ನಾನು ಎರಡು ತಂಡಗಳಿಂದ ಒದೆ ತಿನ್ನುತ್ತಿರುವ ಫುಟ್ಬಾಲ್‌ನಂತಾಗಿದ್ದೇನೆ: ಮಲ್ಯ

Update: 2017-02-03 14:08 GMT

ಹೊಸದಿಲ್ಲಿ,ಫೆ.3: ಸಾಲ ಸುಸ್ತಿದಾರರು ದೇಶದಿಂದ ಪರಾರಿಯಾಗುವುದನ್ನು ತಡೆಯಲು ಹೊಸ ಕಾನೂನೊಂದನ್ನು ತರಲು ಸರಕಾರವು ಚಿಂತನೆ ನಡೆಸುತ್ತಿದ್ದು, ಇದೇ ವೇಳೆ ಮದ್ಯದ ದೊರೆ ವಿಜಯ ಮಲ್ಯ ಅವರು ತಾನು ಎನ್‌ಡಿಎ ಮತ್ತು ಯುಪಿಎ ಈ ಎರಡು ಬಲಾಢ್ಯ ತಂಡಗಳಿಂದ ಒದೆ ತಿನ್ನುತ್ತಿರುವ ಫುಟ್ಬಾಲ್‌ನಂತಾಗಿದ್ದೇನೆ ಎಂದು ಹೇಳಿದ್ದಾರೆ.

ಸಿಬಿಐ ನಡೆಸುತ್ತಿರುವ ತನಿಖೆ ಮತ್ತು ತನ್ನನ್ನು ಬ್ರಿಟನ್ನಿನಿಂದ ಗಡಿಪಾರುಗೊಳಿಸಲು ನಡೆಯುತ್ತಿರುವ ಪ್ರಯತ್ನಗಳನ್ನು ಟೀಕಿಸಿರುವ ಅವರು, ತನ್ನ ವಿರುದ್ಧ ಮಾಧ್ಯಮಗಳನ್ನು ಬಳಸಿಕೊಳ್ಳಲಾಗಿದೆ ಎಂದಿದ್ದಾರೆ.

ಮಾಧ್ಯಮಗಳು ಸಂತೋಷದಿಂದಲೇ ಪಿಚ್‌ನಂತೆ ಕೆಲಸ ಮಾಡುತ್ತಿವೆ.ನಾನು ಫುಟ್ಬಾಲ್ ಆಗಿದ್ದು ಎರಡು ಬಲಿಷ್ಠ ತಂಡಗಳಾದ ಎನ್‌ಡಿಎ ಮತ್ತು ಯುಪಿಎ ಪಂದ್ಯವನ್ನು ಆಡುತ್ತಿವೆ, ದುರದೃಷ್ಟವೆಂದರೆ ಇಲ್ಲಿ ರೆಫರಿಗಳೇ ಇಲ್ಲ ಎಂದು ಮಲ್ಯ ಟ್ವೀಟಿಸಿದ್ದಾರೆ.

ಸಿಬಿಐ ತನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದೆ ಎಂದಿರುವ ಅವರು, ಅದರ ಆರೋಪಗಳು ತನಗೆ ಆಘಾತವನ್ನುಂಟು ಮಾಡಿವೆ. ಉದ್ಯಮ ಮತ್ತು ಆರ್ಥಿಕತೆಯ ಬಗ್ಗೆ ಉನ್ನತ ಪೊಲೀಸ್ ಅಧಿಕಾರಗಳ ಗುಂಪಿಗೆ ಏನು ಗೊತ್ತಿದೆ ಎಂದು ಮಲ್ಯ ಪ್ರಶ್ನಿಸಿದ್ದಾರೆ.

ಕಿಂಗ್ ಫಿಷರ್ ಏರ್‌ಲೈನ್ಸ್‌ಗೆ 720 ಕೋ.ರೂ.ಐಡಿಬಿಐ ಸಾಲ ಬಾಕಿ ಪ್ರಕರಣದಲ್ಲಿ ಮಲ್ಯ ವಿರುದ್ಧ ಸಿಬಿಐ ನ್ಯಾಯಾಲಯವು ಕಳೆದ ವಾರ ಜಾಮೀನು ನೀಡಬಹುದಾದ ವಾರಂಟ್ ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News