ಉಗಾಂಡದಲ್ಲಿ ದಯನೀಯ ಸ್ಥಿತಿಯಲ್ಲಿ ಬೆಳ್ತಂಗಡಿಯ ಕುಟುಂಬ

Update: 2017-02-04 03:35 GMT

ಮಂಗಳೂರು, ಫೆ.4: ಬೆಳ್ತಂಗಡಿ ತಾಲೂಕಿನ ಯುವಕನೊಬ್ಬ ತನ್ನ ಕುಟುಂಬ ಸಮೇತ ಆಫ್ರಿಕಾ ಉಗಾಂಡದ ಕೇಂದ್ರಸ್ಥಾನ ಕಂಪಾಲಾದಲ್ಲಿ ದಯನೀಯ ಸ್ಥಿತಿಯಲ್ಲಿ ದಿನದೂಡುತ್ತಿದ್ದಾರೆ. ತಾನು ಮದುವೆಯಾಗಿರುವ ಸೋಮಾಲಿಯಾದ ಪತ್ನಿ, 5 ಹಾಗೂ 3 ವರ್ಷದ ಇಬ್ಬರು ಹೆಣ್ಮಕ್ಕಳು, 1 ವರ್ಷದ ಗಂಡು ಮಗುವಿನೊಂದಿಗೆ ಹೊಟ್ಟೆಗೆ ಅನ್ನವಿಲ್ಲದೆ ಅಕ್ಷರಶಃ ಸೊರಗಿ ಹೋಗಿದ್ದಾರೆ.

ಬೆಳ್ತಂಗಡಿಯ ಈ ಯುವಕ ಹಲವು ವರ್ಷಗಳಿಂದ ಉಗಾಂಡದ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಸೋಮಾಲಿಯಾದ ಪ್ರಜೆಯನ್ನು ಮದುವೆಯಾಗಿದ್ದು, ಮೂವರು ಮಕ್ಕಳೂ ಇದ್ದಾರೆ. ಅವರೆಲ್ಲಾ ಉಗಾಂಡದ ಕಂಪಾಲಾ ಸಮೀಪದ ನಮುವೊಂಗೋ ಎಂಬ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಹೀಗಿರುವಾಗ 4 ತಿಂಗಳ ಹಿಂದೆ ಬೆಳ್ತಂಗಡಿಯ ಯುವಕ ತನ್ನ ಕಂಪೆನಿ ಕಚೇರಿಗೆ ಬೀಗ ಹಾಕಿ ಕಂಪೆನಿಯ ಹಣದೊಂದಿಗೆ ಬೈಕ್'ನಲ್ಲಿ ಮನೆಕಡೆ ತೆರಳುತ್ತಿದ್ದಾಗ ಯಾರೋ ಅಪರಿಚಿತರು ಆತನ ಕೈಯಲ್ಲಿದ್ದ ಮೊತ್ತವನ್ನು ಮತ್ತು ಕಚೇರಿಯ ಕೀಯನ್ನು ದರೋಡೆ ಮಾಡಿ ಪರಾರಿಯಾಗುತ್ತಾರೆ. ಭಾರತೀಯ ಮೌಲ್ಯ ಸುಮಾರು 12 ಲಕ್ಷ ರೂ. ದರೋಡೆಯಾಗಿದೆ. ಕಂಪೆನಿಯು ಪ್ರಕರಣಕ್ಕೆ ಸಂಬಂಧಿಸಿ ಬೆಳ್ತಂಗಡಿಯ ಯುವಕನನ್ನು ಹೊಣೆ ಮಾಡಿದೆ. ದರೋಡೆಯಾಗಿರುವ ಹಣ ಹೊಂದಿಸಲು ಯುವಕನಿಗೆ ಕಷ್ಟವಾದಾಗ ಕಂಪೆನಿ ಪೊಲೀಸ್ ದೂರು ನೀಡಿದ್ದು, ಯುವಕನನ್ನು ಪೊಲೀಸರು ಬಂಧಿಸಿದ್ದರು. ಇತ್ತ ಆತನ ಪತ್ನಿ ಮತ್ತು ಮೂವರು ಮಕ್ಕಳು ಅಸಹಾಯಕರಾದರು. ಇದೀಗ ಇಡೀ ಕುಟುಂಬ ಬೀದಿ ಪಾಲಾಗುವಂತಾಯಿತು. ಬೆಳ್ತಂಗಡಿಯ ಯುವಕನ ಮನೆಯವರೂ ಏನೂ ಮಾಡಲಾಗದೆ ಅತಂತ್ರರಾದರು.

ಈ ಎಲ್ಲಾ ವಿದ್ಯಮಾನದಲ್ಲೂ ಆ ಯುವಕ, ಆತನ ಪತ್ನಿ, ಯುವಕನ ಮನೆಯವರು ನನ್ನ ಸಂಪರ್ಕದಲ್ಲಿದ್ದರು. ನಾನು ಕೂಡಾ ಉಗಾಂಡದಲ್ಲಿರುವ ಇಬ್ಬರನ್ನು ಸಂಪರ್ಕಿಸಿದರೂ ಅವರು ಮುತುವರ್ಜಿ ವಹಿಸಿಲ್ಲ. ನಾನು ಕೂಡಾ ಅಸಹಾಯಕನಾದೆ. ಯುವಕ ಬಂಧನದಲ್ಲಿದ್ದ ಸಂದರ್ಭ ಆತನ ಪತ್ನಿ, ಮಕ್ಕಳಿಗೆ ಹತ್ತಿರದ ಮಸೀದಿಯಿಂದ ಆಹಾರ ಸಾಮಗ್ರಿ ಪೂರೈಸಲಾಗುತ್ತಿತ್ತು. ಆದರೆ ಇದೀಗ ಯುವಕನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಆ ಬಳಿಕ ಮಸೀದಿಯವರು ಆತನ ಕುಟುಂಬಕ್ಕೆ ಆಹಾರ ಸಾಮಗ್ರಿ ನೀಡುವುದನ್ನು ನಿಲ್ಲಿಸಿದ್ದಾರೆ. ಯುವಕ ಬಿಡುಗಡೆಯಾದರೂ ಕೇಸ್ ಇರುವ ಕಾರಣ ಕೆಲಸಕ್ಕೆ ಹೋಗುವಂತಿಲ್ಲ. ಮನೆಯಲ್ಲಿ ಕೂತು ಏನು ಮಾಡುವಾಗೂ ಇಲ್ಲ. ಸಂತ್ರಸ್ತ ಯುವಕ ತನ್ನ ಕುಟುಂಬಕ್ಕೆ ಊಟಕ್ಕೇನಾದರೂ ನೆರವಾಗುವಂತೆ ದೂರವಾಣಿ ಕರೆ ಮಾಡಿ ಮನವಿ ಮಾಡಿದ್ದಾರೆ.

ಯುಎಇ, ಸೌದಿ ಅಥವಾ ಇನ್ನಿತರ ಗಲ್ಫ್ ರಾಷ್ಟ್ರವಾಗುತ್ತಿದ್ದರೆ ಈ ಯುವಕನಿಗೆ ಅಗತ್ಯ ನೆರವಿನ ವ್ಯವಸ್ಥೆ ಕಲ್ಪಿಸಬಹುದಿತ್ತು. ಉಗಾಂಡದಲ್ಲಿ ಸಹಾಯಕ್ಕೆ ಯಾರೂ ಸಿಗುತ್ತಿಲ್ಲ. ಮೂವರು ಪುಟ್ಟ ಮಕ್ಕಳ ಈ ಕುಟುಂಬ ನೆರವಿಗಾಗಿ ಎದುರು ನೋಡುತ್ತಿದೆ. ಈ ವಿವರವನ್ನು ಓದುವ ಯಾರಾದರೂ ತಮ್ಮ ಪರಿಚಯದ ಉಗಾಂಡದಲ್ಲಿರುವವರಿದ್ದರೆ ಮಾಹಿತಿ ನೀಡಿ. ಸಂಕಷ್ಟದಲ್ಲಿರುವ ಬೆಳ್ತಂಗಡಿಯ ಈ ಯುವಕನ ಕುಟುಂಬ ನೆರವಿನ ಹಸ್ತಕ್ಕಾಗಿ ಎದುರು ನೋಡುತ್ತಿದೆ.  

(ಗೌಪ್ಯತೆಗಾಗಿ ಸಂತ್ರಸ್ತ ಯುವಕನ ಹೆಸರು, ಊರು, ವಿವರವನ್ನು ನೀಡಿಲ್ಲ. ಉಗಾಂಡದಲ್ಲಿ ಯಾರಾದರೂ ಇದ್ದರೆ ಅಥವಾ ಸಹಕಾರ ನೀಡುವವರಿದ್ದರೆ ಹೆಚ್ಚಿನ ವಿವರಗಳಿಗೆ  ರಶೀದ್ ವಿಟ್ಲ (ಮೊ.+91 9741993313) ಅನ್ನು ಸಂಪರ್ಕಿಸಬಹುದು.)

Writer - -ರಶೀದ್ ವಿಟ್ಲ.

contributor

Editor - -ರಶೀದ್ ವಿಟ್ಲ.

contributor

Similar News