×
Ad

ಭೂ ಮಸೂದೆಯಿಂದ ಹೆಚ್ಚಿನ ಭೂಮಿ ಪಡೆದವರು ದ.ಕ. ಜಿಲ್ಲೆಯವರು: ಸಚಿವ ರೈ

Update: 2017-02-04 16:12 IST

ಪುತ್ತೂರು, ಫೆ.4: ಭೂ ಮಸೂದೆ ಕಾಯ್ದೆಯಡಿ ದೇಶದಲ್ಲಿಯೇ ಅತ್ಯಂತ ಹೆಚ್ಚು ಭೂಮಿ ಪಡೆದುಕೊಂಡು ಪರಿಣಾಮಕಾರಿಯಾಗಿ ಬಳಸಿಕೊಂಡವರು, ಬಗರ್ ಹುಕುಂ ಕಾಯ್ದೆಯಡಿಯಲ್ಲೂ ಅತ್ಯಂತ ಹೆಚ್ಚು ಭೂಮಿ ಪಡೆದವರು ದ.ಕ. ಜಿಲ್ಲೆಯ ಜನತೆಯಾಗಿದ್ದಾರೆ. ಅಲ್ಲದೆ 94ಸಿ ಯೋಜನೆಯಡಿ ಅತ್ಯಂತ ಹೆಚ್ಚು ಅರ್ಜಿ ಸಲ್ಲಿಸಿರುವವರು ಕೂಡ ನಮ್ಮ ಜಿಲ್ಲೆಯವರೇ ಆಗಿದ್ದಾರೆ. ಇದೊಂದು ಹೆಮ್ಮೆಯ ವಿಚಾರ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.

ಪುತ್ತೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ನೂತನವಾಗಿ ನಿರ್ಮಿಸಲಾದ ರೈತ ಸಭಾಭವನ ಹಾಗೂ ಪ್ರವೇಶ ದ್ವಾರವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಜಿಲ್ಲೆಯ ಕೃಷಿಕರನ್ನು ಇತರ ಜಿಲ್ಲೆಗಳ ರೈತರಿಗೆ ಹೋಲಿಕೆ ಮಾಡಲು ಆಗುವುದಿಲ್ಲ. ನಮ್ಮಲ್ಲಿರುವ ರೈತರು ಸಣ್ಣ ಹಿಡುವಳಿದಾರರಾಗಿದ್ದರೂ ವೌಲ್ಯಾಧಾರಿತ ಕೃಷಿ ಮಾಡುವ ಮೂಲಕ ಹೆಚ್ಚಿನ ಲಾ ಪಡೆಯುವವರಾಗಿದ್ದಾರೆ. ಇದರಿಂದಾಗಿಯೇ ಜಿಲ್ಲೆಯಲ್ಲಿ ಲಾಭದಾಯಕ ಕೃಷಿಯನ್ನು ಕಾಣಬಹುದಾಗಿದೆ. ಸಾಮಾಜಿಕ ಬದಲಾವಣೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡ ಜಿಲ್ಲೆ ನಮ್ಮದಾಗಿದೆ ಎಂದರು.

ಮಧ್ಯವರ್ತಿಗಳನ್ನು ದೂರ ಮಾಡಬೇಕೆಂಬ ದೃಷ್ಟಿಯಿಂದ ಮಾರುಕಟ್ಟೆ ಪ್ರಾಂಗಣ ನಿರ್ಮಿಸಲಾಗುತ್ತಿದ್ದು, ಜಿಲ್ಲೆಯ ಪುತ್ತೂರು, ಸುಳ್ಯ ಮತ್ತು ಬಂಟ್ವಾಳದಲ್ಲಿ ಮಾತ್ರ ಈ ವ್ಯವಸ್ಥೆಯನ್ನು ಕಾಣಬಹುದು. ಆದರೆ ಮಂಗಳೂರಿನಲ್ಲಿ ಕೋಟ್ಯಂತರ ಹಣ ಖರ್ಚು ಮಾಡಿದ ಎಪಿಎಂಸಿ ಪ್ರಾಂಗಣಕ್ಕೆ ತೆರಳಲು ಅಲ್ಲಿನ ಮಂದಿ ಒಪ್ಪದ ಕಾರಣ ವ್ಯಾಪಾರ ಸ್ಥಳಾಂತರಿಸಲು ಸಾಧ್ಯವಾಗಿಲ್ಲ ಎಂದ ಅವರು ನಮ್ಮ ಜಿಲ್ಲೆಯಲ್ಲಿ ಎಪಿಎಂಸಿ ವಿಚಾರದಲ್ಲಿ ಜಿಜ್ಞಾಸೆ ಇದೆ. ರೈತರಿಗೆ ಅನುಕೂಲಕರವಾದ ವ್ಯವಸ್ಥೆಗಳನ್ನು ಮಾಡಿಕೊಟ್ಟು, ರೈತರ ಕಷ್ಟ ನೋವುಗಳಿಗೆ ಸ್ಪಂದಿಸುವ ಕೆಲಸವನ್ನು ಕಾನೂನುಬದ್ಧವಾಗಿ ಮಾಡುವ ಮೂಲಕ ಕೃಷಿ ಉತ್ಪನ್ನ ಮಾರುಕಟ್ಟೆಯು ರೈತರ ಪಾಲಿಗೆ ಆಪತ್ಭಾಂಧವವಾಗಬೇಕು ಎಂದರು.

ನೂತನವಾಗಿ ನಿರ್ಮಿಸಲಾಗಿರುವ ಅತಿಥಿಗೃಹವನ್ನು ಉದ್ಘಾಟಿಸಿ, ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ ಪುತ್ತೂರು ಎಪಿಎಂಸಿ ದಾಖಲೆಗಳತ್ತ ದಾಪುಗಾಲಿಡುತ್ತಿದೆ. ಮಂಗಳೂರಿನಲ್ಲಿ ವಾರ್ಷಿಕವಾಗಿ ಆರು ಕೋ.ರೂ. ವಾರ್ಷಿಕ ಆದಾಯ ಸಂಗ್ರಹವಾಗುತ್ತಿದ್ದು, ಪುತ್ತೂರು ಎಪಿಎಂಸಿ ಇದೀಗ ಆ ಸ್ಥಾನಕ್ಕೆ ಬಂದು ತಲುಪುವ ಮೂಲಕ ಇದೀಗ 2ನೆ ಸ್ಥಾನದಲ್ಲಿದೆ. ರಾಜ್ಯದ ಯಲ್ಲಾಪುರ ಎಪಿಎಂಸಿ ಬಿಟ್ಟರೆ ಸಭಾಂಗಣ ವ್ಯವಸ್ಥೆಯಿರುವ ಎರಡನೆ ಎಪಿಎಂಸಿ ಪುತ್ತೂರು ಆಗಿದೆ ಎಂದರು.

ನಿತ್ಯ ಮಾರುಕಟ್ಟೆ ಎಪಿಎಂಸಿಯಲ್ಲಿ ನಡೆಯುವಂತಾಗಬೇಕು ಎಂದ ಅವರು ರೈತರ ಮಕ್ಕಳು ಈ ಸಭಾಂಗಣದ ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆಯಿತ್ತರು.

ತಾಲೂಕು ಪಂಚಾಯತ್ ಅಧ್ಯಕ್ಷೆ ಭವಾನಿ ಚಿದಾನಂದ, ಪುತ್ತೂರು ಪುಡಾ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ ಶುಭ ಹಾರೈಸಿದರು.

ಪ್ರಗತಿಪರ ಕೃಷಿಕರಿಗೆ ಸನ್ಮಾನ: ಈ ಸಂದರ್ಭದಲ್ಲಿ ಪುತ್ತೂರು ತಾಲೂಕಿನ ಪ್ರಗತಿ ಪರ ಕೃಷಿಕರಾದ ರೆಂಜಲಾಡಿ ಕೂಡಿಗೆಮನೆ ವಸಂತ, ಸರ್ವೆಯ ಅಣ್ಣು ಪೂಜಾರಿ, ಕರ್ನೂರು ಗುತ್ತು ಸತೀಶ್ ರೈ, ಮುಂಡೂರು ಪಜಿಮಣ್ಣು ತಿಮ್ಮಪ್ಪಗೌಡ, ಪಡ್ಡಮೆ ದಯಾನಂದ ಗೌಡ, ಕುಮಾರ್ ಪೆರ್ನಾಜೆ, ಬಜತ್ತೂರು ಕೋಡಿಮನೆ ಲಿಂಗಪ್ಪಗೌಡ, ಕರ್ನೂರು ನೇರೋಲ್ತಡ್ಕ ಎನ್.ಮೂಸನ್, ಶಾಂತಿಗೋಡಿನ ಮಜಲುಮನೆ ರುಕ್ಮಯ ಗೌಡ, ಅರಿಯಡ್ಕದ ಗುಂಡ್ಯಡ್ಕ ವಾಸು ಪೂಜಾರಿ, ಉಪ್ಪಿನಂಗಡಿಯ ನೆಕ್ಕರೆ ರಾಮಣ್ಣ ಗೌಡ, ಬನ್ನೂರಿನ ಕುಂಟ್ಯಾನ ಧರ್ಣಪ್ಪ ಗೌಡ, ಕುರಿಯ ಬಳ್ಳಮಜಲಿನ ರವೀಂದ್ರನಾಥ ರೈ ಮತ್ತು ಹಿರಿಯ ವರ್ತಕ ಯುನಿಟಿ ಪಿ.ಬಿ.ಹಸನ್ ಹಾಜಿಯವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಮಾರುಕಟ್ಟೆ ಅಭಿವೃದ್ಧಿ ಯೋಜನೆಯ ಮೈಸೂರು ವಿಭಾಗದ ಆಡಳಿತವಾಹಕ ಅಭಿಯಂತರ ವಿ.ಟಿ.ಚಂದ್ರಶೇಖರ್, ಎಪಿಎಂಸಿ ಉಪಾಧ್ಯಕ್ಷ ಕರುಣಾಕರ ಗೌಡ ಎಲಿಯ, ಸದಸ್ಯರಾದ ರಂಗನಾಥ ರೈ ಗುತ್ತು, ಸೀತಾರಾಮ ಗೌಡ ಪೊಸವಳಿಕೆ, ಸಾಜ ರಾಧಾಕೃಷ್ಣ ಆಳ್ವ, ಶೀನಪ್ಪಗೌಡ ವಳಕಡಮ, ಗುರುನಾಥ ಗೌಡ, ಕೃಷ್ಣ ನಾಯ್ಕ, ಡಿ.ಸೋಮನಾಥ್, ತ್ರಿವೇಣಿ ಕರುಣಾಕರ್, ಪ್ರಮೋದ್ ಕೆ.ಎಸ್., ಯಶೋಧರ ಕೆ. ಗೌಡ, ಅಬ್ದುಲ್ ಶಕೂರ್ ವಿ.ಎಚ್., ಮಹೇಶ್ ರೈ ಅಂಕೋತಿಮಾರು, ಮಾಣಕ್ಯರಾಜ್ ಪಡಿವಾಳ್, ಶಾಲಿನಿ ಸತೀಶ್ ನಾಕ್, ದ.ಕ. ಜಿಲ್ಲಾ ಕೃಷಿ ಮಾರಾಟ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕಿ ಭಾರತಿ ಪಿ.ಎಸ್. ಉಪಸ್ಥಿತರಿದ್ದರು.

ಎಪಿಎಂಸಿ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ ಸ್ವಾಗತಿಸಿದರು. ಕಾರ್ಯದರ್ಶಿ ಎಚ್.ಕೆ.ಕೃಷ್ಣಮೂರ್ತಿ ವಂದಿಸಿದರು. ಉಪನ್ಯಾಸಕ ರಾಜೇಶ್ ಬಿಜ್ಜಂಗಳ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News