್ಮೂಲನೆ ಮತ್ತು ಭಯೋತ್ಪಾದಕರಿಗೆ ನಿಧಿ ವರ್ಗಾವಣೆ ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಈ ಕ್ರಮ ಕೈಗೊಂಡಿದೆ ಎಂದರು.

ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹಿಸಿ, ಅಗತ್ಯವಿದ್ದ ಪ್ರಕರಣಗಳಲ್ಲಿ ತನಿಖೆ , ಶೋಧ , ಸಮೀಕ್ಷೆ ಕಾರ್ಯದ ಮೂಲಕ ಮಾಹಿತಿಯನ್ನು ಪರಿಷ್ಕರಿಸಲಾಗುತ್ತದೆ. ದಂಡ ವಿಧಿಸುವ ಮತ್ತು ಕ್ರಿಮಿನಲ್ ಮೊಕದ್ದಮೆ ಹೂಡುವ ಮೂಲಕ ಕಪ್ಪುಹಣ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

 ವಿಶೇಷ ತನಿಖಾ ತಂಡ(ಎಸ್‌ಐಟಿ) ಸ್ಥಾಪಿಸಿರುವುದು, ಕಪ್ಪುಹಣ ಮತ್ತು ತೆರಿಗೆ ವಿಧಿಸುವ ಕಾಯ್ದೆ 2015, 1988ರ ಬೇನಾಮಿ ವ್ಯವಹಾರ (ನಿರ್ಬಂಧ) ಖಾಯ್ದೆಗೆ ತಿದ್ದುಪಡಿ - ಇತ್ಯಾದಿ ಕ್ರಮಗನ್ನು ಸರಕಾರವು ದೇಶದ ಹೊರಗಿನ ಮತ್ತು ದೇಶದೊಳಗಿನ ಕಪ್ಪುಹಣವನ್ನು ನಿಯಂತ್ರಿಸಲು ಕೈಗೊಂಡಿದೆ ಎಂದು ಜೇಟ್ಲೀ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News