ದಿಲ್ಲಿಯ ಏಮ್ಸ್ ನಲ್ಲೇ ಮೂರು ವರ್ಷಗಳಿಂದ ಇದ್ದ ನಕಲಿ ವೈದ್ಯ !
ಹೊಸದಿಲ್ಲಿ,ಫೆ.4: ಬಿಳಿಯ ಏಪ್ರನ್,ಶರ್ಟ್ ಮತ್ತು ಜೀನ್ಸ್ ಧರಿಸಿ, ಸ್ಟೆಥೋಸ್ಕೋಪ್‌ನ್ನು ಕುತ್ತಿಗೆಯ ಸುತ್ತ ಹಾಕಿಕೊಂಡು 30ರ ಹರೆಯದ ರಿತಜ್ ತ್ರಿಪಾಠಿ ಕಳೆದ ಮೂರು ವರ್ಷಗಳಿಂದಲೂ ‘ವೈದ್ಯ’ ಮತ್ತು ‘ಯೋಗ ತಜ್ಞ ’ನ ಸೋಗಿನಲ್ಲಿ ಇಲ್ಲಿಯ ಏಮ್ಸ್ ಆಸ್ಪತ್ರೆಯ ಕ್ಯಾಂಪಸ್‌ನಲ್ಲಿ ತಿರುಗಾಡಿಕೊಂಡಿದ್ದ. ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವ ಹಲವಾರು ರೋಗಿಗಳನ್ನು ಮೂರ್ಖರನ್ನಾಗಿಸಿದ್ದ ತ್ರಿಪಾಠಿ, ವಿವಿಧ ಪರೀಕ್ಷೆಗಳಿಗಾಗಿ ಅವರನ್ನು ಸಮೀಪದ ಖಾಸಗಿ ರೋಗ ನಿದಾನ ಕೇಂದ್ರಗಳಿಗೆ ಕಳುಹಿಸುತ್ತ ಸಕತ್ತಾಗಿ ದುಡ್ಡು ಮಾಡಿದ್ದ.
ಶುಕ್ರವಾರ ಯಾಕೋ ಈ ಖದೀಮನ ಅದೃಷ್ಟ ಚೆನ್ನಾಗಿರಲಿಲ್ಲ. ಈತನ ನಡವಳಿಕೆಯ ಬಗ್ಗೆ ಶಂಕೆಗೊಂಡ ರೋಗಿಯೋರ್ವ ನಿವಾಸಿ ವೈದ್ಯರಿಗೆ ದೂರು ಸಲ್ಲಿಸಿದ ಬಳಿಕ ಈತ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.
ಆಸ್ಪತ್ರೆಯ ತುರ್ತು ಚಿಕಿತ್ಸಾ ವಾರ್ಡ್‌ನಲ್ಲಿ ಸುತ್ತಾಡುತ್ತಿದ್ದ ಈತ ಅಲ್ಲಿಯ ಪ್ರತಿಯೊಬ್ಬ ರೋಗಿಯನ್ನೂ ಅವರ ಸಮಸ್ಯೆಗಳ ಬಗ್ಗೆ ವಿಚಾರಿಸಿಕೊಳ್ಳುತ್ತಿದ್ದ. ವೈದ್ಯನ ಸೋಗಿನಲ್ಲಿ ರೋಗಿಗಳಿಗೆ ಆಸ್ಪತ್ರೆಯ ವಿವಿಧ ವಿಭಾಗಗಳಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದ. ತನ್ನ ರೋಗಿಗಳೊಂದಿಗೆ ಆತ್ಮವಿಶ್ವಾಸದಿಂದ ಹೆಜ್ಜೆ ಹಾಕುತ್ತಿದ್ದ ತ್ರಿಪಾಠಿ ಉದ್ದನೆಯ ಸರದಿ ಸಾಲುಗಳನ್ನು ತಪ್ಪಿಸಿ ಅವರನ್ನು ಒಳಗಡೆ ಕರೆದೊಯ್ಯುತ್ತಿದ್ದ. ಇದು ಹಲವಾರು ರೋಗಿಗಳ ಮೇಲೆ ಪ್ರಭಾವ ಬೀರಿತ್ತು.
ಕಳೆದ ಮೂರು ವರ್ಷಗಳಿಂದಲೂ ಬಿಳಿಯ ಏಪ್ರನ್ ಮತ್ತು ಸ್ಟೆಥೋಸ್ಕೋಪ್ ನೆರವಿನಿಂದ ರೋಗಿಗಳನ್ನು ಮತ್ತು ಆಡಳಿತವನ್ನು ಮಂಗ ಮಾಡುವಲ್ಲಿ ಈತ ಯಶಸ್ವಿಯಾಗಿದ್ದ ಎಂದು ಮೂಲಗಳು ತಿಳಿಸಿದವು.
ಶುಕ್ರವಾರ ರೋಗಿಯೋರ್ವನಿಗೆ ಎಂಡೊಸ್ಕೋಪಿ ಮಾಡಿಸುವುದಾಗಿ ತ್ರಿಪಾಠಿ ಭರವಸೆ ನೀಡಿದ್ದ. ಆದರೆ ಆ ರೋಗಿ ಅದಾಗಲೇ ನೌಕರರ ಆರೋಗ್ಯ ಯೋಜನೆ (ಇಎಚ್‌ಎಸ್)ಯ ಸದಸ್ಯನಾಗಿದ್ದು, ಏಮ್ಸ್‌ನಲ್ಲಿ ದೊರೆಯುವ ಎಲ್ಲ ಸೌಲಭ್ಯಗಳ ಬಗ್ಗೆ ಗೊತ್ತಿತ್ತು. ಆತ ತಕ್ಷಣವೇ ವೈದ್ಯರ ಬಗ್ಗೆ ತೆರಳಿ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದ. ಹಿರಿಯ ವೈದ್ಯರು ಬಂದು ವಿಚಾರಿಸಿದಾಗ ತಾನು ನರರೋಗ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ ಎಂದು ಭೋಂಗು ಬಿಟ್ಟಿದ್ದ. ವೈದ್ಯರು ಏಮ್ಸ್‌ನ ಗುರುತು ಚೀಟಿ ತೋರಿಸುವಂತೆ ಕೇಳಿದಾಗ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದ ತ್ರಿಪಾಠಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ.
ದೇಶದ ಪ್ರತಿಷ್ಠಿತ ಆಸ್ಪತ್ರೆಯಾಗಿರುವ ಏಮ್ಸ್‌ನಲ್ಲಿ ವೈದ್ಯರು,ನರ್ಸ್‌ಗಳು ಮತ್ತು ಇತರ ಪ್ಯಾರಾ ಮೆಡಿಕಲ್‌ಗಳು ಸೇರಿದಂತೆ ಸುಮಾರು 20,000 ವೈದ್ಯಕೀಯ ಸಿಬ್ಬಂದಿಗಳಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ಇಂತಹ 2-3 ಪ್ರಕರಣಗಳು ನಡೆದಿವೆ. ಇದರಿಂದ ಎಚ್ಚೆತ್ತುಕೊಂಡಿರುವ ಆಡಳಿತ ವರ್ಗ ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ.