×
Ad

ಹಜ್ ನೀತಿಯ ಸುಧಾರಣೆಗೆ ಉನ್ನತ ಸಮಿತಿ : ಕೇಂದ್ರದಿಂದ ತಜ್ಞರ ಸಮಿತಿ ನೇಮಕ

Update: 2017-02-04 21:09 IST

ಹೊಸದಿಲ್ಲಿ,ಫೆ.4: ಪವಿತ್ರ ಹಜ್ ಯಾತ್ರೆ ಕುರಿತ ಭಾರತದ ನೀತಿಯಲ್ಲಿ ಸುಧಾರಣೆಗಳನ್ನು ಮಾಡಲು ಹಾಗೂ ಕ್ರಮೇಣ ಹಜ್ ಯಾತ್ರೆಯ ಸಬ್ಸಿಡಿಯನ್ನು ಕಡಿಮೆಗೊಳಿಸುತ್ತಾ ಬಂದು, 2022ರೊಳಗೆ ಅದನ್ನು ಸಂಪೂರ್ಣವಾಗಿ ರದ್ದುಪಡಿಸುವ ಬಗ್ಗೆ ಪರಿಶೀಲನೆ ನಡೆಸಲು ಕೇಂದ್ರ ಸರಕಾರವು ಶನಿವಾರ ಆರು ಮಂದಿ ಸದಸ್ಯರ ಸಮಿತಿಯೊಂದನ್ನು ರಚಿಸಿದೆ.

ಜಿದ್ದಾದಲ್ಲಿ ಭಾರತದ ಕಾನ್ಸುಲೇಟ್ ಜನರಲ್ (ಸಿಜಿಐ) ಆಗಿ ಸೇವೆ ಸಲ್ಲಿಸಿದ್ದ ಅಫ್ಝಲ್ ಅಮಾನುಲ್ಲಾ ಅವರನ್ನು ಈ ಉನ್ನತ ಮಟ್ಟದ ಸಮಿತಿಯ ಸಂಚಾಲಕರಾಗಿ ನೇಮಿಸಲಾಗಿದೆಯೆಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಹಾಯಕ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಇಂದಿಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

 ಬಾಂಬೆ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ(ನಿವೃತ್ತ) ಎಸ್.ಎಸ್.ಪಾರ್ಕರ್, ಭಾರತೀಯ ಹಜ್ ಸಮಿತಿಯ ಮಾಜಿ ಅಧ್ಯಕ್ಷ ಖೈಸರ್ ಶಮೀಮ್, ಏರ್ ಇಂಡಿಯಾದ ಮಾಜಿ ಪ್ರಧಾನ ಆಡಳಿತ ನಿರ್ದೇಶಕ ಮೈಕೆಲ್‌ಮಸ್ಕರೇನ್ಹಸ್, ಮುಸ್ಲಿಂ ವಿದ್ವಾಂಸ ಹಾಗೂ ಚಾರ್ಟರ್ಡ್ ಅಕೌಂಟ್ ಆಗಿರುವ ಕಮಾಲ್ ಫರೂಖಿ ಅವರನ್ನು ಸಮಿತಿ ಯು ಒಳಗೊಂಡಿದೆ. ಸಚಿವಾಲಯದ ಜಂಟಿ ಕಾರ್ಯದರ್ಶಿ ಜೆ. ಆಲಂ ಸದಸ್ಯಾಂಗ ಕಾರ್ಯದರ್ಶಿಯಾಗಿರುವರು.

ಸಬ್ಸಿಡಿ ರಹಿತವಾಗಿ ಹಜ್ ಯಾತ್ರಿಕರಿಗೆ ಸೌದಿ ಆರೇಬಿಯಾಕ್ಕೆ ಕಡಿಮೆ ಖರ್ಚಿನಲ್ಲಿ ಪ್ರಯಾಣಿಸಲು ಸಾಧ್ಯವಾಗುವಂತೆ ಮಾಡುವ ಬಗ್ಗೆಯೂ ಈ ಸಮಿತಿಯು ರೂಪುರೇಷೆಗಳನ್ನು ಸಿದ್ಧಪಡಿಸಲಿದೆ ಎಂದು ನಖ್ವಿ ತಿಳಿಸಿದರು. ಭಾರತದ ಹಜ್ ನೀತಿಯ ಸುಧಾರಣೆ,, ಯಾತ್ರಿಕರಿಗೆ ಗರಿಷ್ಠ ರಿಯಾಯಿತಿ ಹಾಗೂ ಹಜ್ ಯಾತ್ರೆ ನಿರ್ವಹಣೆ ಇತ್ಯಾದಿ ವಿಷಯಗಳ ಬಗ್ಗೆ ತಜ್ಞರ ಸಮಿತಿಯು ಒಂದೆರಡು ತಿಂಗಳೊಳಗೆ ವರದಿಯನ್ನು ಸಲ್ಲಿಸಿಲಿದೆಯೆಂದವರು ತಿಳಿಸಿದರು.

‘‘‘ಹಜ್ ಸಬ್ಸಿಡಿಗೆ ಸಂಬಂಧಿಸಿ ಹಲವಾರು ವಿಭಿನ್ನ ಅಭಿಪ್ರಾಯಗಳು ಕೇಳಿಬರುತ್ತಿವೆ. ಕೆಲವರು ಹಜ್ ಸಬ್ಸಿಡಿಯನ್ನು ರದ್ದುಪಡಿಸಬೇಕೆಂದು ಆಗ್ರಹಿಸುತ್ತಿದ್ದರೆ, ಇನ್ನು ಕೆಲವರು ಅದನ್ನು ಉಳಿಸಿಕೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ. ಈ ಸಂಬಂಧ ಈಗಾಗಲೇ ಸುಪ್ರೀಂಕೋರ್ಟ್ ತನ್ನ ತೀರ್ಪನ್ನು ನೀಡಿದೆಯೆಂದು ಸಚಿವರು ಹೇಳಿದರು.

ಹಜ್ ಯಾತ್ರಿಕರ ವಾಯುಯಾನಕ್ಕೆ ಜಾಗತಿಕ ಮಟ್ಟದಲ್ಲಿ ಟೆಂಡರ್ ಕರೆಯುವ ಯೋಚನೆಯಿದೆಯೇ ಎಂಬ ಪ್ರಶ್ನೆಗೆ ಅವರು ‘ಶೀಘ್ರದಲ್ಲೇ ಸಂಬಂಧಪಟ್ಟರೊಂದಿಗೆ ಈ ವಿಚಾರವಾಗಿ ತಜ್ಞರ ಸಮಿತಿ ಮಾತುಕತೆ ನಡೆಸಲಿದೆಯೆಂದರು. ಹಾಲಿ ಹಜ್ ನೀತಿಯ ಕುರಿತಾಗಿ ಸುಪ್ರೀಂಕೋರ್ಟ್ ನೀಡಿರುವ ವಿವಿಧ ನಿರ್ದೇಶನಗಳಿಂದ ಉದ್ಭವಿಸುವ ಪರಿಣಾಮಗಳ ಬಗ್ಗೆಯೂ ಸಮಿತಿಯು ಪರಿಶೀಲಿಸಲಿದೆ ಹಾಗೂ ಪ್ರಸಕ್ತ ಹಜ್ ನೀತಿಯಲ್ಲಿ ಕೆಲವೊಂದು ತಿದ್ದುಪಡಿಗಳನ್ನು ತರಲಿದೆಯೆಂದರು.

ಯಾತ್ರಿಕರ ವಸತಿ ಹಾಗೂ ವಾಯು ಪ್ರಯಾಣದ ನಿರ್ವಹಣೆಯಲ್ಲಿ ಹಜ್ ಸಮಿತಿಯ ಕಾರ್ಯದಕ್ಷತೆಯ ಬಗ್ಗೆಯೂ ಸಮಿತಿ ಪರಾಮರ್ಶೆ ನಡೆಸಲಿದೆ.ಕಳೆದ ಮೂರು ದಶಕಗಳಲ್ಲಿಯೇ ಗರಿಷ್ಠ ಮಟ್ಟದ ಏರಿಕೆಯೆಂಬಂತೆ ಸೌದಿ ಆರೇಬಿಯಾವು ಭಾರತದ ಹಜ್ ಯಾತ್ರಿಕರ ಕೋಟಾವನ್ನು 1,36,020ರಿಂದ 1,70,520ಕ್ಕೆ ಹೆಚ್ಚಿಸಿದ್ದು, ಒಟ್ಟು 34,500ರಷ್ಟು ಏರಿಕೆ ಮಾಡಿದೆ.

ಸುಪ್ರೀಂಕೋರ್ಟ್ 2012ರಲ್ಲಿ ನೀಡಿದ ತೀರ್ಪಿನಲ್ಲಿ ಕೇಂದ್ರ ಸರಕಾರವು ಹಜ್ ಸಬ್ಸಿಡಿಯನ್ನು ಹಂತಹಂತವಾಗಿ ಕಡಿವೆುಗೊಳಿಸುತ್ತಾ ಬಂದು, 2022ರೊಳಗೆ ಅದನ್ನು ಸಂಪೂರ್ಣವಾಗಿ ರದ್ದುಪಡಿಸಬೇಕೆಂದು ಹೇಳಿದೆ. ಕೇಂದ್ರ ಸರಕಾರವು ವಾರ್ಷಿಕವಾಗಿ ಸುಮಾರು 650 ಕೋಟಿ ರೂ. ಹಜ್ ಸಬ್ಸಿಡಿಗೆ ಹೂಡಿಕೆ ಮಾಡಬೇಕು  ಕ್ರಮೇಣ ಅದನ್ನು ಮುಸ್ಲಿಂ ಸಮುದಾಯದ ಶೈಕ್ಷಣಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಬಳಸಿಕೊಳ್ಳಬೇಕೆಂದು ಸುಪ್ರೀಂಕೋರ್ಟ್ ಆದೇಶದಲ್ಲಿ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News