×
Ad

ಬಂಟ್ವಾಳ : ಉಚಿತ ಗ್ಯಾಸ್ ಸ್ಟವ್ ಮತ್ತು ಸಿಲಿಂಡರ್ ವಿತರಣಾ ಸಮಾರಂಭ

Update: 2017-02-03 19:42 IST

ಬಂಟ್ವಾಳ , ಫೆ . 3 : ಅರಣ್ಯ ಸಂರಕ್ಷಣೆ ಮಾಡುವ ಉದ್ದೇಶದ ಜೊತೆಗೆ ಮಹಿಳೆಯರ ಆರೋಗ್ಯ, ಪರಿಸರ ಮಾಲಿನ್ಯ ತಡೆಗಟ್ಟಲು ರಾಜ್ಯಾದ್ಯಂತ ಅರಣ್ಯ ಇಲಾಖೆಯ ವೆಚ್ಚದಿಂದಲೇ ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಟುಂಬಗಳಿಗೆ ಉಚಿತ ಗ್ಯಾಸ್ ಸಂಪರ್ಕವನ್ನು ಒದಗಿಸಲಾಗುತ್ತಿದೆ ಎಂದು ಅರಣ್ಯ ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ.

ಶುಕ್ರವಾರ ಸಂಜೆ ಬಿ.ಸಿ.ರೋಡ್ ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣ ಗುರು ಸಭಾ ಭವನದಲ್ಲಿ ನಡೆದ ಬಂಟ್ವಾಳ ವಲಯದ ಸುಮಾರು 600 ಫಲಾನುಭವಿಗಳಿಗೆ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪ ಯೋಜನೆಯಡಿ ಉಚಿತ ಗ್ಯಾಸ್ ಸ್ಟವ್ ಮತ್ತು ಸಿಲಿಂಡರ್ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು  , ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಹಾಗೂ ಇತರರಿಗೆ ಇದರ ಸೌಲಭ್ಯಗಳನ್ನು ದೊರೆಯುವಂತಾಗಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಮಂಗಳೂರು ಅರಣ್ಯ ವೃತ್ತ ವ್ಯಾಪ್ತಿಯ ಪುತ್ತೂರು, ಮಂಗಳೂರು, ಬಂಟ್ವಾಳ ತಾಲೂಕಿನಲ್ಲಿ ಈಗಾಗಲೇ 3 ಸಾವಿರಕ್ಕೂ ಅಧಿಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಫಲಾನುಭವಿಗಳಿಗೆ ಅರಣ್ಯ ಇಲಾಖೆ ವತಿಯಿಂದ ಉಚಿತ ಎಲ್‍ಪಿಜಿ ಸಂಪರ್ಕ ವಿತರಿಸಲಾಗಿದ್ದು ,  ಮುಂದಿನ ದಿನಗಳಲ್ಲಿ ಹೆಚ್ಚುವರಿಯಾಗಿ 300 ಕುಟುಂಬಗಳಿಗೆ ಗ್ಯಾಸ್ ಸಂಪರ್ಕವನ್ನು ಕಲ್ಪಿಸುವಂತೆ ಸ್ಥಳದಲ್ಲೇ ಸಚಿವರು ಅರಣ್ಯ ಅಧಿಕಾರಿಗಳಿಗೆ ಸೂಚಿಸಿದರು.

ಪರಿಸರ ಸಮತೋಲನೆಗೆ 33 ಶೇಕಡ ಅರಣ್ಯ ಭೂಮಿಯ ಅವಶ್ಯಕತೆ ಇದೆ. ಆದರೆ ರಾಜ್ಯದಲ್ಲಿ ಕೇವಲ ಶೇಕಡ 22ರಷ್ಟು ಮಾತ್ರ ಅರಣ್ಯ ಭೂಮಿ ಇದೆ. ಅರಣ್ಯವನ್ನು ಉಳಿಸಲು ಇಲಾಖೆಯೊಂದಿಗೆ ಜನರು ಕೈಜೋಡಿಸಬೇಕು. ಅರಣ್ಯ ಹಕ್ಕು ಕಾಯ್ದೆ ಉಲ್ಲಂಘಿಸದೆ ವನ್ಯಜೀವಿಗಳಿಗೂ ಬದುಕಲು ಅವಕಾಶ ನೀಡಬೇಕು ಎಂದ ಸಚಿವರು , ಅರಣ್ಯ ಇಲಾಖೆ ಕೇವಲ ನಿಯಂತ್ರಣಕ್ಕೆ ಸೀಮಿತವಾಗಿರದೆ ವಿವಿಧ ಸೌಲಭ್ಯಗಳನ್ನು ಕೂಡಾ ಜನರಿಗೆ ಒದಗಿಸುವ ಮೂಲಕ ಅರಣ್ಯ ಇಲಾಖೆ ಜನರಪರವಾಗಿ ಕೆಲಸ ಮಾಡುತ್ತದೆ ಎಂಬುದನ್ನು ಸಾಬೀತುಪಡಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.

ಸಭಾಧ್ಯಕ್ಷತೆ ವಹಿಸಿದ್ದ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಮಾತನಾಡಿ, ಅರಣ್ಯ ಸಚಿವರ ಇಚ್ಛಾಶಕ್ತಿಯಿಂದಾಗಿ ಪ್ರಸ್ತುತ ದಿನಗಳಲ್ಲಿ ಕ್ಷೇತ್ರದಾದ್ಯಂತ ಹತ್ತು ಹಲವು ಜನಪರ ಕಾರ್ಯಗಳು ನಡೆಯುತ್ತಿದೆ ಎಂದರು. ಇದೇ ವೇಳೆ ಸಾಂಕೇತಿಕವಾಗಿ ಫಲಾನುಭವಿಗಳಿಗೆ ಸಚಿವ ರಮಾನಾಥ ರೈ ಗ್ಯಾಸ್ ಸ್ಟವ್ ವಿತರಿಸಿದರು.

ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮಿ ಸಿ. ಬಂಗೇರ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್, ಜಿಪಂ ಸದಸ್ಯರಾದ ಮಂಜುಳಾ ಮಾವೆ, ಪದ್ಮಶೇಖರ ಜೈನ್, ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್.ಮುಹಮ್ಮದ್, ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಸುದರ್ಶನ ಜೈನ್, ತಹಸೀಲ್ದಾರ್ ಪುರಂದರ ಹೆಗ್ಡೆ, ತಾಪಂ ಇಒ ಸಿಪ್ರಿಯನ್ ಮಿರಾಂಡಾ ಉಪಸ್ಥಿತರಿದ್ದರು.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಸಂಜಯ ಬಿಜೂರ್ ಪ್ರಾಸ್ತಾವಿಕ ಮಾತನಾಡಿದರು.

ವಲಯ ಅರಣ್ಯಾಧಿಕಾರಿ ಕೆ.ಟಿ.ಹನುಮಂತಪ್ಪ ಸ್ವಾಗತಿಸಿದರು, ಆರ್ ಎಫ್ ಒ ಸುರೇಶ್ ವಂದಿಸಿದರು. ಪತ್ರಕರ್ತ ಗೋಪಾಲ ಅಂಚನ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News