ಬಜೆಟ್ ಮಂಡನೆಗಾಗಿ ಅಹ್ಮದ್ ನಿಧನ ವಾರ್ತೆ ವಿಳಂಬಿಸಿದ ಸರಕಾರ: ವಿಪಕ್ಷಗಳ ಆರೋಪ
ಹೊಸದಿಲ್ಲಿ, ಫೆ.3: ಮಾಜಿ ಕೇಂದ್ರ ಸಚಿವ ಇ.ಅಹ್ಮದ್ ಅವರ ನಿಧನ ವಾರ್ತೆಯನ್ನು ಬಜೆಟ್ ಮಂಡನೆಯ ಕಾರಣಕ್ಕೆ ಸರಕಾರ ತಡವಾಗಿ ಪ್ರಕಟಿಸಿದೆ ಎಂದು ವಿಪಕ್ಷಗಳು ಆರೋಪಿಸಿದ್ದು ಈ ಬಗ್ಗೆ ತನಿಖೆ ನಡೆಯಬೇಕೆಂದು ಆಗ್ರಹಿಸಿವೆ.
ಇ.ಅಹ್ಮದ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾಗಲೇ ಅವರು ಮೃತಪಟ್ಟಿದ್ದರು ಎಂದು ಆಸ್ಪತ್ರೆಯ ಕೆಲವು ವೈದ್ಯರು ತಿಳಿಸಿದ್ದಾರೆ ಎಂದು ರಾಜ್ಯಸಭೆಯ ಅಧಿವೇಶನದ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾವಿಸಿದ ಸಿಪಿಐ(ಎಂ) ಮುಖಂಡ ಸೀತಾರಾಂ ಯೆಚೂರಿ ಆರೋಪಿಸಿದರು. ಅಹಮದ್ ಅವರನ್ನು ಐಸಿಯುಗೆ ದಾಖಲಿಸಲಾಗಿದ್ದು ಅಲ್ಲಿ ಮೃತಪಟ್ಟರು ಎಂದು ಕೆಲವರು ಹೇಳುತ್ತಾರೆ. ಆಸ್ಪತ್ರೆಯಲ್ಲಿ ಅವರನ್ನು ಭೇಟಿಯಾಗಲು ಹಿರಿಯ ಮುಖಂಡರಿಗೆ ಅವಕಾಶ ನೀಡಲಿಲ್ಲ. ಅಲ್ಲದೆ ಆರಂಭದಲ್ಲಿ ಅಹಮದರ ಮಕ್ಕಳಿಗೂ ಅವರನ್ನು ನೋಡಲು ಅವಕಾಶ ನೀಡಲಾಗಿಲ್ಲ. ಅವರ ನಿಧನ ವಾರ್ತೆಯನ್ನು ಸರಕಾರ ಯಾಕೆ ತಡವಾಗಿ ಪ್ರಕಟಿಸಿದೆ ಎಂಬ ಬಗ್ಗೆ ತನಿಖೆ ನಡೆಯಬೇಕು ಎಂದವರು ಆಗ್ರಹಿಸಿದರು.
ಅಹಮದ್ ನಿಧನದ ವಿಷಯದ ಕುರಿತು ಸದನದಲ್ಲಿ ಚರ್ಚೆ ನಡೆಯಬೇಕು ಎಂದು ಹಿರಿಯ ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ ಆಗ್ರಹಿಸಿದರು. ಆರ್‌ಎಂಎಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದ ಅಹಮದ್ ಅವರು ನಿಧನರಾದ ಬಳಿಕ ಅವರ ಮೃತದೇಹವನ್ನು ಆಸ್ಪತ್ರೆಯಲ್ಲೇ ಇರಿಸಲಾಗಿತ್ತು. ಬಜೆಟ್ ಮಂಡನೆಯ ಕಾರಣ ತಡವಾಗಿ ಪ್ರಕಟಿಸಲಾಗಿದೆ ಎಂದು ಆಜಾದ್ ದೂರಿದ್ದು, ಅಹಮದ್ ಅವರ ಮೃತದೇಹವನ್ನು ಆಸ್ಪತ್ರೆಯಲ್ಲಿ ಇರಿಸಿದ ಬಗ್ಗೆ ಸದನದಲ್ಲಿ ಚರ್ಚೆ ಆಗಬೇಕು ಎಂದು ಒತ್ತಾಯಿಸಿದರು.