ಪ್ರವಾದಿ ಮುಹಮ್ಮದ್ (ಸ.ಅ)ರ ತತ್ವಾದರ್ಶಗಳು 21ನೆ ಶತಮಾನದಲ್ಲೂ ಪ್ರಸ್ತುತ : ಶಾಸಕ ವೈಎಸ್‌ವಿ ದತ್ತ
ಮಂಗಳೂರು, ಫೆ.3: ಪ್ರವಾದಿ ಮುಹಮ್ಮದ್(ಸ.ಅ)ರು 6ನೆ ಶತಮಾನದಲ್ಲಿ ಸಾರಿದ ತತ್ವಾದರ್ಶಗಳು ತಂತ್ರಜ್ಞಾನ ಯುಗದ ಈ 21ನೆ ಶತಮಾನದಲ್ಲೂ ಪ್ರಸ್ತುತವಾಗುತ್ತಿರುವುದು ಹೆಚ್ಚು ಔಚಿತ್ಯಪೂರ್ಣವಾಗಿದೆ ಎಂದು ಶಾಸಕ ವೈಎಸ್‌ವಿ ದತ್ತ ಹೇಳಿದರು.
‘ಭಾರತದಲ್ಲಿ ನಾಗರಿಕ ಕಾನೂನು ಹಾಗೂ ಸಾಮಾಜಿಕ ನ್ಯಾಯ ಮತ್ತು ಪ್ರವಾದಿ ಮುಹಮ್ಮದ್ (ಸ.ಅ ) ' ಎಂಬ ಕೇಂದ್ರೀಯ ವಿಷಯದಲ್ಲಿ ‘ಯುನಿವೆಫ್ ಕರ್ನಾಟಕ’ ವತಿಯಿಂದ ನಡೆಯುತ್ತಿರುವ ‘ಅರಿಯಿರಿ ಮನುಕುಲದ ಪ್ರವಾದಿಯನ್ನು’ ಅಭಿಯಾನದ ನಗರದ ಪುರಭವನದಲ್ಲಿ ಶುಕ್ರವಾರ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಪ್ರವಾದಿ ಮುಹಮ್ಮದ್(ಸ.)ರನ್ನು ಆಧ್ಯಾತ್ಮಿಕ ಗುರು ಎನ್ನುವುದಕ್ಕಿಂತಲೂ ಸಮಾಜ ಪರಿವರ್ತನೆಯ ಮಹಾಚೇತನ ಎಂದರೆ ತಪ್ಪಾಗಲಾರದು. ಮನುಷ್ಯತ್ವ ಕಳೆದುಕೊಂಡು ಪ್ರಾಣಿಗಳ ತರಹ ವರ್ತಿಸುವ ಇಂದಿನ ಕಾಲದಲ್ಲಿ ಪ್ರವಾದಿಯವರ ಸಂದೇಶ ತುರ್ತಾಗಿ ಬೇಕಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಮಾಜಿ ಸಚಿವ ಬಿ.ಎ.ಮೊಯ್ದಿನ್, ವಾರ್ತಾಭಾರತಿ ದೈನಿಕದ ಪ್ರಧಾನ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ ಭಾಗವಹಿಸಿದ್ದರು.
ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಸ್.ಪಿ.ಚೆಂಗಪ್ಪ, ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್, ಮಂಗಳೂರು ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲಿ ಹಸನ್ ಉಪಸ್ಥಿತರಿದ್ದರು.
ಅಧ್ಯಕ್ಷತೆ ವಹಿಸಿದ್ದ ಯುನಿವೆಫ್ ರಾಜ್ಯಾಧ್ಯಕ್ಷ ರಫೀಯುದ್ದೀನ್ ಕುದ್ರೋಳಿ ‘ನಾಗರಿಕ ಕಾನೂನು ಹಾಗೂ ಸಾಮಾಜಿಕ ನ್ಯಾಯ ಮತ್ತು ಪ್ರವಾದಿ (ಸ)’ ವಿಷಯದಲ್ಲಿ ಉಪನ್ಯಾಸ ನೀಡಿದರು.
ಇದೇ ಸಂದರ್ಭ ರಫೀಯುದ್ದೀನ್ ಕುದ್ರೋಳಿ ರಚಿಸಿದ ‘ಮನುಕುಲದ ಪ್ರವಾದಿ ಹ. ಮುಹಮ್ಮದ್ (ಸ)’ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.
ಯುನಿವೆಫ್ ರಾಜ್ಯ ಕಾರ್ಯದರ್ಶಿ ಯು. ಕೆ. ಖಾಲಿದ್ ಸ್ವಾಗತಿಸಿದರು.
ಅಭಿಯಾನ ಸಂಚಾಲಕ ಸಲೀಂ ಮಲಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕುದ್ರೋಳಿ ಶಾಖಾ ಸದಸ್ಯ ಅಬ್ದುರ್ರಹ್ಮಾನ್ ಕಾರ್ಯಕ್ರಮ ನಿರೂಪಿಸಿದರು. ಖಾಲಿದ್ ಬಿನ್ ಅಲಿ ಕಿರಾಅತ್ ಪಠಿಸಿದರು.
ಮಹಿಳಾ ಸಮಾವೇಶ
ಪ್ರಥಮ ಅಧಿವೇಶನದಲ್ಲಿ ನಡೆದ ಮಹಿಳಾ ಸಮಾವೇಶದಲ್ಲಿ ಹೈದರಾಬಾದ್‌ನ ಅಂಡರ್‌ಸ್ಟಾಂಟ್ ಕುರ್‌ಆನ್ ಅಕಾಡೆಮಿಯ ಮುಖ್ಯ ತರಬೇತುದಾರೆ ಆಯಿಷ ಕಮರ್ ‘ಶರೀಅತ್, ರಸೂಲ್ ಔರ್ ಔರತ್’ ಎಂಬ ವಿಷಯದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಯುನಿವರ್ಸಲ್ ವುಮೆನ್ಸ್ ಫಾರಂನ ಉಪಾಧ್ಯಕ್ಷೆ ಸುನೈನಾ ಯು. ‘ಮಹಿಳೆಯರ ಹೊಣೆಗಾರಿಕೆಗಳು’ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು.
ಯುನಿವರ್ಸಲ್ ವುಮೆನ್ಸ್ ಫಾರಂನ ಅಧ್ಯಕ್ಷೆ ಫಾತಿಮಾ ಬಿಂತ್ ಅಬ್ಬಾಸ್ ಅಧ್ಯಕ್ಷತೆ ವಹಿಸಿದ್ದರು.