ಯಕ್ಷಗಾನ ನಾಡಿನ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ: ಪ್ರೊ.ಕೆ.ಎಂ.ಲೋಕೇಶ್
ಕೊಣಾಜೆ , ಫೆ. 3 : ಯಕ್ಷಗಾನ ಕಲೆಯು ಮಾತು, ಕುಣಿತ, ಸಂಗೀತ, ಅಭಿನಯ ಮುಂತಾದವುಗಳಿಂದ ಸಮ್ಮಿಳಿತವಾದ ನಮ್ಮ ನಾಡಿನ ಹೆಮ್ಮೆಯ ಕಲೆಯಾಗಿದ್ದು, ಎಷ್ಟೋ ಕಲಾವಿದರಿಗೆ ಬದುಕನ್ನು ಕಟ್ಟಿಕೊಟ್ಟಿದೆ . ಮಾತ್ರವಲ್ಲದೆ ನಮ್ಮ ನಾಡಿನ ಸಾಂಸ್ಕೃತಿಕ ಶ್ರೀಮಂತಿಗೆಗೆ ಸಾಕ್ಷಿಯಾಗಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ಪ್ರೊ.ಕೆ.ಎಂ.ಲೋಕೇಶ್ ಅವರು ಅಭಿಪ್ರಾಯಪಟ್ಟರು.
ಅವರು ಮಂಗಳೂರು ವಿಶ್ವವಿದ್ಯಾಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ಮಂಗಳೂರು ವಿವಿ ಅಧ್ಯಾಪಕೇತರ ಸಿಬ್ಬಂದಿಗಳಿಗೆ ಯಕ್ಷಗಾನ ಹೆಜ್ಜೆಗಾರಿಯ ತರಬೇತಿ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಆಧುನಿಕ ಪ್ರಭಾವಗಳಿಗೆ ಒಳಗಾಗಿ ದೇಶಿ ಮತ್ತು ಜಾನಪದ ಕಲೆಗಳು, ಭಾಷೆಗಳು ಅವನತಿಯತ್ತ ಮುಖ ಮಾಡಿದ್ದರೂ ಯಕ್ಷಗಾನ ಮಾತ್ರ ಹೆಚ್ಚು ಹೆಚ್ಚು ಜನಪ್ರಿಯಗೊಳ್ಳುತ್ತಾ ಈ ನೆಲದ ಭಾಷೆ ಸಂಸ್ಕೃತಿಯನ್ನು ಬೆಳೆಸುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಹೇಳಿದರು.
ಕೇವಲ ಶಿಕ್ಷಣದಿಂದ ಮಾತ್ರ ನಾವು ಪರಿಪೂರ್ಣತೆಯನ್ನು ಬೆಳೆಸಿಕೊಳ್ಳಲು ಸಾಧ್ಯವಿಲ್ಲ . ಶೈಕ್ಷಣಿಕವಾದ ಚಟುವಟಿಕೆಯೊಂದಿಗೆ ಸಾಂಸ್ಕೃತಿಕವಾದ ಅಂಶಗಳು ಕೂಡಾ ಬೆರೆತಾಗ ಸಮಾಜದಲ್ಲಿ ಒಂದು ಹೊಸ ರೂಪದ ಚಲನಶೀಲತೆಯನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕರಾದ ಡಾ.ಧನಂಜಯ ಕುಂಬ್ಳೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಯಕ್ಷಗಾನ ಯಕ್ಷಗಾನ ಅಧ್ಯಯನ ಕೇಂದ್ರವು ಯಕ್ಷಗಾನ ಕಲೆಯ ಬೆಳವಣಿಗಾಗಿ ಶೈಕ್ಷಣಿಕವಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡು ಮುನ್ನಡೆಯುತ್ತಿದೆ. ಈಗಾಗಲೇ ಮಂಗಳೂರು ವಿವಿಯ ಸ್ನಾತಕೋತ್ತರ ವಿದ್ಯಾರ್ಥಿಗಳ ಯಕ್ಷಮಂಗಳ ತಂಡವನ್ನು ಸಮರ್ಥವಾಗಿ ಕಟ್ಟಿ ಪ್ರದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ. ಇದೀಗ ಮಂಗಳೂರು ವಿವಿಯ ಸಿಬ್ಬಂದಿಗಳಿಗೂ ಕೂಡ ಯಕ್ಷಗಾನ ಹೆಜ್ಜೆಗಾರಿಕೆಯ ತರಬೇತಿಯನ್ನು ಆರಂಭಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಯೋಜನೆಗಳನ್ನು ವಿಸ್ತರಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಂಗಳೂರು ವಿವಿ ಯಕ್ಷಗಾನ ಅಧ್ಯಯನ ಕೇಂದ್ರದ ಸಂಶೋಧನಾ ಅಧಿಕಾರಿ ಡಾ.ರಾಜಶ್ರೀ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಸತೀಶ್ ಕೊಣಾಜೆ ವಂದಿಸಿದರು. ವಿದ್ಯಾರ್ಥಿನಿ ಸಾಯಿಸುಮ ಪ್ರಾರ್ಥಿಸಿದರು.