ಪಂಜಾಬ್ ಮತ್ತು ಗೋವಾಗಳಲ್ಲಿ ಶಾಂತ ಮತದಾನ
ಹೊಸದಿಲ್ಲಿ,ಫೆ.4: ಪಂಜಾಬ್ ಮತ್ತು ಗೋವಾ ವಿಧಾನಸಭಾ ಚುನಾವಣೆಗಳ ಮತದಾನ ಇಂದು ಹೆಚ್ಚುಕಡಿಮೆ ಶಾಂತವಾಗಿ ಪೂರ್ಣಗೊಂಡಿತು. ಕಾಂಗ್ರೆಸ್, ಶಿರೋಮಣಿ ಅಕಾಲಿ ದಳ-ಬಿಜೆಪಿ ಮತ್ತು ಹೊಸದಾಗಿ ರಂಗಪ್ರವೇಶ ಮಾಡಿರುವ ಆಪ್ ನಡುವೆ ಹಣಾಹಣಿ ಹೋರಾಟಕ್ಕೆ ಸಾಕ್ಷಿಯಾಗಿರುವ ಪಂಜಾಬಿನಲ್ಲಿ ತಾಂತ್ರಿಕ ತೊಂದರೆಗಳು ಮತ್ತು ಹಿಂಸಾಚಾರದ ಬಿಡಿ ಘಟನೆಗಳ ನಡುವೆ ಶೇ.70ರಷ್ಟು ಮತದಾನವಾಗಿದ್ದರೆ, ಅತ್ತ ಗೋವಾದಲ್ಲಿ ಶೇ.83ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಪುಟ್ಟ ರಾಜ್ಯದಲ್ಲಿ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್,ಆಪ್ ಮತ್ತು ಶಿವಸೇನೆ-ಜಿಎಸ್‌ಎಂ ನಡುವೆ ಹಣಾಹಣಿ ಏರ್ಪಟ್ಟಿದೆ. ಮತದಾನದ ಪ್ರಾಥಮಿಕ ಅಂದಾಜು ಮಾತ್ರ ಲಭ್ಯವಾಗಿದ್ದು, ಈ ಪ್ರಮಾಣ ಏರಿಕೆಯಾಗುವ ಸಾಧ್ಯತೆಗಳಿವೆ.
ಹಿಂಸಾಚಾರದ ಕೆಲವು ಬಿಡಿ ಘಟನೆಗಳನ್ನು ಹೊರತುಪಡಿಸಿದರೆ ರಾಜ್ಯದಲ್ಲಿ ಒಂದು ಹಂತದ ಮತದಾನ ಶಾಂತಿಯುತವಾಗಿ ನಡೆದಿದೆ ಎಂದು ಪಂಜಾಬ್‌ನ ಎಡಿಜಿಪಿ (ಚುನಾವಣೆ) ವಿ.ಕೆ.ಭಾವ್ರಾ ತಿಳಿಸಿದರು.
ಸಂಗ್ರೂರ್ ಜಿಲ್ಲೆಯ ಸುಲ್ತಾನಪುರ ಗ್ರಾಮದಲ್ಲಿ ಆಪ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ನಡೆದ ಘರ್ಷಣೆಯಲ್ಲಿ ಇಬ್ಬರು ವ್ಯಕ್ತಿಗಳು ಗಾಯಗೊಂಡಿ ದ್ದರೆ, ಅತ್ತ ತರನ್ ತರನ್ ಜಿಲ್ಲೆಯ ಲಾಲು ಘುಮಾನ್ ಗ್ರಾಮದ ಮತಗಟ್ಟೆಯೊಂದರ ಹೊರಗೆ ಅಕಾಲಿ ದಳದ ಬೆಂಬಲಿಗನೋರ್ವ ಗುಂಡು ಹಾರಿಸಿದ ಪರಿಣಾಮ ಕಾಂಗ್ರೆಸ್ ಕಾರ್ಯಕರ್ತನೋರ್ವ ಗಾಯಗೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದರು.
ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರೇಲ್ ಯಂತ್ರಗಳನ್ನು ಬಳಸಲಾಗಿದ್ದು, ಹೆಚ್ಚಿನ ಕಡೆಗಳಲ್ಲಿ ತಾಂತ್ರಿಕ ತೊಂದರೆ ಎದುರಾಗಿತ್ತು. ಇದರಿಂದಾಗಿ ಮತದಾನವನ್ನು ಹಲವಾರು ಬಾರಿ ಸ್ಥಗಿತಗೊಳಿಸು ವಂತಾಗಿತ್ತು. ಯಂತ್ರಗಳನ್ನು ಬದಲಿಸಿದ ಬಳಿಕ ಮತದಾನ ಸಾಂಗವಾಗಿ ನಡೆಯಿತು ಎಂದು ಪಂಜಾಬ್ ಮುಖ್ಯ ಚುನಾವಣಾಧಿಕಾರಿ ವಿ.ಕೆ.ಸಿಂಗ್ ತಿಳಿಸಿದರು.
2012ರ ವಿಧಾನಸಭಾ ಚುನಾವಣೆಯಲ್ಲಿ ಶೇ.79ಕ್ಕೂ ಮತದಾನವಾಗಿತ್ತು.
ಮುಖ್ಯಮಂತ್ರಿ ಪ್ರಕಾಶ ಸಿಂಗ್ ಬಾದಲ್, ಅವರ ಪುತ್ರ ಹಾಗೂ ಉಪಮುಖ್ಯಮಂತ್ರಿ ಸುಖಬೀರ್ ಸಿಂಗ್ ಬಾದಲ್, ಸಂಪುಟ ಸಚಿವ ಬಿಕ್ರಂ ಸಿಂಗ್ ಮಜಿಥಾ ಮತ್ತು ಪಂಜಾಬ್ ಕಾಂಗ್ರೆಸ್ ವರಿಷ್ಠ ಹಾಗೂ ಪಕ್ಷದ ಮುಖ್ಯಮಂತ್ರಿ ಹುದ್ದೆಯ ಅಭ್ಯರ್ಥಿ ಅಮರಿಂದರ ಸಿಂಗ್ ಸೇರಿದಂತೆ 1,145 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಪೈಕಿ 81 ಮಹಿಳೆಯರು ಮತ್ತು ಓರ್ವ ತೃತೀಯ ಲಿಂಗಿ ಸೇರಿದ್ದಾರೆ.
ಗೋವಾದಲ್ಲಿ ಮತದಾರನ ನಿಧನ
ಅತ್ತ ಗೋವಾದ ಗಣಿಗಾರಿಕೆ ಪ್ರದೇಶಗಳಾದ ಸಾಂಖಳಿ,ಬಿಚೋಲಿ ಮತ್ತು ಕುಡಚಡೆಗಳಲ್ಲಿ ಭಾರೀ ಪ್ರಮಾಣದಲ್ಲಿ ಮತದಾನ ನಡೆದಿದೆ. ಕೆಲವೆಡೆ ವಿದ್ಯುನ್ಮಾನ ಮತಯಂತ್ರಗಳಲ್ಲಿ ತಾಂತ್ರಿಕ ತೊಂದರೆಗಳು ಮತ್ತು ಮತಗಟ್ಟೆಯೊಂದರಲ್ಲಿ ಮತದಾನ ರದ್ದತಿ ಹೊರತುಪಡಿಸಿದರೆ ಎಲ್ಲಿಯೂ ಯಾವುದೇ ಅಹಿತಕರ ಘಟನೆ ನಡೆದಿಲ್ಲ.
ಪಣಜಿ ನಗರದ ಮತಗಟ್ಟೆಯೊಂದರಲ್ಲಿ ಮತವನ್ನು ಚಲಾಯಿಸಲು ಸರದಿ ಸಾಲಿನಲ್ಲಿ ನಿಂತುಕೊಂಡಿದ್ದ ಲೆಸ್ಲೀ ಸಲ್ದಾನಾ (78) ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. 2012ರ ವಿಧಾನಸಭಾ ಚುನಾವಣೆಯಲ್ಲಿಯೂ ಶೇ.83ರಷ್ಟು ಭಾರೀ ಪ್ರಮಾಣದಲ್ಲಿ ಮತದಾನವಾಗಿತ್ತು.
ಮಾಜಿ ಮುಖ್ಯಮಂತ್ರಿಗಳಾದ ಚರ್ಚಿಲ್ ಅಲೆಮಾವೊ, ಪ್ರತಾಪಸಿಂಹ ರಾಣೆ, ರವಿ ನಾಯ್ಕಿ, ದಿಗಂಬರ ಕಾಮತ್ ಮತ್ತು ಲುಯಿಝಿನೊ ಫೆಲೇರಿಯೊ ಹಾಗೂ ಹಾಲಿ ಮುಖ್ಯಮಂತ್ರಿ ಲಕ್ಮೀಕಾಂತ್ ಪಾರ್ಸೇಕರ್ ಸೇರಿದಂತೆ ಒಟ್ಟು 250 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಪಂಜಾಬ್ ಮತ್ತು ಗೋವಾ ಸೇರಿದಂತೆ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಮಾ.11ರಂದು ಹೊರಬೀಳಲಿದೆ.