×
Ad

ಗ್ರಾಪಂ ಕಚೇರಿಯ ದಾಖಲೆಗಳು ಬೆಂಕಿಗೆ ಆಹುತಿಯಾಗಲು ಶಾರ್ಟ್ ಸರ್ಕ್ಯೂಟ್ ಕಾರಣವಲ್ಲ

Update: 2017-02-04 16:00 IST

ಬೆಳ್ತಂಗಡಿ, ಫೆ.4 ಆರು ತಿಂಗಳ ಹಿಂದೆ ತಾಲೂಕಿನ ಲಾಯಿಲ ಗ್ರಾಮ ಪಂಚಾಯತ್‌ನ ಕಚೇರಿಯಲ್ಲಿ ಹಲವಾರು ದಾಖಲೆಗಳು ಬೆಂಕಿಗೆ ಆಹುತಿಯಾಗಲು ಕಾರಣವಾದ ಬೆಂಕಿ ಅವಘಡಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣವಲ್ಲ ಎಂಬುದು ಇದೀಗ ಬೆಳಕಿಗೆ ಬಂದಿದೆ.

 ಘಟನೆಗೆ ಸಂಬಂಧಿಸಿ ಮೆಸ್ಕಾಂ ಇಲಾಖೆ ನಡೆಸಿದ ತನಿಖೆಯಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಅಲ್ಲ ಎಂದು ವರದಿ ನೀಡಿರುವುದು ಮಾಹಿತಿ ಹಕ್ಕು ಕಾಯ್ಕೆಯನ್ವಯ ಬೆಳಕಿಗೆ ಬಂದಿದೆ. ಕಳೆದ ಮೇ 25ರಂದು ಲಾಯಿಲ ಗ್ರಾಮ ಪಂಚಾಯತ್‌ನಲ್ಲಿ ಬೆಳಗ್ಗಿನ ಜಾವ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿತ್ತು. ಕಂಪ್ಯೂಟರ್ ಸೇರಿದಂತೆ ಒಂದಿಷ್ಟು ದಾಖಲೆಗಳು ಸುಟ್ಟು ಹೋಗಿದ್ದವು. ಇದೀಗ ದಲಿತ ಮುಖಂಡ ಮಾಹಿತಿ ಹಕ್ಕು ಕಾರ್ಯಕರ್ತ ನಾಗರಾಜ್ ಎಸ್. ಲಾಯಿಲ ಘಟನೆಯ ಬಗ್ಗೆ ಮೆಸ್ಕಾಂ ಇಲಾಖೆ ನಡೆಸಿರುವ ತನಿಖೆಯ ವರದಿಯನ್ನು ಮಾಹಿತಿ ಹಕ್ಕಿನ ಮೂಲಕ ಪಡೆದಿದ್ದು, ಅದರಲ್ಲಿ ಈ ವಿಚಾರ ಬಹಿರಂಗಗೊಂಡಿದೆ. ವರದಿಯಂತೆ ಸದ್ರಿ ಕಟ್ಟಡದ ಮಿಟರ್ ಬೋರ್ಡ್, ಫ್ಯೂಸ್ ವಯರ್ ಹಾಗೂ ಇತರೆ ವಯರ್‌ಗಳು ಸುಸ್ಥಿತಿಯಲ್ಲಿದ್ದು, ಯಾವುದೇ ಹಾನಿಯಾಗಿರುವುದು ಕಂಡುಬಂದಿಲ್ಲ. ಗ್ರಾಮದಲ್ಲಿ ಎಲ್ಲಿಯೂ ಅಧಿಕ ವೋಲ್ಟೇಜ್ ಹರಿದಿರುವುದು ಕಂಡುಬರುವುದಿಲ್ಲ. ಒಟ್ಟು ಘಟನೆಯನ್ನು ಪರಿಶೀಲಿಸಿದಾಗ ಇದು ವಿದ್ಯುತ್ ಆಕಸ್ಮಿಕದಿಂದ ಆಗಿರುವುದಲ್ಲ ಎಂಬುದು ಸ್ಪಷ್ಟಗೊಂಡಿರುವುದಾಗಿ ವರದಿ ನೀಡಿದೆ.

ಪಂಚಾಯತ್ ಕಟ್ಟಡಕ್ಕೆ ಬೆಂಕಿ ಹೇಗೆ ಹಿಡಿದಿದೆ ಎಂಬುದು ಇನ್ನೂ ಸ್ಪಷ್ಟಗೊಂಡಿಲ್ಲ. ಈ ಬಗ್ಗೆ ಸರಿಯಾದ ತನಿಖೆಯನ್ನು ನಡೆಸಿ ಬೆಂಕಿ ಅಪಘಾತದ ಹಿಂದಿರುವ ವಿಚಾರವನ್ನು ಬಹಿರಂಗಗೊಳಿಸಬೇಕು ಎಂದು ಮಾಹಿತಿ ಹಕ್ಕು ಕಾರ್ಯಕರ್ತ ದಲಿತ ಮುಖಂಡ ನಾಗರಾಜ್ ಎಸ್. ಲಾಯಿಲ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News