×
Ad

ಪುದು ಗ್ರಾಪಂ ಮಾಜಿ ಸದಸ್ಯನಿಗೆ ಕೊಲೆ ಬೆದರಿಕೆ

Update: 2017-02-03 20:09 IST

ಬಂಟ್ವಾಳ, ಫೆ. 3: ತಾಲೂಕಿನ ಪುದು ಗ್ರಾಮ ಪಂಚಾಯತ್ ಮಾಜಿ ಸದಸ್ಯರೊಬ್ಬರಿಗೆ ಅಂಚೆ ಮೂಲಕ ಕೊಲೆ ಬೆದರಿಕೆ ಪತ್ರವೊಂದು ಬಂದಿದ್ದು , ಈ ಬಗ್ಗೆ ಅವರು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ಪುದು ಗ್ರಾಮದ ಅಮೆಮಾರ್ ನಿವಾಸಿ, ಮಾಜಿ ಗ್ರಾಮ ಪಂಚಾಯತ್ ಸದಸ್ಯ ಮುಹಮ್ಮದ್ ಇಕ್ಬಾಲ್ ಎಂಬವವರಿಗೆ ಕೊಲೆ ಬೆದರಿಕೆ ಪತ್ರ ಬಂದಿರುವುದು.

 ಫರಂಗಿಪೇಟೆಯ ಹಳೆ ರಸ್ತೆಯಲ್ಲಿ ಗುಜರಿ ಅಂಗಡಿಯನ್ನು ಹೊಂದಿರುವ ಇಕ್ಬಾಲ್ ಕಳೆದ ವಾರ ತನ್ನ ಸಹೋದರನ ಪುತ್ರನಿಗೆ ತುರ್ತು ಚಿಕಿತ್ಸೆ ನೀಡಲು ನಿರಾಕರಿಸಿದ್ದ ಫರಂಗಿಪೇಟೆಯ ವೈದ್ಯರೊಬ್ಬರಲ್ಲಿ ವಿಚಾರಿಸಲು ತೆರಳಿದ್ದ ವೇಳೆ ವೈದ್ಯ ಮತ್ತು ಅವರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು ಈ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿ ,  ಬಳಿಕ ರಾಜಿ ಸಂಧಾನದೊಂದಿಗೆ ಇತ್ಯರ್ಥಗೊಂಡಿತ್ತು.

ಈ ವಿಷಯವನ್ನೇ ಪ್ರಸ್ತಾವಪಿಸಿ ಕೊಲೆ ಬೆದರಿಕೆ ಪತ್ರ ಬಂದಿದೆ. ಪತ್ರದಲ್ಲಿ ಕೆಟ್ಟದಾಗಿ ನಿಂದಿಸಿರುವುದಲ್ಲದೆ ಡಾಕ್ಟರ್‌ಗೆ ಬೈದ ನಿನ್ನನ್ನು ಫರಂಗಿಪೇಟೆಯ ಗುಜರಿ ವ್ಯಾಪಾರಿ ಹಮೀದ್‌ನನ್ನು ಕೊಲೆ ಮಾಡಿದ ರೀತಿಯಲ್ಲೇ ಒಂದೇ ವಾರದೊಳಗೆ ಮರ್ಡರ್ ಮಾಡುತ್ತೇನೆ ಎಂದು ಬೆದರಿಕೆ ಹಾಕಲಾಗಿದೆ.

ಸುಮಾರು 13 ವರ್ಷದ ಹಿಂದೆ ಮಂಗಳೂರಿನಲ್ಲಿ ಗುಜರಿ ವ್ಯಾಪಾರಿಯಾಗಿದ್ದ ಹಮೀದ್ ಎಂಬವರನ್ನು ಸಂಘಪರಿವಾರದ ಕಾರ್ಯಕರ್ತರು ಫರಂಗಿಪೇಟೆಯಲ್ಲಿ ಹತ್ಯೆಗೈದಿದ್ದರು.

ಪತ್ರ ಬಂದ ಕವರ್‌ನ ಒಂದು ಭಾಗದಲ್ಲಿ ಇಕ್ಬಾಲ್ ಹೆಸರು ಮತ್ತು ವಿಳಾಸ ಬರೆದಿದ್ದರೆ ಇನ್ನೊಂದು ಭಾಗದಲ್ಲಿ ವಿ.ಎಚ್.ಪಿ., ಬಜರಂಗದಳ ಫರಂಗಿಪೇಟೆ ಎಂದು ಬರೆಯಲಾಗಿದೆ.

ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು ಪ್ರಕರಣ ದಾಖಲಿಸುವ ಕಾರ್ಯ ನಡೆಯುತ್ತಿದೆ ಎಂದು ಮುಹಮ್ಮದ್ ಇಕ್ಬಾಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News