ರಿಕ್ಷಾ ಚಾಲಕನ ಕೊಲೆ, ಮಸೀದಿಗೆ ಕಲ್ಲೆಸೆತ ಪ್ರಕರಣದ ಸಮಗ್ರ ತನಿಖೆಗೆ ಆಗ್ರಹಿಸಿ ಧರಣಿ
ಉಡುಪಿ, ಫೆ. 3 : ರಿಕ್ಷಾ ಚಾಲಕ ಹನೀಫ್ ಕೊಲೆ ಹಾಗೂ ಆದಿಉಡುಪಿ ಮಸೀದಿಗೆ ಕಲ್ಲೆಸೆದ ಪ್ರಕರಣದಲ್ಲಿ ಬಂಧಿತ ಆರೋಪಿ ಅಂಕಿತ್ ಪೂಜಾರಿ ಯನ್ನು ಸಮಗ್ರ ತನಿಖೆಗೆ ಒಳಪಡಿಸಿ ಆತನ ಹಿಂದಿರುವ ಷಡ್ಯಂತ್ರ ಹಾಗೂ ವ್ಯಕ್ತಿಗಳನ್ನು ಬಯಲಿಗೆ ಎಳೆಯಬೇಕೆಂದು ಆಗ್ರಹಿಸಿ ಉಡುಪಿಯ ದೊಡ್ಡಣ ಗುಡ್ಡೆ, ಚಕ್ರತೀರ್ಥ, ಕೊಡಂಕೂರು, ಕರಂಬಳ್ಳಿಯ ಅಲ್ಪಸಂಖ್ಯಾತ ಮಹಿಳಾ ಸ್ವಸಹಾಯ ಸಂಘಗಳ ಒಕ್ಕೂಟದ ಸದಸ್ಯರು ಮತ್ತು ಸ್ಥಳೀಯರು ಶುಕ್ರವಾರ ಉಡುಪಿ ಎಸ್ಪಿ ಕಚೇರಿ ಎದುರು ಧರಣಿ ನಡೆಸಿದರು.
ಅಂಕಿತ್ ಪೂಜಾರಿ ತನಗೆ ಯಾವುದೇ ರೀತಿಯಲ್ಲಿ ಸಂಬಂಧವಿಲ್ಲದ ಬಡ ರಿಕ್ಷಾ ಚಾಲಕ ಹನೀಫ್‌ರನ್ನು ಕೊಲೆ ಮಾಡಿರುವ ಹಾಗೂ ಮಸೀದಿಗೆ ಕಲ್ಲೆ ಸೆದಿರುವುದರ ಹಿಂದೆ ದೊಡ್ಡ ಷಡ್ಯಂತ್ರ ಅಡಗಿದೆ. ಜಿಲ್ಲೆಯಲ್ಲಿ ಕೋಮು ಗಲಭೆ ಸೃಷ್ಟಿಸುವ ಹುನ್ನಾರ ಮೇಲ್ನೋಟಕ್ಕೆ ಕಂಡುಬರುತ್ತಿದೆ. ಈ ಕೃತ್ಯ ಓರ್ವ ವ್ಯಕ್ತಿಯಿಂದ ನಡೆಸುವುದು ಅಸಾಧ್ಯವಾಗಿದ್ದು, ಇದರ ಹಿಂದೆ ಕಾಣದ ದುಷ್ಟ ಶಕ್ತಿಗಳ ಕೈವಾಡ ಇರುವುದು ಸ್ಪಷ್ಟವಾಗುತ್ತಿದೆ ಎಂದು ನ್ಯಾಯವಾದಿ ಹಂಝತ್ ಹೆಜಮಾಡಿ ಆರೋಪಿಸಿದ್ದಾರೆ.
ಆದುದರಿಂದ ಈ ಘಟನೆಯ ಕುರಿತು ಸಮಗ್ರ ತನಿಖೆ ನಡೆಸಿ ಹಿಂದಿರುವ ಶಕ್ತಿಯನ್ನು ಬಯಲಿಗೆ ಎಳೆದು ಬಂಧಿಸಬೇಕು ಮತ್ತು ನ್ಯಾಯಾಲಯದಲ್ಲಿ ಅವರಿಗೆ ಕಠಿಣ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು. ಹಗಲು ರಾತ್ರಿ ದುಡಿ ಯುವ ರಿಕ್ಷಾ ಚಾಲಕರಿಗೆ ಭದ್ರತೆ ಒದಗಿಸುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಸಮಾಜ ಸೇವಕ ಹನೀಫ್ ದೊಡ್ಡಣಗುಡ್ಡೆ ಮಾತನಾಡಿ, ಕಳೆದ 35ವರ್ಷಗಳಿಂದ ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದ ಮೃತ ಹನೀಫ್ ವಿಕಲಚೇತನರಾಗಿದ್ದು, ಇಡೀ ಕುಟುಂಬಕ್ಕೆ ಆಧಾರವಾಗಿದ್ದರು. ಇವರ ಕೊಲೆಯಿಂದ ಇಡೀ ಕುಟುಂಬ ಬೀದಿಗೆ ಬೀಳುವಂತಾಗಿದೆ. ಯಾವುದೇ ರಾಜಕೀಯ ವ್ಯಕ್ತಿಗಳು ಇವರ ಮನೆಗೆ ಭೇಟಿ ನೀಡಿ ಸಾಂತ್ವನ ನೀಡದಿರುವುದು ನಾಚಿಕೆಗೇಡು. ಆದುದರಿಂದ ಸರಕಾರ ಕೂಡಲೇ ಈ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಬಳಿಕ ಈ ಕುರಿತ ಮನವಿಯನ್ನು ಉಡುಪಿ ಡಿವೈಎಸ್ಪಿ ಕುಮಾರಸ್ವಾಮಿ ಅವರ ಮೂಲಕ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ತಾಪಂ ಸದಸ್ಯ ಭಾಸ್ಕರ್ ಪಡುಬಿದ್ರಿ, ರಫೀಕ್ ದೊಡ್ಡಣಗುಡ್ಡೆ, ಕಂಚಿನಡ್ಕ ರಿಕ್ಷಾ ಚಾಲಕ ಮತ್ತು ಮಾಲಕ ಸಂಘದ ಅಧ್ಯಕ್ಷ ಹಸನ್‌ಬಾವ, ಸ್ವಸಹಾಯ ಸಂಘಗಳ ಅಧ್ಯಕ್ಷರಾದ ಮಸ್ತೂದ ಕೊಂಡಕೂರು, ರಹಮತ್, ಜರಿನಾ ಮೊದಲಾದವರು ಉಪಸ್ಥಿತರಿದ್ದರು.