×
Ad

ಸಾಲಿಗ್ರಾಮ ಪ.ಪಂ. ವಿರುದ್ಧ ಮರಣಪತ್ರ ಬರೆದಿಟ್ಟು ವಾಟರ್‌ಮ್ಯಾನ್‌ನಿಂದ ಆತ್ಮಹತ್ಯೆ ಯತ್ನ

Update: 2017-02-03 22:52 IST

ಸಾಲಿಗ್ರಾಮ, ಫೆ.3: ಸಾಲಿಗ್ರಾಮ ಪಟ್ಟಣ ಪಂಚಾಯತ್ ವಾಟರ್ ಮ್ಯಾನ್ ಜಯರಾಜ್ ಎಂಬವರು ಶುಕ್ರವಾರ ಮುಂಜಾನೆ ಮರಣಪತ್ರ ಬರೆದು ಮಾಬುಕಳ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಹೊಸ ಸೇತುವೆ ಮೇಲಿನಿಂದ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಬಗ್ಗೆ ವರದಿಯಾಗಿದೆ.

ಸಾಲಿಗ್ರಾಮ ಪಟ್ಟಣ ಪಂಚಾಯತ್ ಗುಂಡ್ಮಿ ವಾರ್ಡ್‌ನ ಮಂಜುಳ ಎಂಬ ದಲಿತ ಮಹಿಳೆ ಕುಡಿಯುವ ನೀರು ಬರುತ್ತಿಲ್ಲ ಎಂಬುದಾಗಿ ಪಟ್ಟಣ ಪಂಚಾಯತ್‌ಗೆ ದೂರು ನೀಡಿದ್ದರು. ಈ ಬಗ್ಗೆ ಪರಿಶೀಲಿಸಲು ವಾಟರ್ ಮ್ಯಾನ್ ಜಯರಾಜ್ ಮಂಜುಳರ ಮನೆಗೆ ತೆರಳಿದ್ದರು. ಈ ವಿಚಾರವನ್ನು ಸಾಲಿ ಗ್ರಾಮ ಪಟ್ಟಣ ಪಂಚಾಯತ್‌ನ ಮಾಸಿಕ ಸಭೆಯಲ್ಲಿ ಕೆಲ ಸದಸ್ಯರು ಪ್ರಸ್ತಾಪಿಸಿ ವಾಟರ್‌ಮ್ಯಾನ್ ದಲಿತ ಮನೆಯ ಬಾಗಿಲು ಬಡಿದು ದಲಿತ ದೌರ್ಜನ್ಯ ಎಸಗಿರುವುದಾಗಿ ಆರೋಪಿಸಿದ್ದರು.

ಈ ಹಿನ್ನೆಲೆಯಲ್ಲಿ ಮುಖ್ಯಾಧಿಕಾರಿ ಶ್ರೀಪಾದ್ ಭಟ್, ಜಯರಾಜ್‌ಗೆ ಶೋಕಾಸ್ ನೋಟೀಸ್ ಮತ್ತು ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಸಭೆಗೆ ತಿಳಿಸಿದ್ದರು. ಈ ವಿಚಾರದಲ್ಲಿ ಜಯರಾಜ್ ಮಾನಸಿಕ ಖಿನ್ನತೆ ಒಳಗಾಗಿದ್ದರು. ಇದರಿಂದ ಮನನೊಂದ ಜಯರಾಜ್ ಕಾರ್ಕಡದ ಬಾಡಿಗೆ ಮನೆಯಲ್ಲಿ ನನ್ನ ಸಾವಿಗೆ ಸಾಲಿಗ್ರಾಮ ಪಟ್ಟಣ ಪಂಚಾಯತ್ ಕಾರಣ ಎಂಬುದಾಗಿ ಮರಣಪತ್ರ ಬರೆದಿಟ್ಟು, ಕಿರಿಯ ಆರೋಗ್ಯ ಸಹಾಯಕಿಗೆ ಕರೆ ಮಾಡಿ ತಿಳಿಸಿದ್ದರು. ಬಳಿಕ ತನ್ನ ಸೈಕಲ್‌ನಲ್ಲಿ ಮಾಬುಕಳ ಸೇತುವೆಯ ಬಳಿ ಬಂದು ಕೆಳಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆಂದು ತಿಳಿದುಬಂದಿದೆ.

ಈ ವಿಚಾರ ತಿಳಿದ ಇತರ ಸದಸ್ಯರು ಕೋಟ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಸೇತುವೆ ಬಳಿ ತೆರಳಿ ಜಯರಾಜ್‌ಗಾಗಿ ಹುಡುಕಾಟ ನಡೆಸಿದ್ದಾರೆ. ಹೊಳೆಯಲ್ಲಿ ನೀರಿಲ್ಲದ ಕಾರಣ ಜಯರಾಜ್ ಸೇತುವೆಯಿಂದ ಕೆಳಗೆ ಬಿದ್ದು ಕಾಲು ಮುರಿದುಕೊಂಡಿದ್ದು, ಅವರನ್ನು ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News