ವಿಟ್ಲ : ನಿಧಿಶೋಧ ನಡೆಸಿದ ತಂಡದ ಬಂಧನ
ಬಂಟ್ವಾಳ , ಫೆ.4: ವಿಟ್ಲ ಪೊಲೀಸ್ ಠಾಣಾವ್ಯಾಪ್ತಿಯ ಕರೋಪಾಡಿ ಗ್ರಾಮದಲ್ಲಿ ಮನೆಮಂದಿಯನ್ನು ಕಟ್ಟಿಹಾಕಿ ನಿಧಿಶೋಧ ನಡೆಸಿದ ಐವರು ಅಂತರ್ ರಾಜ್ಯ ದರೋಡೆಕೋರರನ್ನು ವಿಟ್ಲ ಪೊಲೀಸರ ತಂಡ ಬಂಧಿಸಿದ್ದಾರೆ.
ಬಂಧಿತರನ್ನು ಕನ್ಯಾನ ಗ್ರಾಮದ ಪೊಯ್ಯೆಕಂಡ ನಿವಾಸಿ ಇಕ್ಬಾಲ್ ಯಾನೆ ಇಕ್ಕು(22), ಕರೋಪಾಡಿ ಗ್ರಾಮದ ಕೋಡ್ಲ ನಿವಾಸಿ ಮೊಹಮ್ಮದ್ ಆಲಿ ಯಾನೆ ಅಲಿಮೋನು(29), ಕನ್ಯಾನ ಗ್ರಾಮದ ಮಂಡಿಯೂರು ನಿವಾಸಿ ಅಬ್ಬಾಸ್(26), ಕೊಳ್ನಾಡು ಗ್ರಾಮದ ಕುಲಾಲ್ ಕೋಡಿ ನಿವಾಸಿ ಅಶ್ರಫ್ ಯಾನೆ ಎಲ್ಟಿಟಿ ಅಶ್ರಫ್(21), ಮಂಜೇಶ್ವರ ಬಾಯಕಟ್ಟೆ ಲಕ್ಷ ಬೀಡು ನಿವಾಸಿ ಆಶಿಕ್.ಪಿ(19) ಎಂದು ಗುರುತಿಸಲಾಗಿದೆ.
ಆರೋಪಿಗಳೊಂದಿಗೆ ಕೃತ್ಯಕ್ಕೆ ಬಳಸಲಾದ ಇನೋವಾ ಕಾರು ಹಾಗೂ ಆಲ್ಟೋ ಕಾರನ್ನು ವಶಕ್ಕೆ ಪಡೆಯಲಾಗಿದೆ. ಸಾಲೆತ್ತೂರು ಸಮೀಪ ಕೃತ್ಯಕ್ಕೆ ಬಳಸಲಾದ ವಾಹನಗಳು ತಿರುಗಾಡುತ್ತಿದೆ ಎಂಬ ಖಚಿತ ವರ್ತಮಾನದ ಮೇರೆಗೆ ದಾಳಿ ನಡೆಸಿದ ಪೊಲೀಸರ ತಂಡ ಅದರ ಆಧಾರದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳಾದ ಪೈವಳಿಕೆ ನಿವಾಸಿ ಶಾಫಿ.ಕೆ , ಕೇರಳದ ಶಾಫಿ ಯಾನೆ ಬೊಟ್ಟು ಶಾಫಿ, ಮಿತ್ತನಡ್ಕ ಆರಿಸ್ ಹಾಗೂ ಇನ್ನುಳಿದ ಆರೋಪಿಗಳಿಗಾಗಿ ಪೊಲೀಸರು ಶೋಧಕಾರ್ಯ ಮುಂದುವರಿಸಿದ್ದಾರೆ.
ಕರೋಪಾಡಿ ಗ್ರಾಮದ ಅರಸಳಿಕೆ ಎಂಬಲ್ಲಿನ ವಿಘ್ನರಾಜ್ ಎಂಬವರ ಮನೆಗೆ ಕಳೆದ ಜ.24 ರಂದು ತಡರಾತ್ರಿ 2 ಗಂಟೆಗೆ ನುಗ್ಗಿದ ದರೋಡೆಕೋರರು ಮನೆಯ ಎದುರುಭಾಗದಲ್ಲಿ ನಿಧಿಗಾಗಿ ಶೋಧ ನಡೆಸಿದ್ದಾರೆ. ಇನೋವಾ ಹಾಗೂ ಆಲ್ಟೋಕಾರಿನಲ್ಲಿ ಬಂದ ತಂಡ ಮನೆಮಂದಿಯನ್ನು ಬೆದರಿಸಿ ಕಟ್ಟಿಹಾಕಿ ನಿಧಿಗಾಗಿ ಶೋಧ ನಡೆಸಿದ್ದರು. ಆದರೆ ಏನೂ ಸಿಗದ ಕಾರಣ, ಮನೆಯ ಸಿಸಿ ಕ್ಯಾಮೆರಾವನ್ನು ಡಿವಿಆರ್ ಸಹಿತ ಎಗರಿಸಿ ಪರಾರಿಯಾಗಿದ್ದರು.
ಈ ಬಗ್ಗೆ ವಿಘ್ನರಾಜ್ ನೀಡಿದ ದೂರಿನಂತೆ ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಜಿಲ್ಲಾ ಪೊಲೀಸ್ವರಿಷ್ಠಾಧಿಕಾರಿ ಭೂಷಣ್ ಬೊರಸೆ ಈ ವೇಳೆ ಸ್ಥಳಕ್ಕೆ ಆಗಮಿಸಿ ವಿಶೇಷ ಪೊಲೀಸ್ ತಂಡ ರಚಿಸಿ, ಆರೋಪಿಗಳ ಪತ್ತೆಗೆ ನಿರ್ದೇಶನ ನೀಡಿದ್ದರು. ಇದೀಗ ಪೊಲೀಸರು ಕಾರ್ಯಾಚರಣೆ ನಡೆಸಿ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳ ಪೈಕಿ ಇಕ್ಬಾಲ್ ಯಾನೆ ಇಕ್ಕು , ಯುವತಿಯೋರ್ವಳ ಅಪಹರಣ, ಕನ್ಯಾನದಲ್ಲಿ ಆಸಿಫ್ ಕೊಲೆ ಪ್ರಕರಣ ಹಾಗೂ 2016 ರಲ್ಲಿ ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ನಡೆದ ಗಣೇಶ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ. ಮೊಹಮ್ಮದ್ ಆಲಿ ವಿರುದ್ದ ಒಂದು ಗಲಾಟೆ ಪ್ರಕರಣ, ಪುತ್ತೂರು ಠಾಣೆಯ ಅಪಹರಣ ಪ್ರಕರಣ, ಕನ್ಯಾನ ಆಸಿಫ್ ಕೊಲೆ ಪ್ರಕರಣ, ಪಾಂಡೇಶ್ವರ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೂಷಣ್ ಜಿ ಬೊರಸೆ ಡಾ.ವೇದಮೂರ್ತಿ ಯವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ರವೀಶ್ ಸಿ.ಆರ್ ರವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಛರಣೆಯಲ್ಲಿ ಬಂಟ್ವಾಳ ಸಿಐ ಬಿ.ಕೆ.ಮಂಜಯ್ಯ, ವಿಟ್ಲ ಠಾಣಾಧಿಕಾರಿ ನಾಗರಾಜ್, ಬೆಳ್ಯಂಗಡಿ ಠಾಣಾಧಿಕಾರಿ ರವಿ ಬಿ.ಎಸ್, ಸಿಬ್ಬಂದಿಗಳಾದ ಬಾಲಕೃಷ್ಣ, ಗಿರೀಶ್, ಉದಯ್, ಸಿಜು, ಜಯಕುಮಾರ್ , ಜನಾರ್ದನ್, ಪ್ರವೀಣ್ ರೈ, ರಮೇಶ್, ಪ್ರವೀಣ್ ಕುಮಾರ್, ಭವಿತ್ ರೈ, ಸತೀಶ್ , ಸಂಪತ್, ದಿವಾಕರ್, ಚಾಲಕರಾದ ರಘುರಾಮ, ವಿಜಯೇಶ್ವರ, ಸತ್ಯಪ್ರಕಾಶ್, ಯೋಗೀಶ್ ಭಾಗವಹಿಸಿದ್ದರು .
ಈ ಪ್ರಕರಣ ಬೇಧಿಸಿದ ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ ಬೊರಸೆಯವರು ಪ್ರಶಂಸನಾ ಪತ್ರ ಹಾಗೂ ನಗದು ಬಹುಮಾನ ಘೋಷಿಸಿದ್ದಾರೆ.