×
Ad

ಧೈರ್ಯವಿದ್ದರೆ ಪ್ರವಾದಿ ಮಹಮ್ಮದ್ ಕುರಿತು ಸಿನಿಮಾ ಮಾಡಿ : ಬಾಲಿವುಡ್ ಗೆ ಅನ್ನು ಕಪೂರ್ ಸವಾಲು

Update: 2017-02-03 20:11 IST

ಜೈಪುರ, ಫೆ. 3:  ಹಿರಿಯ ನಟ ಅನ್ನು ಕಪೂರ್ ಬಾಲಿವುಡ್ ಮೇಲೆ ಸಿಟ್ಟಾಗಿದ್ದಾರೆ.  ಚಲನಚಿತ್ರಗಳಲ್ಲಿ ಧರ್ಮ ಹಾಗೂ ಸಂಸ್ಕೃತಿಯನ್ನು ಅವಹೇಳನ ಮಾಡಲಾಗುತ್ತಿದೆ ಎಂದು ಆರೋಪಿಸಿರುವ ಅನ್ನು "ನಾನು ಈ ಕ್ಷೇತ್ರಕ್ಕೆ ಬಂದಿದ್ದೇ ತಪ್ಪಾಯಿತು" ಎಂಬ ಭಾವನೆ ಬರುತ್ತಿದೆ ಎಂದು ಹೇಳಿದ್ದಾರೆ.

"ಈ ಹಿಂದೆ ಆಮಿರ್ ಖಾನ್ ತಮ್ಮ ಚಿತ್ರದಲ್ಲಿ ಹಿಂದೂ ಧರ್ಮದ ಅವಹೇಳನ ಮಾಡಿದ್ದರು.  ಆಗ ಜನರು ಅದರ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಧರ್ಮದ ಅವಹೇಳನ ನಡೆದಾಗ ಜನರು ಈ ರೀತಿ ಪ್ರತಿಭಟನೆ ನಡೆಸಲು ಮುಂದೆ ಬರಲೇಬೇಕು " ಎಂದು ಅನ್ನು ಹೇಳಿದ್ದಾರೆ.

ಇತ್ತೀಚೆಗೆ ರಾಜಸ್ಥಾನದಲ್ಲಿ ಪದ್ಮಾವತಿ ಚಿತ್ರದ ಸೆಟ್ ನಲ್ಲಿ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಮೇಲೆ ಹಲ್ಲೆ ನಡೆದ ಕುರಿತು ಪ್ರತಿಕ್ರಿಯೆ ನೀಡಿದ ಅನ್ನು " ಇತಿಹಾಸದ ಹೆಸರಿನಲ್ಲಿ ಲವ್ ಸೀನ್ ತೋರಿಸುವುದು ಸರಿಯೇ ?  ನಿಮಗೆ ಧೈರ್ಯ ಇದ್ದರೆ ಪ್ರವಾದಿ ಮಹಮ್ಮದ್ ಕುರಿತು ಸಿನಿಮಾ ಮಾಡಿ"  ಎಂದು ಸವಾಲು ಹಾಕಿದ್ದಾರೆ.

"ನಾನು ಐಎಎಸ್ ಅಧಿಕಾರಿ ಆಗಬಯಸಿದ್ದೆ.  ಮನೆಯಲ್ಲಿ ಬಡತನ ಇದ್ದುದರಿಂದ ನಟನೆಯ ಕ್ಷೇತ್ರಕ್ಕೆ ಬಂದೆ.  ಹಣಕ್ಕಾಗಿ ಅಶ್ಲೀಲ ಚಿತ್ರಗಳನ್ನೂ ಮಾಡಿದೆ " ಎಂದವರು ಹೇಳಿದ್ದಾರೆ. 

ಅನ್ನು ಹಿರಿಯ ವಕೀಲರಾಗಿ ನಟಿಸಿರುವ ಜಾಲಿ ಎಲ್ಎಲ್ಬಿ 2 ಚಿತ್ರ ಈಗ ನ್ಯಾಯಾಲಯದಲ್ಲಿದೆ.  ಅದು ನ್ಯಾಯಾಂಗಕ್ಕೆ ಅವಮಾನ ಮಾಡಿದೆ ಎಂಬ ಆರೋಪ ಎದುರಿಸುತ್ತಿದೆ.  ಈ ಬಗ್ಗೆ ಫೆ. 6 ಕ್ಕೆ ಹೈಕೋರ್ಟ್ ಹಾಗೂ ಫೆ. 7ಕ್ಕೆ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News